ಸಾರಾಂಶ
ಮಂಗಳೂರಿನ ಪತ್ರಕರ್ತರಾದ ಮೋಹನ್ ಕುತ್ತಾರ್, ಶಶಿ ಬೆಳ್ಳಾಯರು, ಆರಿಫ್ ಯು.ಆರ್. ಕಲ್ಕಟ್ಟ, ಗಿರೀಶ್ ಮಳಲಿ, ಶಿವಶಂಕರ್ ಸಹಕರಿಸಿದರು. ಮೃತದೇಹವನ್ನು ತಾವೇ ಹೊತ್ತುಕೊಂಡು 1 ಕಿಮೀವರೆಗೆ ಸಾಗಿ ಮನೆಯವರಿಗೆ ಒಪ್ಪಿಸಿ ಅಂತಿಮಸಂಸ್ಕಾರ ನಡೆಸಲು ನೆರವಾದರು.
ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನೀರು ಪಾಲಾಗಿದ್ದ ಉಳವರೆ ಗ್ರಾಮದ ನಿವಾಸಿ ಸಣ್ಣು ಗೌಡ ಅವರ ಶವ ಮಂಗಳವಾರ ಬೆಳಗ್ಗೆ ಪತ್ತೆಯಾಗಿದ್ದು, ಶವವನ್ನು ಮಂಗಳೂರಿನ ಮಾಧ್ಯಮದ ಪ್ರತಿನಿಧಿಗಳೇ 1 ಕಿಮೀ ಹೊತ್ತುಕೊಂಡು ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಗಂಗಾವಳಿ ನದಿಯ ತೀರದಲ್ಲಿ ಪತ್ತೆಯಾಗಿದ್ದ ಸಣ್ಣು ಗೌಡ ಅವರ ಮೃತದೇಹವನ್ನು ಅಂಕೋಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಮೃತದೇಹವನ್ನು ಉಳುವರೆ ಗ್ರಾಮಕ್ಕೆ ಆ್ಯಂಬುಲೆನ್ಸ್ ಮೂಲಕ ತರಲಾಯಿತು. ಆದರೆ ಸಣ್ಣು ಗೌಡ ಅವರ ಮನೆ ಇನ್ನೂ 1 ಕಿಮೀ ದೂರವಿರುವಾಗಲೇ ರಸ್ತೆ ತೀರಾ ಹದಗೆಟ್ಟಿತ್ತು. ಹೀಗಾಗಿ ಆ್ಯಂಬುಲೆನ್ಸ್‌ನಲ್ಲಿ ತೆರಳಲು ಸಾಧ್ಯವಾಗಲಿಲ್ಲ.ಅಲ್ಲದೇ ಸಣ್ಣು ಗೌಡರ ಶವವು ಜೀರ್ಣಾವಸ್ಥೆಗೆ ತಲುಪಿದ್ದರಿಂದ ಕೆಟ್ಟ ವಾಸನೆಯಿಂದ ಕೂಡಿತ್ತು. ಹೀಗಾಗಿ ಶವವನ್ನು ಸಾಗಿಸಲು ಅಲ್ಲಿದ್ದ ಬೆರಳೆಣಿಕೆಯ ಜನರು ಹಾಗೂ ಜಿಲ್ಲಾಡಳಿತವು ಕೂಡ ಮುಂದೆ ಬರಲಿಲ್ಲ. ಉಳುವರೆ ಗ್ರಾಮದ ಹಲವು ಯುವಕರು ಊರಿಗೆ ಗಂಗಾವಳಿ ನದಿಯ ನೀರು ನುಗ್ಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮಹಿಳೆಯರು ಕಾಳಜಿ ಕೇಂದ್ರದಲ್ಲಿದ್ದಾರೆ. ಶವವನ್ನು ಸಾಗಿಸಲು ಸಮರ್ಪಕ ರಸ್ತೆಯೂ ಇಲ್ಲದೇ ವೃದ್ಧೆಯ ಶವ ಮನೆಯಿಂದ 1 ಕಿಮೀ ದೂರದ ಆ್ಯಂಬುಲೆನ್ಸ್‌ನಲ್ಲಿ ಉಳಿದಿತ್ತು. ಆಗ ಸ್ಥಳದಲ್ಲಿದ್ದ ಮಂಗಳೂರಿನ ಪತ್ರಕರ್ತರಾದ ಮೋಹನ್ ಕುತ್ತಾರ್, ಶಶಿ ಬೆಳ್ಳಾಯರು, ಆರಿಫ್ ಯು.ಆರ್. ಕಲ್ಕಟ್ಟ, ಗಿರೀಶ್ ಮಳಲಿ, ಶಿವಶಂಕರ್ ಸಹಕರಿಸಿದರು. ಮೃತದೇಹವನ್ನು ತಾವೇ ಹೊತ್ತುಕೊಂಡು 1 ಕಿಮೀವರೆಗೆ ಸಾಗಿ ಮನೆಯವರಿಗೆ ಒಪ್ಪಿಸಿ ಅಂತಿಮಸಂಸ್ಕಾರ ನಡೆಸಲು ನೆರವಾದರು. ಪತ್ರಕರ್ತರ ಈ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಯಿತು.