ರೈತರ ಬಗ್ಗೆ ಪತ್ರಕರ್ತರ ಕಾಳಜಿ ಶ್ಲಾಘನೀಯ

| Published : Nov 06 2024, 11:53 PM IST

ಸಾರಾಂಶ

ರೈತರ ಬವಣೆಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಪತ್ರಕರ್ತರು ಸಭೆ ಸೇರಿ ಚರ್ಚೆ ಮಾಡಿರುವುದು ಸ್ವಾಗತಾರ್ಹವಾಗಿದೆ. ಪತ್ರಕರ್ತರು ಹೆಜ್ಜೆ ಇಟ್ಟಲ್ಲಿ ಯಾವುದು ಅಸಾಧ್ಯವಲ್ಲ ಎಂದು ಶಾಸಕ ಹಾಗೂ ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತೀಚೆಗೆ ತಿಪಟೂರಿನಲ್ಲಿ ನಡೆದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಆಯೋಜಿಸಿ, ಯಶಸ್ವಿಗೊಳಿಸಿದ ತಿಪಟೂರು ತಾಲೂಕು ಕಾರ್ಯನಿರತ ಪತ್ರಕರ್ತರು ಮತ್ತು ಗಣ್ಯರಿಗೆ ನಗರದ ಆದರ್ಶ್ ಫಾರಂ ಹೌಸ್‌ನಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ರೈತರ ಬವಣೆಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಪತ್ರಕರ್ತರು ಸಭೆ ಸೇರಿ ಚರ್ಚೆ ಮಾಡಿರುವುದು ಸ್ವಾಗತಾರ್ಹವಾಗಿದೆ. ಪತ್ರಕರ್ತರು ಹೆಜ್ಜೆ ಇಟ್ಟಲ್ಲಿ ಯಾವುದು ಅಸಾಧ್ಯವಲ್ಲ ಎಂದು ಶಾಸಕ ಹಾಗೂ ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಇತ್ತೀಚೆಗೆ ತಿಪಟೂರಿನಲ್ಲಿ ನಡೆದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಆಯೋಜಿಸಿ, ಯಶಸ್ವಿಗೊಳಿಸಿದ ತಿಪಟೂರು ತಾಲೂಕು ಕಾರ್ಯನಿರತ ಪತ್ರಕರ್ತರು ಮತ್ತು ಗಣ್ಯರಿಗೆ ನಗರದ ಆದರ್ಶ್ ಫಾರಂ ಹೌಸ್‌ನಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕ ಕ್ಷೇತ್ರದಲ್ಲಿ ವ್ಯಾಪಾರ ಧರ್ಮ ದಾರಿ ತಪ್ಪುತ್ತಿದೆ. ಈ ವ್ಯಾಪ್ತಿಗೆ ರೈತರ ಕೃಷಿ ಉತ್ಪನ್ನಗಳು ಕೂಡ ಹೊರತಾಗಿಲ್ಲ. ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಇತ್ತಿಚೆಗೆ ತಿಪಟೂರಿನಲ್ಲಿ ನಡೆದ ರಾಷ್ಟ್ರೀಯ ವಿಚಾರ ಮಂಥನ ಕಾರ್ಯಕ್ರಮದಲ್ಲಿ ತೆಂಗು ಬೆಳೆಗಾರರು ಮತ್ತು ಉತ್ಪನ್ನಗಳ ಬವಣೆ ಬಗ್ಗೆ ಪ್ರಸ್ತಾಪಿಸಿ ಸುದೀರ್ಘ ಚರ್ಚೆ ನಡೆದ ಫಲವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿವೆ ಎನ್ನಬಹುದು. ಕಾಕತಾಳಿಯವೋ ಎನೋ ಸಭೆ ನಡೆದ ಕೆಲವೇ ದಿನಗಳಲ್ಲಿ ತಿಪಟೂರು ಮತ್ತು ಅರಸೀಕೆರೆ ತಾಲೂಕುಗಳು ಸೇರಿದಂತೆ ಅಕ್ಕಪಕ್ಕದ ತಾಲೂಕುಗಳಲ್ಲಿ ಕೊಬ್ಬರಿ ಬೆಲೆ ದ್ವಿಗುಣವಾಗಿದೆ. ಕೃಷಿ ಉತ್ಪನ್ನಗಳ ಬಗ್ಗೆ ನ್ಯಾಯಯುತವಾದ ಬೆಲೆ ಸಿಗಬೇಕಿದ್ದು, ಅದಕ್ಕೆ ಪೂರಕವಾಗಿ ಕಾರ್ಯನಿರತ ಪತ್ರಕರ್ತರು ರೈತರೊಂದಿಗೆ ಕೈ ಜೋಡಿಸಬೇಕಿದೆ. ರಾಜ್ಯ ಸರ್ಕಾರದೊಂದಿಗೆ ಸ್ಥಳೀಯ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಅನೇಕ ಬಾರಿ ಸದನಗಳಲ್ಲಿ ಮಾತನಾಡಿದ್ದೇನೆ. ಕೆಲವು ತಾಂತ್ರಿಕ ಗೊಂದಲಗಳು ಇದ್ದರೂ ಅವುಗಳನ್ನು ಬಗೆಹರಿಸಿಕೊಂಡು ಪತ್ರಕರ್ತರ ಬೇಡಿಕೆ ಈಡೇರಿಸಬೇಕಿದೆ. ಆದರ್ಶ ಫಾರಂ ಹೌಸ್ ಸಾಮಾಜಿಕ ಚಟುವಟಿಕೆಗಳಿಗೆ ಅವಕಾಶಗಳನ್ನು ಮಾಡಿಕೊಡುತ್ತಿದೆ. ತಿಪಟೂರು ಖ್ಯಾತ ವೈದ್ಯ ಡಾ. ಜಿ.ಎಸ್. ಶ್ರೀಧರ್ ಮತ್ತು ಇವರ ತಂಡವು ಸದಾ ಸಮಾಜ ಮುಖಿಯಾದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಇವರು ಪತ್ರಕರ್ತರ ಒಳಿತು ಸೇರಿದಂತೆ ರೈತಾಪಿ ಜನರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಇವರನ್ನು ಪ್ರತ್ಯಕ್ಷ ಭೇಟಿ ಮಾಡಿದ್ದು ಸಂತಸ ತಂದಿದೆ ಎಂದರು.ಐಎಫ್‌ಡಬ್ಲೂಜೆ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ ಮಾತನಾಡಿ, ತಿಪಟೂರು ಮತ್ತು ಅರಸೀಕೆರೆ ಸಣ್ಣ ಮಟ್ಟದ ಊರುಗಳಾಗಿವೆ. ತಿಪಟೂರಿನಲ್ಲಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಆಯೋಜಿಸುವುದು ಅಷ್ಟು ಸುಲಭವಲ್ಲ. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ ತಿಪಟೂರು ಪತ್ರಕರ್ತರು ಆಯೋಜಿಸಿ ಯಶಸ್ವಿಗೊಳಿಸಿದ್ದಾರೆ. ಈ ಎಲ್ಲದರ ಯಶಸ್ಸಿನ ಹಿಂದೆ ಅವಧೂತ ಸ್ವರೂಪಿಯವರಾದ ಡಾ. ಜಿ.ಎಸ್.ಶ್ರೀಧರ್‌ ಪ್ರೇರಣೆಯಾಗಿದ್ದಾರೆ. ಪತ್ರಕರ್ತರ ಬಗ್ಗೆ ಇವರು ಇಟ್ಟಂತಹ ಅಭಿಮಾನ ಮತ್ತು ಪ್ರೋತ್ಸಾಹ ಜೊತೆಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೂ ಗುರುತರ ಸೇವೆ ಸಲ್ಲಿಸುತ್ತಿದ್ದಾರೆ. ಹತ್ತಾರು ಕ್ಷೇತ್ರಗಳ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಇರುವ ಇವರು ರೈತರು ಮತ್ತು ರೈತರ ಕೃಷಿ ಉತ್ಪನ್ನಗಳ ಬಗ್ಗೆಯೂ ಹೊಸ ಹೊಸ ಆವಿಷ್ಕಾರಗಳನ್ನು ಹುಟ್ಟುಹಾಕಿ ಸಾವಯವ ಕೃಷಿ ಬಗ್ಗೆ ಅಗಾಧವಾದ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಇಂತಹ ವ್ಯಕ್ತಿ ನಮಗೆ ಸ್ಫೂರ್ತಿದಾಯಕವಾಗಿದ್ದು, ಇವರ ವೈದ್ಯ ವೃತ್ತಿಯ ಸೇವೆ ನಮ್ಮ ಪತ್ರಿಕಾ ಕ್ಷೇತ್ರಕ್ಕೂ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಡಾ.ಶ್ರೀಧರ್‌ ಮತ್ತು ತಿಪಟೂರು ಕೃಷ್ಣ ಇವರಿಗೆ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಅತೀ ಕಡಿಮೆ ಸಮಯದಲ್ಲಿ ತಿಪಟೂರಿನ ಪತ್ರಕರ್ತರು, ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಆಯೋಜಿಸಿ, ಯಶಸ್ವಿಗೆ ಸಹಕರಿಸಿದ್ದಾರೆ. ಈ ಸಭೆಗೆ ಆಗಮಿಸಿದ್ದ ದೇಶದ ವಿವಿಧ ಭಾಗಗಳ ಪದಾಧಿಕಾರಿಗಳು, ಸದಸ್ಯರಿಗೆ ನೀಡಿದ ಆತಿಥ್ಯ, ವಸತಿ ಸೌಕರ್ಯ ಮತ್ತು ಮೂಲಭೂತ ಸೌಲಭ್ಯಗಳ ಪೂರೈಕೆಗೆ ರಾಜ್ಯ ಸಂಘವು ಶ್ಲಾಘಿಸುತ್ತದೆ. ಈ ಸಮಯದಲ್ಲಿ ತೆಂಗು ಉತ್ಪನ್ನಗಳ ಪ್ರದರ್ಶನ ಮತ್ತು ರೈತರ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗಿದ್ದು, ಹೆಚ್ಚು ಮೆರುಗನ್ನು ನೀಡಿತು. ಇಂತಹ ಸುಂದರ ಸಭೆ ಆಯೋಜಿಸಿದ ತಿಪಟೂರು ಪತ್ರಕರ್ತರಿಗಾಗಿ ಅಭಿನಂದನಾ ಕಾರ್ಯಕ್ರಮವನ್ನು ಅರಸೀಕೆರೆಯಲ್ಲಿ ಆಯೋಜಿಸಿದ್ದೇವೆ ಎಂದರು.

ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲ, ಐಎಫ್‌ಡಬ್ಲೂಜೆ ಅಪರ ಕಾರ್ಯದರ್ಶಿ ಎಚ್.ಬಿ.ಮದನ್ ಗೌಡ, ಕೆಯುಡಬ್ಲೂಜೆ ವಿಶೇಷ ಆಹ್ವಾನಿತ ರವಿ ನಾಕಲಗೂಡು, ತಿಪಟೂರು ಕೃಷ್ಣ ಮಾತನಾಡಿದರು.

ನಗರಸಭೆ ಉಪಾಧ್ಯಕ್ಷ ಮನೋಹರ್‌, ರಾಷ್ಟ್ರೀಯ ಮಂಡಳಿ ಸದಸ್ಯ ಆಲ್ಬೂರ್ ಶಿವರಾಜ್, ಹಾಸನ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್‌, ತಾ.ಘಟಕ ಅಧ್ಯಕ್ಷ ಎಲ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್ ಮತ್ತು ಜಿಲ್ಲಾ ಸಮಿತಿ ಸದಸ್ಯ ಟಿ.ಆನಂದ್ ಸೇರಿದಂತೆ ಹಾಸನ ಮತ್ತು ತುಮಕೂರು ಜಿಲ್ಲಾ ಪತ್ರಕರ್ತರರು ಭಾಗವಹಿಸಿದ್ದರು.