ಸಾರಾಂಶ
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ದಿ.ಮನೋಹರ ಪ್ರಸಾದ್ ಸಂಸ್ಮರಣಾ ಕಾರ್ಯಕ್ರಮ ಶನಿವಾರ ಬೆಳಗ್ಗೆ ನಗರದ ಪತ್ರಿಕಾ ಭವನದಲ್ಲಿ ನಡೆಯಿತು. ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಕಾರ್ಯಕ್ರಮ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ದಿ.ಮನೋಹರ ಪ್ರಸಾದ್ ಸಂಸ್ಮರಣಾ ಕಾರ್ಯಕ್ರಮ ಶನಿವಾರ ಬೆಳಗ್ಗೆ ನಗರದ ಪತ್ರಿಕಾ ಭವನದಲ್ಲಿ ನಡೆಯಿತು. ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಕಾರ್ಯಕ್ರಮ ಉದ್ಘಾಟಿಸಿ, ಮನೋಹರ್ ಪ್ರಸಾದ್ ನಾಡು ಕಂಡ ಅದ್ಭುತ ಪತ್ರಕರ್ತ. ಅಪಾರವಾದ ಜ್ಞಾನ ಭಂಡಾರ ಅವರಲ್ಲಿತ್ತು. ಅವರ ನೆನಪಿನಲ್ಲಿ ಹಿರಿಯ ಪತ್ರಕರ್ತ ನಂದಕುಮಾರ್ ಅವರು ಮನೋಹರ್ ಪ್ರಸಾದ್ ಬರೆದಿರುವ “ನಮ್ಮೂರು” ಲೇಖನ ಸರಣಿಯ ಭಾಷಾಂತರ ಕಾರ್ಯಕ್ಕೆ ಇಳಿದಿರುವುದು ಖುಷಿಯ ವಿಚಾರ ಎಂದರು.ನಂದಕುಮಾರ್ ಅವರು ಮನೋಹರ್ ಪ್ರಸಾದ್ ಜತೆಗಿನ ಸ್ನೇಹವನ್ನು ಮೆಲುಕು ಹಾಕಿದರು. ಮಾಜಿ ಎಂಎಲ್‌ಸಿ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಮನೋಹರ್ ಪ್ರಸಾದ್ ಪತ್ರಕರ್ತನ ಇಮೇಜ್ ಬದಲಿಸಿ ಸಿನಿಮಾ ಹೀರೋ ಥರ ಬದುಕಿದ್ದವರು. ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ರಾಜಕೀಯ ಎಲ್ಲ ಕ್ಷೇತ್ರಗಳಲ್ಲಿ ಕೈಯಾಡಿಸಿದವರು. ಅವರ ಬದುಕು ಇಂದಿನ ಪತ್ರಕರ್ತರಿಗೆ ಮಾದರಿ ಎಂದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ನಿರ್ದೇಶಕ ಖಾದರ್ ಷಾ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಜಗನ್ನಾಥ ಶೆಟ್ಟಿ ಬಾಳ, ಸಚಿತಾ ನಂದಗೋಪಾಲ್, ಮಾಧವ ಸುವರ್ಣ ಭಾಗವಹಿಸಿದ್ದರು. ಹಿರಿಯ ಪತ್ರಕರ್ತ ಭಾಸ್ಕರ್ ರೈ ಕಟ್ಟ ನಿರೂಪಿಸಿದರು.