ಪತ್ರಕರ್ತ, ಸಾಹಿತಿ, ಸಂಘಟಕ ಡಾ.ಶೇಖರ ಅಜೆಕಾರು ನಿಧನ

| Published : Nov 01 2023, 01:00 AM IST / Updated: Nov 01 2023, 01:01 AM IST

ಸಾರಾಂಶ

ಕೆಲಕಾಲ ‘ಕನ್ನಡಪ್ರಭ’ದ ಹೆಬ್ರಿ ವರದಿಗಾರರಾಗಿದ್ದರು. ಕುಂದಪ್ರಭ, ಮುಂಬೈಯ ‘ಕರ್ನಾಟಕ ಮಲ್ಲ’, ಜನವಾಹಿನಿ, ಡೈಜಿವರ್ಲ್ಡ್, ಮತ್ತು ಉಷಾ ಕಿರಣಗಳಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಪತ್ರಕರ್ತರ ಸಂಘ ಸ್ಥಾಪಿಸಿದ್ದರು.
ಕಾರ್ಕಳ: ಪತ್ರಕರ್ತ, ಸಾಹಿತಿ, ಸಂಘಟಕ ಡಾ. ಶೇಖರ ಅಜೆಕಾರು (54) ಹೃದಯಾಘಾತದಿಂದ ಮಂಗಳವಾರ ನಿಧನರಾದರು. ಮಕ್ಕಳ ಸಾಹಿತ್ಯದ ಕುರಿತು ಅಪಾರ ಆಸಕ್ತಿ ವಹಿಸಿದ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಅವರು ಕೆಲಕಾಲ ‘ಕನ್ನಡಪ್ರಭ’ದ ಹೆಬ್ರಿ ವರದಿಗಾರರಾಗಿದ್ದರು. ಕುಂದಪ್ರಭ, ಮುಂಬೈಯ ‘ಕರ್ನಾಟಕ ಮಲ್ಲ’, ಜನವಾಹಿನಿ, ಡೈಜಿವರ್ಲ್ಡ್, ಮತ್ತು ಉಷಾ ಕಿರಣಗಳಲ್ಲೂ ಕಾರ್ಯ ನಿರ್ವಹಿಸಿದ್ದಾರೆ. 10 ವರ್ಷ ಪತ್ರಕರ್ತರ ವೇದಿಕೆ ಬೆಂಗಳೂರಿನ ಉಡುಪಿ ಶಾಖೆಯ ಅಧ್ಯಕ್ಷರೂ ಆಗಿದ್ದರು. ಹೆಬ್ರಿ ಪತ್ರಕರ್ತರ ಸಂಘ ಸ್ಥಾಪಿಸಿದ್ದರು. ಪತ್ನಿ, ಓರ್ವ ಮಗ, ಓರ್ವ ಮಗಳನ್ನು ಅಗಲಿದ್ದಾರೆ. ಬಹುಮುಖ ಪ್ರತಿಭೆಯ ಶೇಖರ್ ಅಜೆಕಾರ್ 22 ಕೃತಿ ರಚಿಸಿದ್ದಾರೆ. 15ಕ್ಕೂ ಹೆಚ್ಚು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಆಯೋಜಿಸಿ ಗಮನ ಸೆಳೆದಿದ್ದರು. ಮಕ್ಕಳ ಮೇಳ, ಅಂಗನವಾಡಿ ಮಕ್ಕಳ ಮೇಳ, ಶಿಕ್ಷಣ ಮಾಹಿತಿ ಶಿಬಿರ, ಬಸ್‌ ನಿಲ್ದಾಣಗಳ್ಲಿ ಅಪಘಾತ ಜಾಗೃತಿ ಛಾಯಚಿತ್ರ ಪ್ರದರ್ಶನ, ಕಾನನದಲ್ಲಿ ಕವಿಗೋಷ್ಠಿ, ಕವಿ ಸಮ್ಮೇಳನ, ವ್ಯಕ್ತಿತ್ವ ವಿಕಸನ ಶಿಬಿರ, ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ ಹೆಸರುವಾಸಿಯಾಗಿದ್ದರು. ಉಪನ್ಯಾಸಕ ದೀಪಕ್‌ ಎನ್‌ ದುರ್ಗ ಅವರು ಡಾ. ಶೇಖರ ಅಜೆಕಾರು ಅವರ ಜೀವನ ಚರಿತ್ರೆ ‘ಅಜೆಕಾರಿನ ಅಜೆಕಾರು’ ಪುಸ್ತಕ ಬರೆದಿದ್ದರು. ಮುಂಬೈ ಕನ್ನಡ ಶಾಲೆ ಆರಂಭಿಸಿದ್ದರು. 2019ನೇ ಸಾಲಿನ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದರು. ಅಕಾಲಿಕವಾಗಿ ನಿಧನರಾಗಿದ್ದ ಪತ್ರಕರ್ತ ರಾಜೇಶ್‌ ಶಿಬಾಜೆ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ನಾಡಿನ ಹಲವಾರು ಸಾಧಕ ಪತ್ರಕರ್ತರಿಗೆ ‘ರಾಜೇಶ್‌ ಶಿಬಾಜೆ ಪ್ರಶಸ್ತಿ’ ನೀಡುತ್ತ ಬಂದಿದ್ದರು. ಮುಂಬೈಯ ಎನ್‌ ಕೌಂಟರ್‌ ದಯಾ ನಾಯಕ್‌ ಅವರನ್ನು ಕನ್ನಡ ಮಾಧ್ಯಮದ ಮೂಲಕ ಕನ್ನಡ ನಾಡಿಗೆ ಪರಿಚಯಿಸಿದ ಹೆಗ್ಗಳಿಕೆಯೂ ಶೇಖರ ಅವರಿಗೆ ಸಲ್ಲುತ್ತದೆ. ಕವಿ, ಸಾಹಿತಿಯಾಗಿ ಮೈಸೂರು ದಸರಾ ಸೇರಿ ನೂರಾರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಅಜೆಕಾರು ಹೋಬಳಿ ಘಟಕದ ಅಧ್ಯಕ್ಷರಾಗಿ ವಿವಿಧ ಸಮ್ಮೇಳನಗಳನ್ನು ನಡೆಸಿದ್ದಾರೆ. ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ಉದಯಕುಮಾರ ಶೆಟ್ಟಿ ಮುನಿಯಾಲು, ಹರಿಕೃಷ್ಣ ಪುನರೂರು, ಕೇಮಾರು ಈಶ ವಿಠಲದಾಸ ಸ್ವಾಮೀಜಿ ಸಹಿತ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕಾರ್ಕಳ ಪತ್ರಕರ್ತರ ಸಂಘ, ಹೆಬ್ರಿ ಪತ್ರಕರ್ತರ ಸಂಘ ಹಾಗೂ ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರು ಅಂತಿಮ ನಮನ ಸಲ್ಲಿಸಿದರು.