ಸಾರಾಂಶ
ಶಿರಸಿ:
ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯಿಂದ ನೀಡಲಾಗುವ ಕೆ. ಶಾಮರಾವ್ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ಸಿದ್ದಾಪುರದ ನಾಗರಾಜ ಭಟ್ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು.ಇಲ್ಲಿಯ ಟಿಆರ್‌ಸಿ ಬ್ಯಾಂಕ್ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ, ಹಿಂದಿನಿಂದಲೂ ಜಿಲ್ಲೆಯ ಪತ್ರಕರ್ತರು ಪ್ರಭಾವಿ ಲೇಖನದ ಮೂಲಕ ಸಮಾಜದ ತಪ್ಪುಗಳನ್ನು ತಿಳಿಸುತ್ತಿದ್ದರು. ಪತ್ರಕರ್ತನೇ ತಪ್ಪು ಮಾಡಿದರೆ ಸಮಾಜ ತಿದ್ದುವವರು ಯಾರು ಎಂಬ ಪ್ರಶ್ನೆಯೂ ಬರುತ್ತದೆ. ಸಮಾಜದ ಮೂರು ಅಂಗಗಳನ್ನು ತಿದ್ದಬೇಕಾದುದು ಪತ್ರಿಕಾ ರಂಗ. ಇಂದು ಒಬ್ಬ ರಾಜಕಾರಣಿ ರಾಜಕಾರಣ, ಅಧಿಕಾರದ ಬಗ್ಗೆ ಚಿಂತಿಸಿದರೆ ಬುದ್ಧಿ ಜೀವಿ ಸಮಾಜದ ಒಳಿತನ್ನು ಚಿಂತನೆ ಮಾಡುತ್ತಾನೆ. ಪತ್ರಕರ್ತ ಸಮಾಜದ ಚಿಂತನೆ ಮಾಡುವವರ ಸಾಲಿನಲ್ಲಿ ನಿಲ್ಲುತ್ತಾನೆ ಎಂದರು.
ಪತ್ರಕರ್ತ ನಾಗರಾಜ ಇಳೆಗುಂಡಿ ಮಾತನಾಡಿ, ಸವಾಲು ಎಲ್ಲ ರಂಗಕ್ಕೆ ಇದ್ದಂತೆ ಪತ್ರಿಕಾ ರಂಗದಲ್ಲಿಯೂ ಇದೆ. ಪತ್ರಿಕಾ ರಂಗಕ್ಕೆ ಸವಾಲು ಎದುರಿಸಿ ಮೇಲೇಳುವ ಸಾಮರ್ಥ್ಯವಿದೆ ಎಂದರು.ಸಮಾಜ ಸೇವಕ ಅನಂತಮೂರ್ತಿ ಹೆಗಡೆ ಮಾತನಾಡಿ, ಪತ್ರಕರ್ತ ಪ್ರತಿ ದಿನ ನೂರಾರು ಜನರನ್ನು ನೋಡುತ್ತಾನೆ, ಸಮಾಜದ ಅಂಕು-ಡೊಂಕುಗಳನ್ನೂ ಗುರುತಿಸಿ ತಿಳಿಸುತ್ತಾನೆ. ನಮ್ಮ ಜಿಲ್ಲೆಯಲ್ಲಿ ಸೂಕ್ತ ಉದ್ಯೋಗಾವಕಾಶ ಇರದಿರುವುದರಿಂದ ಪ್ರತಿಭಾ ಪಲಾಯನ ಆಗುತ್ತಿದೆ. ಜಿಲ್ಲೆಯಲ್ಲಿ ಉದ್ದಿಮೆ ಸ್ಥಾಪನೆಯ ಅಗತ್ಯವಿದೆ. ಈ ಮೂಲಕ ಯುವ ಜನತೆ ಜಿಲ್ಲೆಯಲ್ಲಿಯೇ ಉಳಿದುಕೊಳ್ಳುವಂತಾಗಬೇಕು ಎಂದರು.
ಇದೇ ವೇಳೆ ಜಿ.ಎಸ್. ಹೆಗಡೆ ಅಜ್ಜಿಬಳ್ ಪ್ರಶಸ್ತಿಯನ್ನು ಪತ್ರಕರ್ತರಾದ ಶಾಂತೇಶಕುಮಾರ ಬೆನಕನಕೊಪ್ಪ, ಎಂ.ಜಿ. ನಾಯ್ಕ ಕುಮಟಾ, ಪ್ರಭಾವತಿ ಜಯರಾಜ್ ಯಲ್ಲಾಪುರ, ಸಂದೇಶ ದೇಸಾಯಿ ಜೋಯಿಡಾ, ರಾಘವೇಂದ್ರ ಹೆಬ್ಬಾರ್ ಭಟ್ಕಳ ಅವರಿಗೆ ಪ್ರದಾನ ಮಾಡಲಾಯಿತು.ಶಾಸಕ ಭೀಮಣ್ಣ ನಾಯ್ಕ, ಸಂಘದ ಜಿಲ್ಲಾಧ್ಯಕ್ಷ ಜಿ.ಸು. ಭಟ್ ಬಕ್ಕಳ, ಪತ್ರಕರ್ತರಾದ ಜಿ.ಯು. ಭಟ್ ಹೊನ್ನಾವರ, ಬಸವರಾಜ ಪಾಟೀಲ, ಪ್ರದೀಪ ಶೆಟ್ಟಿ, ಸುಮಂಗಲಾ ಹೊನ್ನೆಕೊಪ್ಪ ಇದ್ದರು. ವಿಠ್ಠಲದಾಸ ಕಾಮತ್ ಸ್ವಾಗತಿಸಿದರು.