ಸಮಾಜ ಸುಧಾರಣೆಗೆ ಪತ್ರಕರ್ತರ ಶ್ರಮ ಹೆಚ್ಚು

| Published : Jul 26 2025, 12:00 AM IST

ಸಾರಾಂಶ

ಸಮಾಜದ ಸುಧಾರಣೆಯಲ್ಲಿ ಸದಾ ಕಾಲ ತೊಡಗಿಸಿಕೊಂಡಿರುವ ಪತ್ರಕರ್ತರ ಶ್ರಮ ಹೆಚ್ಚಿನದ್ದಾಗಿದ್ದು, ಸಮಾಜದ ಪ್ರತಿಯೊಬ್ಬರೂ ಇವರಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಲು ಮುಂದಾಗಬೇಕೆಂದು ಶಾಸಕ ಬಿ.ಕೆ.ಸಂಗಮೇಶ್ವರ್ ಕರೆ ನೀಡಿದರು.

ಭದ್ರಾವತಿ: ಸಮಾಜದ ಸುಧಾರಣೆಯಲ್ಲಿ ಸದಾ ಕಾಲ ತೊಡಗಿಸಿಕೊಂಡಿರುವ ಪತ್ರಕರ್ತರ ಶ್ರಮ ಹೆಚ್ಚಿನದ್ದಾಗಿದ್ದು, ಸಮಾಜದ ಪ್ರತಿಯೊಬ್ಬರೂ ಇವರಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಲು ಮುಂದಾಗಬೇಕೆಂದು ಶಾಸಕ ಬಿ.ಕೆ.ಸಂಗಮೇಶ್ವರ್ ಕರೆ ನೀಡಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕೆಗಳು ಆರಂಭವಾದಾಗಿನಿಂದಲೂ ಸಮಾಜಕ್ಕೆ ಉತ್ತಮ ಮೌಲ್ಯಗಳನ್ನು ನೀಡುವ ಜೊತೆಗೆ ಸಮಾಜದ ರಕ್ಷಣೆಯಲ್ಲಿ ತೊಡಗಿಸಿಕೊಂಡಿವೆ. ಈ ನಿಟ್ಟಿನಲ್ಲಿ ಪತ್ರಕರ್ತರ ಶ್ರಮ ಹೆಚ್ಚಿನದ್ದಾಗಿದೆ ಎಂದರು. ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಮಾತನಾಡಿ, ಪತ್ರಕರ್ತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಇದೀಗ ಸಂಕಷ್ಟದಲ್ಲಿರುವ ಪತ್ರಕರ್ತರ ಹಿತರಕ್ಷಣೆಗಾಗಿ ತಾಲೂಕು ಪತ್ರಕರ್ತರ ಸಂಘ ನಿಧಿ ಸ್ಥಾಪಿಸಿದೆ. ಈಗಾಗಲೇ ಮೂಲ ಧನ ಸಂಗ್ರಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಪ್ರಯೋಜನಕಾರಿಯಾಗಲಿದೆ ಎಂದು ತಿಳಿಸಿದರು.ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಕಾರ್ಯಕ್ರಮ ಮಾಡಲು ಅನುಕೂಲವಾಗುವಂತೆ ಪತ್ರಿಕಾ ಭವನವನ್ನು ಜನಪ್ರತಿನಿಧಿಗಳು ಹಾಗೂ ಹಲವಾರು ದಾನಿಗಳಿಂದ ನಿರ್ಮಾಣ ಮಾಡಿದ್ದು, ಪತ್ರಿಕಾ ಭವನ ಜನಸ್ನೇಹಿಯಾಗಿ ಜನತೆಗೆ ಆನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ. ಜನಪ್ರತಿನಿಧಿಗಳು ಇನ್ನೂ ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಇದೇ ವೇಳೆ ಉಷಾಮಹಿ ಪತ್ರಿಕೆ ಸಂಪಾದಕರಾದ ಶಾಂತಿ ಕಣ್ಣಪ್ಪ ದಂಪತಿ ೫೦ ವರ್ಷಗಳ ದಾಂಪತ್ಯ ಜೀವನ ಯಶಸ್ವಿಯಾಗಿ ಪೂರೈಸಿರುವ ಹಿನ್ನಲೆಯಲ್ಲಿ ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಸುದರ್ಶನ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್.ಬದರಿನಾರಯಣ ಶ್ರೇಷ್ಠಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಕಾರ್ಯದರ್ಶಿ ದೀಪಕ್ ಸಾಗರ್, ಪತ್ರಿಕಾಭವನ ಟ್ರಸ್ಟ್ ಕಾರ್ಯದರ್ಶಿ ಕೆ.ಎನ್.ಶ್ರೀಹರ್ಷ, ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್.ಷಡಾಕ್ಷರಿ, ಹಿರಿಯ ನಗರಸಭಾ ಸದಸ್ಯ ವಿ.ಕದಿರೇಶ್, ಹಿರಿಯ ಪತ್ರಕರ್ತರಾದ ಎಚ್.ಕೆ.ಶಿವಶಂಕರ್, ಗಂಗಾನಾಯ್ಕ ಗೊಂದಿ, ಶೈಲೇಶ್ ಕೋಠಿ, ಸಯ್ಯದ್ ಖಾನ್, ಕೆ.ಎಸ್.ಸುಧೀಂದ್ರ, ಕೆ.ಆರ್.ಶಂಕರ್, ಕಿರಣ್ ಕುಮಾರ್, ಪ್ರಶಾಂತ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಬಸವರಾಜ್ ಸ್ವಾಗತಿಸಿದರು. ಕಾರ್ಯದರ್ಶಿ ಆರ್.ಫಿಲೋಮಿನಾ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಸುಭಾಷ್ ರಾವ್ ಸಿಂಧ್ಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಅನಂತಕುಮಾರ್ ವಂದಿಸಿದರು.