ಸಾರಾಂಶ
ಧಾರವಾಡ:
ಪ್ರಹ್ಲಾದ ಜೋಶಿ ಚುನಾವಣಾ ರಾಜಕೀಯ ಪ್ರವೇಶಿಸಿದ್ದು ಒಂದು ಆಕಸ್ಮಿಕ. ಒಂದು ಸಲ ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದು ಬಿಟ್ಟರೆ ಜೋಶಿ ಯಾವ ಚುನಾವಣೆಯಲ್ಲೂ ಅಭ್ಯರ್ಥಿಯಾಗಿರಲಿಲ್ಲ.1996, 1998 ಮತ್ತು 1999ರಲ್ಲಿ ಸತತವಾಗಿ ಮೂರು ಬಾರಿ ಬಿಜೆಪಿಯಿಂದ ಗೆದ್ದಿದ್ದ ವಿಜಯ ಸಂಕೇಶ್ವರ, ಕೇಂದ್ರ ಸಚಿವ ಅನಂತಕುಮಾರ ಜತೆಗೆ ಭಿನ್ನಾಭಿಪ್ರಾಯ ಹೊಂದಿ 2004ರ ಲೋಕಸಭಾ ಚುನಾವಣೆಗೆ ಸ್ವಲ್ಪ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2004ರ ಚುನಾವಣೆಗೆ ಹೊಸ ಅಭ್ಯರ್ಥಿಯನ್ನು ಹುಡುಕುವ ತುರ್ತು ಬಿಜೆಪಿಗಿತ್ತು. ಆಗತಾನೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಆಂದೋಲನದ ಮೂಲಕ ಪ್ರಸಿದ್ಧಿಗೆ ಬಂದಿದ್ದ ರಾಷ್ಟ್ರಧ್ವಜ ಗೌರವ ರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದ ಮತ್ತು ಆರ್‌ಎಸ್‌ಎಸ್ ಹಿನ್ನಲೆ ಹೊಂದಿದ್ದ ಪ್ರಹ್ಲಾದ ಜೋಶಿ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತು.
ಈದ್ಗಾ ಚಳವಳಿಯಲ್ಲಿ ಪ್ರಚಾರ ಪಡೆದಿದ್ದ ಜೋಶಿ, ಅಟಲ್ ಬಿಹಾರಿ ವಾಜಪೇಯಿ ಅಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಆಗಿನಿಂದ ಈಗಿನ ವರೆಗೆ ಅವರು ಹಿಂದೆ ನೋಡಿಲ್ಲ. ಜೋಶಿ ಅವರ ಗುರು ಅನಂತಕುಮಾರ ಸಂಸತ್ತಿನಲ್ಲಿ ಜೋಶಿ ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಅನಂತಕುಮಾರರ ಅಕಾಲಿಕ ಮರಣ ಜೋಶಿ ಅವರಿಗೆ ಕೇಂದ್ರ ಸಚಿವ ಸ್ಥಾನ ದೊರಕಿಸುವಂತಾಯಿತು. ತಮಗೆ ಸಿಕ್ಕ ಎಲ್ಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರದ ಬೆಳೆವಣಿಗೆ ಜೊತೆಗೆ ತಮ್ಮ ಪ್ರಭಾವವೂ ಬೆಳೆಯುವಂತೆ ನೋಡಿಕೊಂಡ ಜೋಶಿ ಅವರಿಗೆ ಐದನೆ ಬಾರಿ ಜಯಲಕ್ಷ್ಮಿ ಒಲಿದಿದ್ದಾಳೆ.ವಿನೋದ ಅಸೂಟಿ ಬ್ರೇಕ್:ಧಾರವಾಡ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ಸಿನಿಂದ ವಿನೋದ ಅಸೂಟಿಗೆ ಟಿಕೆಟ್ ಫೈನಲ್ ಮಾಡಿದಾಗ, ಈ ಹುಡುಗನಿಂದ ಏನು ಸಾಧ್ಯ ಎಂದಿದ್ದ ಕ್ಷೇತ್ರದ ಜನರಿಗೆ ಅಸೂಟಿ ಬರೋಬ್ಬರಿ 6,18,907 ಮತ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ಸ್ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಯವ ಮುಖಂಡ ಅಸೂಟಿ ಈ ಚುನಾವಣೆಯಲ್ಲಿ ಗೆಲವು ಸಾಧಿಸದೇ ಇದ್ದರೂ ಜೋಶಿ ಅವರ ಗೆಲುವಿನ ಅಂತರ ಕಡಿಮೆ ಮಾಡಿದ್ದಾರೆ. 2019ರ ಚುನಾವಣೆಯಲ್ಲಿ ಜೋಶಿ ವಿರುದ್ಧ ಸ್ಪರ್ಧಿಸಿದ್ದ ಈಗಿನ ಶಾಸಕ ವಿನಯ ಕುಲಕರ್ಣಿ ಸ್ಪರ್ಧಿಸಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದರು. ಆದರೆ, ಈ ಚುನಾವಣೆಯಲ್ಲಿ ಜೋಶಿ ಗೆಲುವಿನ ಅಂತರ 97,324ಕ್ಕೆ ಸೀಮಿತವಾಯಿತು. ಬಿಜೆಪಿಯ ಜೋಶಿ ಅವರು ಹು-ಧಾ ಪಶ್ಚಿಮ, ಕೇಂದ್ರ, ಕುಂದಗೋಳ ಹಾಗೂ ಕಲಘಟಗಿಯಲ್ಲಿ ಹೆಚ್ಚಿನ ಅಂತರ ಕಂಡರೂ ಕಾಂಗ್ರೆಸ್ಸಿನ ಅಸೂಟಿ ನವಲಗುಂದಲ್ಲಿ 17212, ಹು-ಧಾ ಪೂರ್ವದಲ್ಲಿ 26,776, ಶಿಗ್ಗಾಂವಿ ಕ್ಷೇತ್ರದಲ್ಲಿ 8598 ಮತಗಳ ಅಂತರ ಕಾಯ್ದುಕೊಂಡರು.