ಸಾರಾಂಶ
ಧಾರವಾಡ:
ಪತ್ರಿಕಾ ಕ್ಷೇತ್ರ ಇಂದು ಕವಲುದಾರಿಯ ಜತೆಗೆ ಅನೇಕ ಸವಾಲು ಎದುರಿಸುತ್ತಿದೆ. ಇಂತಹ ಸಂಕ್ರಮಣ ಕಾಲಘಟ್ಟದಲ್ಲಿ ಯುವ ಸಮೂಹಕ್ಕೆ ಪತ್ರಿಕೆ ಓದುವ, ಸಂಸ್ಕೃತಿ ಬೆಳೆಸುವ ಅಗತ್ಯತೆ ಹೆಚ್ಚಿದೆ ಎಂದು ನಿವೃತ್ತ ಜಿಲ್ಲಾಧಿಕಾರಿ ವ್ಯಾಸ ದೇಶಪಾಂಡೆ ಆಶಯ ವ್ಯಕ್ತಪಡಿಸಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ್ ಪುಟ್ಟಪ್ಪ ಸಭಾಂಗಣದಲ್ಲಿ ಶಿವಮೊಗ್ಗದ ಮಿಂಚು ಶ್ರಿನಿವಾಸ ಕುಟುಂಬ, ಧಾರವಾಡದ ಸಾಕಾರ-ಸಾಂಸ್ಕೃತಿಕ ಹಾಗೂ ಮಾಧ್ಯಮ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಲಾಗಿದ್ದ ಮಿಂಚು ಶ್ರೀನಿವಾಸ ಪ್ರಶಸ್ತಿ ಪ್ರದಾನದಲ್ಲಿ ಮಾತನಾಡಿದ ಅವರು, ಬದಲಾದ, ಬದಲಾಗುತ್ತಿರುವ ಸಂದರ್ಭದಲ್ಲಿ ಪತ್ರಿಕಾ ಭಾಷೆ, ಸಾಹಿತ್ಯ ಹಾಗೂ ರಂಗಭೂಮಿಯ ಭಾಷೆ ಕೂಡ ಬದಲಾಗುತ್ತಿದೆ. ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸಮಷ್ಟಿ ಚಿಂತನೆಗಳು ನಡೆಯಬೇಕು ಎಂದರು.
ಹಿರಿಯ ಪತ್ರಕರ್ತರಾಗಿದ್ದ ಖಾದ್ರಿ ಶಾಮಣ್ಣ, ಟಿ.ಎಸ್. ರಾಮಚಂದ್ರರಾವ್ ಸೇರಿದಂತೆ ಆ ತಲೆಮಾರಿನ ಪತ್ರಕರ್ತರು ಬಳಸುತ್ತಿದ್ದ ಭಾಷೆಗೂ, ಆನಂತರ ಬಂದ ಲಂಕೇಶ್, ರವಿ ಬೆಳಗೆರೆಯವರು ಬಳಸುತ್ತಿದ್ದ ಭಾಷೆಗೂ ಅಜಗಜಾಂತರ ವ್ಯತ್ಯಾಸವಿದೆ. ಹಾಗೆಯೇ ಸಾಹಿತ್ಯ, ರಂಗಭೂಮಿಯ ಪರಿಭಾಷೆ ಕೂಡ ಬದಲಾಗುತ್ತಿರುವುದನ್ನು ಗಮನಿಸುತ್ತಲೇ ಇದ್ದೇವೆ. ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಲೇ, ಈ ಕ್ಷೇತ್ರಗಳಲ್ಲಿ ಭವಿಷ್ಯವನ್ನು ರೂಪಿಸಬೇಕಿದೆ ಎಂದರು.ಇಂದು ಪ್ರಪಂಚ ತೀರಾ ಸಣ್ಣದಾಗಿದೆ. ವಿಷಯಗಳು ಹಾಗೂ ಮಾಹಿತಿಗಳ ಭರಪೂರ ಸಂಗ್ರಹವೇ ಅಂಗೈಯಲ್ಲಿದೆ. ಇಲ್ಲಿ ಭಾಷೆ ಎಂಬುದು ಒಂದು ವಾಹಕವಾಗಿ ಉಳಿದಿದೆಯೇ ಹೊರತು, ಭಾಷೆ ಅಡ್ಡಿಯಾಗಿಲ್ಲ ಎಂದ ಅವರು, ಭಾಷೆಯ ಮೂಲ ಸೆಲೆಯನ್ನು ಉಳಿಸಿಕೊಂಡೇ ಪತ್ರಿಕಾ ಕ್ಷೇತ್ರವನ್ನು ಕಟ್ಟಿದವರು ಮಿಂಚು ಶ್ರೀನಿವಾಸ್‌ರವರು ಎಂದು ಬಣ್ಣಿಸಿದರು.
ಸಮಾಜದ ಸಮೃದ್ಧಿ ಹಾಗೂ ಸ್ವಾಸ್ಥ್ಯಕ್ಕೆ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಪತ್ರಿಕಾರಂಗಗಳು ಅತ್ಯಗತ್ಯ ಎಂದ ಅವರು, ಮಲೆನಾಡಿನ ಶ್ರೇಷ್ಠ ಕವಿ ಕುವೆಂಪುರವರ ಶಿವಮೊಗ್ಗ ಜಿಲ್ಲೆಯಿಂದ, ವರಕವಿ ಬೇಂದ್ರೆಯವರ ಈ ಅರೆಮಲೆನಾಡಿನ ಧಾರವಾಡದಲ್ಲಿ ಶ್ರೇಷ್ಠ ಪತ್ರಕರ್ತರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ನಿಜಕ್ಕೂ ಕೂಡ ಸಮಗ್ರತೆಯ ಸಂಕೇತ ಎಂದರು.ಮಿಂಚು ಶ್ರೀನಿವಾಸ ಪ್ರಶಸ್ತಿ ಸ್ವೀಕರಿಸಿದ ಚಿಕ್ಕಮಗಳೂರಿನ ಹಿರಿಯ ಪತ್ರಕರ್ತರಾದ ಗಿರಿಜಾ ಶಂಕರ್, ಪತ್ರಿಕಾ ರಂಗ, ಪತ್ರಿಕೋದ್ಯಮವಾಗಿ ಬದಲಾದ ನಂತರ ಅನೇಕ ಸವಾಲುಗಳನ್ನು ಒಳಗೆ ಮತ್ತು ಹೊರಗೆ ಎರಡೂ ಕಡೆಗಳಲ್ಲಿ ಎದುರಿಸುತ್ತಿದೆ. ಆದಾಗ್ಯೂ ಸ್ಥಳೀಯ ಪತ್ರಿಕೆಗಳ ಅಗತ್ಯವನ್ನು ಎಂದೂ ಅಲ್ಲಗಳೆಯಲು ಆಗುವುದಿಲ್ಲ. ಸಮಾಜಕ್ಕೆ ಈ ಪತ್ರಿಕೆಗಳ ಅಗತ್ಯ-ಅನಿವಾರ್ಯವಿದೆ ಎಂದು ಹೇಳಿದರು.
ಸಿ.ಆರ್. ಭಟ್ ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಶಸ್ತಿ ಸ್ವೀಕರಿಸಿದ ವಿದುಷಿ ಸುಮಂಗಲಾ ರತ್ನಾಕರರಾವ್, ಎಲ್. ಜೋಶಿ ರಂಗ ಪುರಸ್ಕಾರ ಪಡೆದ ಮಂಜುನಾಥ ಹೆಗಡೆ ಮಾತನಾಡಿದರು. ಶಿವಮೊಗ್ಗದ ಎನ್. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಾಕಾರದ ಗೌರವಾಧ್ಯಕ್ಷ ನಾಗರತ್ನ ಹಡಗಲಿ, ಡಾ. ಶುಭದಾ ಇದ್ದರು. ಇಲ್ಲಿಯ ರತಿಕಾ ನೃತ್ಯ ನಿಕೇತನ ಕಲಾವಿದರಿಂದ ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶನ ನಡೆಯಿತು.