ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪತ್ರಿಕೋದ್ಯಮ ವಿದ್ಯಾರ್ಥಿಗಳು ನೈತಿಕತೆಯನ್ನು ಎಂದಿಗೂ ಮರೆಯದೆ ಸತ್ಯದ ಪರವಾಗಿಯೇ ಕಾರ್ಯನಿರ್ವಹಿಸುವ ಪಣವನ್ನು ತೆಗೆದುಕೊಳ್ಳಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಿರುವ ಎರಡು ದಿನಗಳ ಜರ್ನೋತ್ರಿ-24 ಮಾನಸ ಮಾಧ್ಯಮ ಹಬ್ಬಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ ಮುಗಿಸಿದ ಬಳಿಕ ಯಾವುದೋ ಸುದ್ದಿ ವಾಹಿನಿಗೆ ಸೇರುವುದು ಸರಿ. ಆದರೆ, ಅಲ್ಲಿ ಸೇರಿದ ನಂತರ ಯಾವ ರೀತಿಯ ಸುದ್ದಿಯನ್ನು ಸಮಾಜಕ್ಕೆ ನೀಡುತ್ತೇವೆ ಎನ್ನುವುದು ಮುಖ್ಯ. ಏಕೆಂದರೆ ಈಗ ಹಣ ಮತ್ತು ಅಧಿಕಾರ ಮಾಧ್ಯಮವನ್ನು ಕೂಡ ನಿಯಂತ್ರಿಸಲು ಸಾಧ್ಯವಿರುವ ಈ ಕಾಲ ಘಟ್ಟದಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಗಳ ನಿಲುವು ಜನರ ಪರವಾಗಿ ನಿಲ್ಲುವ, ಧ್ವನಿ ಎತ್ತಬೇಕು ಎಂದರು.ಪತ್ರಿಕೋದ್ಯಮದ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ವಿದ್ಯಾರ್ಥಿಗಳು ಸಮಾಜ ಸ್ನೇಹಿಯಾಗಿ ಸಾರ್ವಜನಿಕ ಪರವಾಗಿ ಕಾರ್ಯ ನಿರ್ವಹಿಸುವುದನ್ನು ಅರಿಯಬೇಕು. ಕಾಲೇಜುಗಳಲ್ಲಿ ಕಲಿತದ್ದನ್ನು ಮಾಧ್ಯಮಕ್ಕೆ ಸೇರಿದ ನಂತರ ಮರೆತು ಹೋಗುವ ಅಥವಾ ಬಿಟ್ಟು ಬಿಡುವ ಪ್ರಸಂಗಗಳೇ ಹೆಚ್ಚು ಎಂದು ಅವರು ಹೇಳಿದರು.
ಇಂದು ಪ್ರಬಲವಾಗಿ ಪ್ರಪಂಚವನ್ನು ಆಳುತ್ತಿರುವುದು ಸಾಮಾಜಿಕ ಮಾಧ್ಯಮ. ವಾಟ್ಸಾಪ್, ಫೇಸ್ ಬುಕ್, ಇನ್ ಸ್ಟಾಗ್ರಾಂ, ಎಕ್ಸ್ನಂತಹ ಜಾಲತಾಣಗಳು ಇಲ್ಲವೆಂದರೆ ಮನುಷ್ಯನ ಅಸ್ತಿತ್ವೇ ಇಲ್ಲ ಎನ್ನುವಂತಾಗಿದೆ ಎಂದರು.ಈಗ ಮಾಧ್ಯಮ ವಿಕೇಂದ್ರಿತಗೊಂಡಿದೆ. ಪ್ರತಿಯೊಬ್ಬ ವ್ಯಕ್ತಿಯು ಮುಕ್ತವಾಗಿ ತನ್ನ ಆಲೋಚನೆಯನ್ನು ಅಭಿವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮ ಅವಕಾಶ ಕಲ್ಪಿಸಿದೆ. ಯಾರು ಏನನ್ನು ಬೇಕಾದರೂ ಹಂಚಿಕೊಳ್ಳಬಹುದು, ಹೇಳಬಹದು ಎನ್ನವಷ್ಟು ಸ್ವಾತಂತ್ರ್ಯ ನಿರ್ಮಿಸಿದೆ. ಆದರೆ, ಈ ನಿಯಂತ್ರಣವೇ ಇಲ್ಲದ ಸಂಪೂರ್ಣ ಸ್ವಾತಂತ್ರ್ಯದಿಂದ ಅನಾಹುತ ಸಂಭವಿಸುತ್ತಿದೆ ಎಂದು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ಮಾಧ್ಯಮ ಅಕಾಡೆಮಿ ಮತ್ತು ಮಾಧ್ಯಮದ ನಡುವೆ ದೊಡ್ಡ ಅಂತರವಿದೆ. ಅಕಾಡೆಮಿ ಬರಿ ಪ್ರಶಸ್ತಿ ಮತ್ತು ಪ್ರಕಾಶನಕ್ಕೆ ಸೀಮಿತವಾಗಿದೆ. ಅದನ್ನು ಶೈಕ್ಷಣಿಕವಾಗಿಯೂ ತೊಡಗಿಸಿಕೊಳ್ಳುವಂತೆ ಶ್ರಮವಹಿಸುತ್ತೇನೆ ಎಂದರು.ಯುವ ಮಾಧ್ಯಮ ಕಲಿಕಾರ್ಥಿಗಳು ಉತ್ತಮ ಕೌಶಲ ರೂಪಿಸಿಕೊಳ್ಳಬೇಕು. ಶ್ರಮ ಕುತೂಹಲ, ಸಮರ್ಪಣಾ ಮನೋಭಾವದಿಂದ ಪತ್ರಿಕಾ ಕ್ಷೇತ್ರದಲ್ಲಿ ಸಾಧಿಸಿ ತಾರಾ ಪತ್ರಕರ್ತರಾಗಿ ಮಿಂಚಬೇಕು ಎಂದು ಅವರು ಹೇಳಿದರು.
ಪ್ರಸ್ತುತ ಪತ್ರಕರ್ತರು ಆತ್ಮವಲೋಕನ ಮಾಡಿಕೊಳ್ಳಬೇಕು. ನೈತಿಕತೆ ಪ್ರಾಮಾಣಿಕತೆ ಸೇರಿದಂತೆ ಪತ್ರಿಕೋದ್ಯಮದ ಎಲ್ಲಾ ಮೂಲಮಂತ್ರವನ್ನು ಪುನಃ ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಮಾಧ್ಯಮ ಅಕಾಡೆಮಿ ಹಾಗೂ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳ ಚಟುವಟಿಕೆಗಳು ನಿತ್ಯೋತ್ಸವ ಕೇಂದ್ರಗಳಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕುಶಲ್ಕುಮಾರ್, ಹಿರಿಯ ಪತ್ರಕರ್ತರಾದ ಆರ್.ಪಿ. ಜಗದೀಶ್, ದ.ಕೋ.ಹಳ್ಳಿ ಚಂದ್ರಶೇಖರ್, ಶಾಂತಲಾ ಧರ್ಮರಾಜ್, ಪ್ರೀತಿ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್. ಸಪ್ನಾ ಮಾತನಾಡಿ, ಮಾಧ್ಯಮ ಹಬ್ಬಗಳು ಮಾಧ್ಯಮ ಕಲಿಕಾರ್ಥಿಗಳಲ್ಲಿ ತಮ್ಮ ಕ್ಷೇತ್ರಗದ ಕಡೆಗಿನ ಜ್ಞಾನ ಮತ್ತು ಉತ್ಕಟತೆ ಹೆಚ್ಚಿಸುತ್ತದೆ. ಕಲಿಕಾ ಹಂತದಲ್ಲೇ ಮುಂಬರುವ ಸವಾಲುಗಳನ್ನು ಎದುರಿಸುವ ಕ್ಷಮತೆ ಬೆಳೆಸಿಕೊಂಡು ಮುನ್ನಗ್ಗಬೇಕು ಎಂದು ಹೇಳಿದರು.ವಿಭಾಗದ ಎಲ್ಲಾ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಇದ್ದರು.