ಪತ್ರಕರ್ತರು ಸ್ವಾಭಿಮಾನದ ಬದುಕಿಗಾಗಿ ಹೆಣಗಾಡುವ ಸ್ಥಿತಿ ಇದೆ: ಸತ್ಯನಾರಾಯಣ

| Published : Jul 31 2025, 12:48 AM IST

ಪತ್ರಕರ್ತರು ಸ್ವಾಭಿಮಾನದ ಬದುಕಿಗಾಗಿ ಹೆಣಗಾಡುವ ಸ್ಥಿತಿ ಇದೆ: ಸತ್ಯನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನದ ಮೂರು ಅಂಗಗಳ ಜತೆಗೆ ಪತ್ರಿಕಾ ರಂಗ ಕೆಲಸ ಮಾಡುತ್ತಿದೆ. ಆದರೆ ಪತ್ರಕರ್ತರು ಸ್ವಾಭಿಮಾನದ ಬದುಕಿಗಾಗಿ ಹೆಣಗಾಡುವ ಸ್ಥಿತಿ ಇದೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಸಂವಿಧಾನದ ಮೂರು ಅಂಗಗಳ ಜತೆಗೆ ಪತ್ರಿಕಾ ರಂಗ ಕೆಲಸ ಮಾಡುತ್ತಿದೆ. ಆದರೆ ಪತ್ರಕರ್ತರು ಸ್ವಾಭಿಮಾನದ ಬದುಕಿಗಾಗಿ ಹೆಣಗಾಡುವ ಸ್ಥಿತಿ ಇದೆ ಎಂದು ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ ಹೇಳಿದರು.

ಪಟ್ಟಣದ ಜಿಬಿಆರ್‌ ಕಾಲೇಜಿನ ಹಾನಗಲ್‌ ಕುಮಾರೇಶ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಜಾಲತಾಣದ ಮಧ್ಯೆ ಪತ್ರಿಕಾ ರಂಗ ಸಾಕಷ್ಟು ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಇದೆ. ಓದುಗರ ಅಭಿರುಚಿಗೆ ತಕ್ಕಂತೆ ಸುದ್ದಿ ನೀಡುವ ಜತೆಗೆ, ಪತ್ರಿಕೆಗೆ ಜೀವಾಳವಾಗಿರುವ ಜಾಹಿರಾತು ಅಷ್ಟೇ ಮುಖ್ಯವಾಗಿದೆ. ಇಂದು ಪತ್ರಿಕೆಗಳ ಪ್ರಸಾರ ಸಂಖ್ಯೆ ಕ್ಷೀಣಿಸಿದರೇ ಪತ್ರಿಕಾ ರಂಗದ ಶಕ್ತಿಯೇ ಕಡಿಮೆಯಾಗುತ್ತದೆ. ಆದರಿಂದ ಪತ್ರಕರ್ತರು ಸಾಕಷ್ಟು ಒತ್ತಡಗಳ ಮಧ್ಯೆ ಕೆಲಸ ಮಾಡುತ್ತಿದ್ದಾರೆಂದು ಹೇಳಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ್‌ರಡ್ಡಿ ಮಾತನಾಡಿ, ಪತ್ರಕರ್ತರು ಕಷ್ಟಜೀವಿಗಳಾಗಿದ್ದು ಪತ್ರಿಕಾ ರಂಗಕ್ಕೆ ಸಾಕಷ್ಟು ಶಕ್ತಿ ಇದೆ. ಮುದ್ರಣ ಮಾಧ್ಯಮ ಇಂದು ಸೊರಗುತ್ತಿದೆ. ಆದರೂ ದೃಶ್ಯ ಮಧ್ಯಮದಲ್ಲಿ ಸುದ್ದಿ ವೀಕ್ಷಣೆ ಮಾಡಿದ್ದರೂ ಪತ್ರಿಕೆಗಳನ್ನು ಓದುವ ಹವ್ಯಾವ ಇಟ್ಟುಕೊಂಡಿರುವ ಜನರಿದ್ದಾರೆ. ಜಗತ್ತಿನ ಚಿತ್ರಣ ನೀಡಬಲ್ಲ ಪತ್ರಿಕೆಗಳನ್ನು ವಿಧ್ಯಾರ್ಥಿಗಳು ನಿತ್ಯ ಅಭ್ಯಾಸ ಮಾಡುವ ಹವ್ಯಾಸ ಬೆಳಸಿಕೊಳ್ಳಬೇಕಿದೆ ಎಂದರು.

ಕಾರ್ಯನಿರತ ಪತ್ರಿಕಾ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ ಮಾತನಾಡಿ, ಸೇವಾ ಭದ್ರತೆ ಇಲ್ಲದೇ ಪತ್ರಕರ್ತರು ಕೆಲಸ ಮಾಡುತ್ತಿದ್ದೇವೆ. ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣ ಬೆಳಸಿಕೊಳ್ಳಬೇಕಿದೆ. ನೈಜ ಪತ್ರಕರ್ತರ ಮಕ್ಕಳಿಗೂ ಉದ್ಯೋಗ, ವ್ಯಾಸಂಗಕ್ಕಾಗಿ, ಮೀಸಲಾತಿಯನ್ನು ಸರ್ಕಾರ ನೀಡಬೇಕಿದೆ ಎಂದು ಒತ್ತಾಯಿಸಿದ ಅವರು, ಸರ್ಕಾರ ಪತ್ರಕರ್ತರಿಗೆ ಉಚಿತ ನಿವೇಶನ, ಪತ್ರಿಕಾ ಭವನ ನಿರ್ಮಾಣ ಮಾಡುವಲ್ಲಿ ಗಮನ ಹರಿಸಬೇಕಿದೆ ಎಂದರು.

ತಾಲೂಕ ಸಂಘದ ಅಧ್ಯಕ್ಷ ಎಂ.ಪಿ.ಎಂ. ಶಿವಪ್ರಕಾಶ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗವಿಮಠದ ಡಾ. ಹಿರಿಶಾಂತ ವೀರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಪತ್ರಕರ್ತ ಸಿ.ಕೆ. ನಾಗರಾಜ ಉಪಸ್ಥಿತರಿದ್ದರು.

ಇದೇ ಸಂದರ್ಭ ಹಿರಿಯ ವೈದ್ಯ ಡಾ. ಎಂ.ಧರ್ಮಣ್ಣ, ಕೆಕೆಆರ್‌ಟಿಸಿ ಚಾಲಕ ಕೆ.ಪ್ರಭಾಕರ, ಚಾರಣಿ ಟೆಲಿಚಿತ್ರದ ನಾಯಕ ನಟ ಎಸ್‌.ಕ್ರಾಂತಿ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಸಿದ್ದಪ್ಪ ಹೊಸಮನಿ, ಪಾರ್ವತಿ ಶ್ರೀಧರ ತಳವಾರ್‌ ಇವರನ್ನು ಸನ್ಮಾನಿಸಲಾಯಿತು.

ಪತ್ರಕರ್ತರಾದ ಪಿ.ವೀರಣ್ಣ ಸ್ವಾಗತಿಸಿದರು, ಕೆ.ಮಧುಸೂದನ ನಿರೂಪಿಸಿದರು, ಕಾವ್ಯ ಪಾರಿ ಪ್ರಾರ್ಥಿಸಿದರು, ಚಂದ್ರು ಕೊಂಚಿಗೇರಿ ಸಾಧಕರ ಪರಿಚಯ ಮಾಡಿದರು. ಎಚ್‌.ಚಂದ್ರಪ್ಪ ವಂದಿಸಿದರು.