ಕಿಮ್ಸ್‌ ಅನುದಾನ ಕಡಿತಕ್ಕೆ ಜೋಶಿ ಖಂಡನೆ

| Published : Mar 12 2024, 02:00 AM IST

ಸಾರಾಂಶ

ಮಹಾಮಾರಿ ಕೋವಿಡ್‌ ವೇಳೆ ಕಿಮ್ಸ್‌ ಸಿಬ್ಬಂದಿ ಅತ್ಯುತ್ತಮ ಕಾರ್ಯ ನಿರ್ವಹಣೆಯೊಂದಿಗೆ ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಗುಣಮಟ್ಟದ ಚಿಕಿತ್ಸೆ ನೀಡಿದ್ದಾರೆ.

ಹುಬ್ಬಳ್ಳಿ:

ಬಡವರ ಸಂಜೀವಿನಿ ಎಂದೇ ಪ್ರಖ್ಯಾತಿ ಪಡೆದ ಕಿಮ್ಸ್‌ಗೆ ರಾಜ್ಯ ಸರ್ಕಾರ ಅನುದಾನ ಕಡಿತಗೊಳಿಸಿರುವುದು ಖಂಡನಾರ್ಹ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಅವರು ಸೋಮವಾರ ನಗರದ ಕಿಮ್ಸ್‌ನಲ್ಲಿ ₹ 22 ಕೋಟಿ ವೆಚ್ಚದ 1.5 ಟೆಸ್ಲಾ ಎಂಆರ್‌ಐ ಮಷಿನ್‌ ಹಾಗೂ ಸ್ವರ್ಣ ಗ್ರೂಪ್‌ ಆಫ್‌ ಕಂಪನೀಸ್‌ ವತಿಯಿಂದ ನಿರ್ಮಿಸಿರುವ ಸ್ವರ್ಣ ಶಿಶುಧಾಮ ನವಜಾತ ಶಿಶು ತೀವ್ರ ನಿಗಾ ಘಟಕ ಉದ್ಘಾಟಿಸಿ ಮಾತನಾಡಿದರು.ಮಹಾಮಾರಿ ಕೋವಿಡ್‌ ವೇಳೆ ಕಿಮ್ಸ್‌ ಸಿಬ್ಬಂದಿ ಅತ್ಯುತ್ತಮ ಕಾರ್ಯ ನಿರ್ವಹಣೆಯೊಂದಿಗೆ ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಗುಣಮಟ್ಟದ ಚಿಕಿತ್ಸೆ ನೀಡಿದ್ದಾರೆ. ಇವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುವೆ ಎಂದರು.ಸರ್ಕಾರ ಬೆಂಗಳೂರು ಹಾಗೂ ಮೈಸೂರಿನ ಸರ್ಕಾರಿ ಆಸ್ಪತ್ರೆಗೆ ಆದ್ಯತೆ ನೀಡುತ್ತಿದೆಯೇ ಹೊರತು ಈ ಭಾಗದಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡುವ ಕಿಮ್ಸ್‌ಗೆ ಸಮರ್ಪಕ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಮೈಸೂರಿಗಿಂತಲೂ ಇಲ್ಲಿ ಹೆಚ್ಚಿನ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವುದನ್ನು ಸರ್ಕಾರ ತಿಳಿದುಕೊಳ್ಳಬೇಕು ಎಂದ ಅವರು, ಕೇಂದ್ರ ಸರ್ಕಾರದಿಂದ ಕಿಮ್ಸ್‌ಗೆ ನೂರಾರು ಕೋಟಿ ಅನುದಾನ ನೀಡುವ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಸ್ವರ್ಣ ಗ್ರೂಪ್‌ ಆಫ್‌ ಕಂಪನೀಸ್‌ ವತಿಯಿಂದ ₹ 1.5 ಕೋಟಿ ವೆಚ್ಚದಲ್ಲಿ ಕಿಮ್ಸ್‌ ಆವರಣದ ಮುಖ್ಯ ಕಟ್ಟಡದಲ್ಲಿ ಸ್ವರ್ಣ ಶಿಶು ಧಾಮ ನವಜಾತ ಶಿಶು ತೀವ್ರ ನಿಗಾ ಘಟಕ ನಿರ್ಮಿಸಿ ಹಸ್ತಾಂತರಿಸಿರುವುದು ಅಭಿನಂದನಾರ್ಹವಾಗಿದೆ. ಇಲ್ಲಿ ಶಿಶು ಪಾಲನೆಗೆ ಬೇಕಾದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಘಟಕದಲ್ಲಿ ಅಳವಡಿಸುವ ಮೂಲಕ ಸ್ವರ್ಣ ಗ್ರೂಪ್‌ ಆಫ್‌ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್‌.ವಿ. ಪ್ರಸಾದ ಅವರು ಬಡ ಮಕ್ಕಳ ಬಾಳಿಗೆ ಬೆಳಕು ನೀಡುವ ಕಾರ್ಯ ಮಾಡಿದ್ದಾರೆ ಎಂದರು.ಹಲವರು ಹಣ ಗಳಿಸುತ್ತಾರೆ. ಆದರೆ, ಗಳಿಸಿದ ಹಣವನ್ನು ಸಾಮಾಜಿಕ ಚಟುವಟಿಕೆಗಳಿಗೆ ಖರ್ಚು ಮಾಡಲು ಹಿಂದೇಟು ಹಾಕುವವರೇ ಹೆಚ್ಚಿದ್ದಾರೆ. ಆದರೆ, ವಿ.ಎಸ್.ವಿ. ಪ್ರಸಾದ ಹಾಗೂ ಅವರ ಕುಟುಂಬ ತಾವು ಗಳಿಸಿದ ಹಣದಲ್ಲಿ ಇಂತಹ ಸಮಾಜಸೇವೆ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.ಸ್ವರ್ಣ ಗ್ರೂಪ್‌ ಆಫ್‌ ಕಂಪನೀಸ್‌ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ. ಪ್ರಸಾದ ಮಾತನಾಡಿ, ನನ್ನ ಜೀವನದಲ್ಲಿ ಮಾಡಿರುವ ಸಾಮಾಜಿಕ ಸೇವೆಗಳಲ್ಲಿ ಇದು ಅತ್ಯುತ್ತಮ ಮತ್ತು ಅರ್ಥಪೂರ್ಣ ಕಾರ್ಯವಾಗಿದೆ. ಇಂದು ಭಾರತದಲ್ಲಿ ಶೇ. 12ರಿಂದ 15ರಷ್ಟು ನವಜಾತ ಶಿಶುಗಳು ಮರಣ ಹೊಂದುತ್ತಿವೆ. ಇಂತಹ ಮಕ್ಕಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ದೊರೆತರೆ ಮಕ್ಕಳ ಜೀವ ರಕ್ಷಣೆ ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಕಿಮ್ಸ್‌ನಲ್ಲಿ ನಮ್ಮ ತಂದೆಯವರ ಹೆಸರಿನಲ್ಲಿ ₹1.5 ಕೋಟಿ ವೆಚ್ಚದಲ್ಲಿ ಸ್ವರ್ಣ ಶಿಶುಧಾಮ ನವಜಾತ ಶಿಶು ತೀವ್ರ ನಿಗಾ ಘಟಕ ಉದ್ಘಾಟಿಸಿ ಕಿಮ್ಸ್‌ಗೆ ಹಸ್ತಾಂತರಿಸಲಾಗುತ್ತಿದೆ. ಬಡ ಮಕ್ಕಳಿಗೂ ಉತ್ತಮ ಚಿಕಿತ್ಸಾ ಸೌಲಭ್ಯ ದೊರೆಯಲಿ ಎಂಬುದು ನಮ್ಮ ಬಯಕೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು. ಈ ವೇಳೆ ಮಾಜಿ ಸಂಸದ ಐ.ಜಿ. ಸಂಸದ, ಪಾಲಿಕೆ ಮೇಯರ್‌ ವೀಣಾ ಬರದ್ವಾಡ, ಕಿಮ್ಸ್‌ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ, ಪ್ರಾಂಶುಪಾಲ ಡಾ. ಈಶ್ವರ ಹೊಸಮನಿ, ಡಿಎಚ್‌ಒ ಡಾ. ಶಶಿ ಪಾಟೀಲ ಸೇರಿದಂತೆ ಹಲವರಿದ್ದರು.