ಸಾರಾಂಶ
ಎಲ್ಲ ಸಮುದಾಯಗಳನ್ನು ಜೋಶಿ ಅವರು ಪ್ರೀತಿಯಿಂದ ನೋಡಿದವರು. ಅದಕ್ಕಾಗಿಯೇ ಎಲ್ಲ ಸಮಾಜದ ಮುಖಂಡರು ಒಗ್ಗಟ್ಟಾಗಿ ನಾಮಪತ್ರ ಸಲ್ಲಿಕೆಗೆ ಬಂದಿದ್ದಾರೆ.
ಧಾರವಾಡ:
ಕ್ಷೇತ್ರದಲ್ಲಿ ಪ್ರಹ್ಲಾದ ಜೋಶಿ ಅವರ ಬಗ್ಗೆ ಇದ್ದ ಉಹಾಪೋಹಗಳಿಗೆ ನಾಮಪತ್ರ ಸಲ್ಲಿಕೆ ವೇಳೆ ಆಗಮಿಸಿದ ಸಾವಿರಾರು ಜನಸ್ತೋಮವೇ ಸಾಕ್ಷಿ. ಕ್ಷೇತ್ರದ ಈ ಹಿಂದಿನ ಎಲ್ಲ ದಾಖಲೆ ಮುರಿದು ಜೋಶಿ ಅವರು ಮೂರುವರೆ ಲಕ್ಷ ಮತಗಳ ಅಂತರದಿಂದ ಜಯ ಸಾಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.ಪ್ರಹ್ಲಾದ ಜೋಶಿ ಅವರ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸಮುದಾಯಗಳನ್ನು ಜೋಶಿ ಅವರು ಪ್ರೀತಿಯಿಂದ ನೋಡಿದವರು. ಅದಕ್ಕಾಗಿಯೇ ಎಲ್ಲ ಸಮಾಜದ ಮುಖಂಡರು ಒಗ್ಗಟ್ಟಾಗಿ ನಾಮಪತ್ರ ಸಲ್ಲಿಕೆಗೆ ಬಂದಿದ್ದಾರೆ. ಇದು ದೇಶದ ಭವಿಷ್ಯದ ಚುನಾವಣೆ. ಈ ಹಿನ್ನೆಲೆಯಲ್ಲಿ ಮತದಾರರು ತಮ್ಮ ಭವಿಷ್ಯದ ದೃಷ್ಟಿಯಿಂದ ಬಿಜೆಪಿಗೆ ಬೆಂಬಲಿಸಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ ಎಂಬ ಇಂಟಲಿಜನ್ಸಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ಕಾಂಗ್ರೆಸ್ ಇಂಟಲಿಜನ್ಸಿ ಇರಬಹುದು. ಜೋಶಿಯವರ ನಾಮಪತ್ರವೇ ರಾಜ್ಯದ ಚುನಾವಣಾ ಫಲಿತಾಂಶದ ದಿಕ್ಸೂಚಿ. ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತದೆ. ಹಾಗೆಯೇ, ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.