ಸಾರಾಂಶ
ಚುನಾವಣಾ ಅಭಿಯಾನ
ಕನ್ನಡಪ್ರಭ ವಾರ್ತೆ ಉಡುಪಿ
ಅಭ್ಯರ್ಥಿಯ ಆಯ್ಕೆಯಲ್ಲೇ ಕಾಂಗ್ರೆಸ್ ಎಡವಿದ್ದು, ತಮ್ಮ ಪಕ್ಷದಿಂದಲೇ ಉಚ್ಚಾಟನೆಗೊಂಡಿರುವವರನ್ನು ಇತರ ನಾಯಕರ ವಿರೋಧದ ನಡುವೆಯೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವ ದುಃಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ವಿಷಾದಿಸಿದರು.ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಚುನಾವಣಾ ಅಭಿಯಾನ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಮತಯಾಚನೆಯ ಸಂದರ್ಭದಲ್ಲಿ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಹಿತ ಯಾವುದೇ ನಾಯಕರ ಹೆಸರನ್ನು ಹೇಳದೇ ಪಕ್ಷೇತರ ಅಭ್ಯರ್ಥಿಯಂತೆ ಮತ ಯಾಚಿಸುತ್ತಿದ್ದಾರೆ. ಕೇವಲ ಸ್ವಾರ್ಥ ಸಾಧನೆಗಾಗಿ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾ ಹೆಗ್ಡೆಯವರು ತನ್ನ ಬೆಂಬಲಿಗರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.ಖುದ್ದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಚುನಾವಣಾ ಪ್ರಚಾರಕ್ಕೆ ಜಿಲ್ಲೆಗೆ ಒಮ್ಮೆಯೂ ಬಾರದಿರುವುದು ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವಿನ ಭರವಸೆಯೇ ಇಲ್ಲ ಎಂಬುದನ್ನು ತೋರಿಸುತ್ತಿದೆ ಎಂದವರು ಟೀಕಿಸಿದರು.
ಕಳೆದ ಚುನಾವಣೆಯ ಸಂದರ್ಭದಲ್ಲಿ ಮೋದಿ ಅವರು ಸ್ವಿಸ್ ಬ್ಯಾಂಕ್‌ನಿಂದ ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ಹಾಕುವುದಾಗಿ ಹೇಳಿದ್ದರು ಎಂದು ಹೆಗ್ಡೆ ಸುಳ್ಳು ಹೇಳುತ್ತಿದ್ದಾರೆ. ತಮ್ಮ ಹೇಳಿಕೆಗೆ ಅವರು ದಾಖಲೆಯನ್ನು ತೋರಿಸಲಿ ಎಂದು ಕಿಶೋರ್ ಕುಮಾರ್ ಸವಾಲು ಹಾಕಿದರು.ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಚುನಾವಣಾ ಅಭಿಯಾನದ ವಿವಿಧ ಆಯಾಮಗಳ ಪ್ರಾಮುಖ್ಯತೆಯನ್ನು ವಿವರಿಸಿದರು.
ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಪ್ರ. ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಪ್ರಮುಖರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ ಕಟಪಾಡಿ, ನಳಿನಿ ಪ್ರದೀಪ್ ರಾವ್, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಹಾಗೂ ವಿವಿಧ ಸ್ತರದ ಪದಾಧಿಕಾರಿಗಳು ಇದ್ದರು.