ಪತ್ರಿಕಾ ವೃತ್ತಿ ಆಶಯ, ಬದ್ಧತೆ ಬದಲಾಗಿಲ್ಲ: ಕೆ.ವಿ.ಪ್ರಭಾಕರ್

| Published : Feb 05 2024, 01:46 AM IST

ಪತ್ರಿಕಾ ವೃತ್ತಿ ಆಶಯ, ಬದ್ಧತೆ ಬದಲಾಗಿಲ್ಲ: ಕೆ.ವಿ.ಪ್ರಭಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಈಗ ಜಾಹೀರಾತು ತರುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿ ಆಗಿದೆ. ತನಿಖಾ ಪತ್ರಿಕೋದ್ಯಮ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದ ಹೊಣೆ ಹಿಂದಕ್ಕೆ ಸರಿದಿದೆ. ಸ್ವಾತಂತ್ರ‍್ಯ ನಂತರದ ಭಾರತೀಯ ಪತ್ರಿಕೋದ್ಯಮ ಅಭಿವೃದ್ಧಿ ಮತ್ತು ಜನಮುಖಿ ಪತ್ರಿಕೋದ್ಯಮವನ್ನು ಪ್ರಥಮ ಆದ್ಯತೆಯಾಗಿಸಿತ್ತು. ಈಗ ಬದಲಾದ ಸನ್ನಿವೇಶದಲ್ಲಿ, ಜವಾಬ್ದಾರಿ ಮತ್ತು ಹೊಣೆಗಾರಿಕೆಗಳೂ ಬದಲಾಗುತ್ತಿವೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಚ್ಚುಮೊಳೆಯಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ವರೆಗೂ ಪತ್ರಿಕಾ ವೃತ್ತಿ ತಾಂತ್ರಿಕವಾಗಿ ಬಹಳ ಬದಲಾವಣೆ ಕಂಡಿದ್ದರೂ ಮೂಲ ಆಶಯ ಮತ್ತು ಬದ್ಧತೆ ಮಾತ್ರ ಬದಲಾಗಿಲ್ಲ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಕಾರ್ಯನಿರತ ಪತ್ರಕರ್ತರ ಸಂಘದ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ''''''''ಸರ್ಕಾರ ಮತ್ತು ಮಾಧ್ಯಮ'''''''' ಕುರಿತ ಸಂವಾದ ಗೋಷ್ಠಿ ಉದ್ಘಾಟಿಸಿ ಮಾತನಾಡಿ ಈಗ ಅಧಿಕಾರಸ್ಥರ ಮತ್ತು ಪತ್ರಕರ್ತರ ನಡುವೆ ಸಂಪರ್ಕ ಅನಿವಾರ್ಯ ಅನ್ನುವ ಸ್ಥಿತಿ ಬಂದಿದೆ. ಮೊದಲೆಲ್ಲಾ ಪತ್ರಕರ್ತರು ಅಧಿಕಾರಸ್ಥರ ಜತೆ ನಿಕಟ ಸಂಪರ್ಕ ಹೊಂದುವುದಕ್ಕೆ ಬಹಳ ಮುಜುಗರ ಅನುಭವಿಸುತ್ತಿದ್ದರು ಎಂದು ವಿವರಿಸಿದರು.

ಈಗ ಜಾಹೀರಾತು ತರುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿ ಆಗಿದೆ. ತನಿಖಾ ಪತ್ರಿಕೋದ್ಯಮ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದ ಹೊಣೆ ಹಿಂದಕ್ಕೆ ಸರಿದಿದೆ. ಸ್ವಾತಂತ್ರ‍್ಯ ನಂತರದ ಭಾರತೀಯ ಪತ್ರಿಕೋದ್ಯಮ ಅಭಿವೃದ್ಧಿ ಮತ್ತು ಜನಮುಖಿ ಪತ್ರಿಕೋದ್ಯಮವನ್ನು ಪ್ರಥಮ ಆದ್ಯತೆಯಾಗಿಸಿತ್ತು. ಈಗ ಬದಲಾದ ಸನ್ನಿವೇಶದಲ್ಲಿ, ಜವಾಬ್ದಾರಿ ಮತ್ತು ಹೊಣೆಗಾರಿಕೆಗಳೂ ಬದಲಾಗುತ್ತಿವೆ. ಪತ್ರಕರ್ತರು ಮೊದಲು ತಮ್ಮ ಮತ್ತು ಕುಟುಂಬದ ಆರೋಗ್ಯ, ಯೋಗಕ್ಷೇಮದ ಕಡೆಗೂ ಗಮನ ಹರಿಸಬೇಕು. ಕೆಲಸದ ಒತ್ತಡದ ನಡುವೆಯೂ ಈ ದಿಕ್ಕಿನಲ್ಲೂ ಗಮನ ಹರಿಸಿ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಮತ್ತು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪತ್ರಕರ್ತ ಸಮುದಾಯದ ವೃತ್ತಿಪರತೆ ಮತ್ತು ಪ್ರಗತಿಗೆ ನೀಡಿದ ನೆರವುಗಳ ಪಟ್ಟಿ ಮಾಡಿದ ಕೆ.ವಿ.ಪ್ರಭಾಕರ್ ಅವರು, ಈ ಬಾರಿಯ ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಒದಗಿಸುವ ಕುರಿತು ಗಂಭೀರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಪತ್ರಿಕಾ ವಿತರಕರನ್ನು ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ಮುಖ್ಯಮಂತ್ರಿಯವರಿಗೆ ಅಭಿನಂದಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಸೇರಿ ಸಂಘದ ಹಲವು ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

.........