ಹೃದಯಾಘಾತದಿಂದ ಪತ್ರಕರ್ತ ಪ್ರಕಾಶ ಗುಳೇದಗುಡ್ಡ ನಿಧನ

| Published : Sep 06 2025, 02:00 AM IST

ಸಾರಾಂಶ

ತೀವ್ರ ಹೃದಯಾಘಾತದಿಂದ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಪತ್ರಕರ್ತ ಪ್ರಕಾಶ ಗುಳೇದಗುಡ್ಡ (41) ಶುಕ್ರವಾರ ಬೆಳಗ್ಗೆ ನಿಧನರಾದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ತೀವ್ರ ಹೃದಯಾಘಾತದಿಂದ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಪತ್ರಕರ್ತ ಪ್ರಕಾಶ ಗುಳೇದಗುಡ್ಡ (41) ಶುಕ್ರವಾರ ಬೆಳಗ್ಗೆ ನಿಧನರಾದರು. ಆರೋಗ್ಯವಾಗಿಯೇ ಇದ್ದ ಪ್ರಕಾಶ, ಶುಕ್ರವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದು, ಸ್ಥಳೀಯ ವೈದ್ಯರ ಬಳಿ ತಪಾಸಣೆ ಮಾಡಿದಾಗ ಬಾಗಲಕೋಟೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲು ಸೂಚಿಸಿದ್ದು, ತಕ್ಷಣವೇ ಅವರು ಕಾರು ಮಾಡಿಕೊಂಡು ಬಾಗಲಕೋಟೆ ಆಸ್ಪತ್ರೆಗೆ ಬರುವಾಗಲೇ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ. ಮಾರ್ಗ ಮಧ್ಯದಲ್ಲಿ ಇರುವಾಗ ಆಸ್ಪತ್ರೆಗೆ ಬರುತ್ತಿರುವುದಾಗಿ ನಗರದ ಮಾಧ್ಯಮ ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿದ್ದರು. ಅದಾಗ ಐದು ನಿಮಿಷದಲ್ಲಿ ಜೀವ ಬಿಟ್ಟಿದ್ದಾರೆ. ಕಳೆದ ಎರಡು ದಶಕಗಳಿಂದ ರಾಜ್ಯಮಟ್ಟದ ವಿವಿಧ ಪತ್ರಿಕೆಗಳು ಸೇರಿ ಸ್ಥಳೀಯ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದರು.

ಭಾವನಾತ್ಮಕ ಸ್ಟೇಟಸ್ :ಸೆ.5 ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಬೆಳಗ್ಗೆಯಷ್ಟೆ ಪ್ರಕಾಶ ಗುಳೇದಗುಡ್ಡ ಅವರು ತಮಗೆ ಕಲಿಸಿದ್ದ ಮೃತ ಶಿಕ್ಷಕರ ಫೋಟೋ ಹಾಕಿ ಭಾವನಾತ್ಮಕವಾಗಿ ಸ್ಟೇಟಸ್ ಹಾಕಿದ ಕೆಲವೇ ಗಂಟೆಗಳಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಪ್ರಕಾಶ ನಿಧನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ. ಶುಕ್ರವಾರ ಸಂಜೆ ಕಮತಗಿ ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಯಿತು.