ಸಾರಾಂಶ
- ಪತ್ರಿಕಾ ದಿನಾಚರಣೆ, ಬಾಳೆಹೊನ್ನೂರಿನಲ್ಲಿ ನೂತನ ಪತ್ರಿಕಾ ಭವನದ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಜನರ ನೋವು, ನಲಿವುಗಳನ್ನು ಪತ್ರಿಕೆಗಳ ಮೂಲಕ ಸರ್ಕಾರಕ್ಕೆ ಮುಟ್ಟಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ಭಾನುವಾರ ಬಾಳೆಹೊನ್ನೂರಿನ ವಿದ್ಯಾ ಗಣಪತಿ ಸಮುದಾಯ ಭವನದಲ್ಲಿ ನಡೆದ ತಾಲೂಕು ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಹಾಗೂ ನೂತನವಾಗಿ ಬಾಳೆಹೊನ್ನೂರಿನಲ್ಲಿ ನಿರ್ಮಿಸಲಿರುವ ಸಮುದಾಯಭವನದ ಶಂಕು ಸ್ಥಾಪನೆ ಸಮಾರಂಭದ ಸಾನ್ನಿದ್ಯ ವಹಿಸಿ ಮಾತನಾಡಿದರು. ಪತ್ರಿಕಾ ರಂಗ ಪವಿತ್ರ ಕ್ಷೇತ್ರ. 1 ಹನಿ ಮಸಿ ಕೋಟಿ ಜನರಿಗೂ ಬಿಸಿ ಮುಟ್ಟಿಸಬಲ್ಲದು. ತಾಲೂಕು ಪತ್ರಕರ್ತರ ಸಂಘದಿಂದ ಈಗಾಗಲೇ ಬಾಳೆಹೊನ್ನೂರಿನ ರಂಭಾಪುರಿ ಮಠದಲ್ಲಿ ಕೃಷಿ ಸಮ್ಮೇಳನ ಯಶಸ್ವಿಯಾಗಿ ನಡೆಸಲಾಗಿತ್ತು.ಬಾಳೆಹೊನ್ನೂರಿನ ಪತ್ರಕರ್ತರಿಗೆ ಪತ್ರಿಕಾ ಭವನ ಬೇಕು ಎಂದು ಹಲವಾರು ವರ್ಷಗಳ ಬೇಡಿಕೆ ಈಡೇರಿದೆ. ದೊಡ್ಡ ನಿವೇಶವನ್ನು ಗ್ರಾಮ ಪಂಚಾಯಿತಿಯವರು ನೀಡಿದ್ದಾರೆ. ಪತ್ರಿಕಾ ಭವನ ಕಟ್ಟಲು ರಂಭಾಪುರಿ ಮಠದಿಂದಲೂ ₹1 ಲಕ್ಷ ರು. ನೀಡಲಾಗುವುದು ಎಂದು ಭರವಸೆ ನೀಡಿದರು.ಶಾಸಕ ಟಿ.ಡಿ.ರಾಜೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾವುದೇ ಸರ್ಕಾರ ಜನರಿಗೆ ಮೂಲಭೂತ ಸೌಕರ್ಯ ನೀಡಲು ವಿಫಲವಾದರೆ ಪರ್ತಕರ್ತರು ತಮ್ಮ ಲೇಖನ, ವರದಿ ಮೂಲಕ ಎಚ್ಚರಿಸಬೇಕು. ಪತ್ರಕರ್ತರ ಲೇಖನ ಖಡ್ಗಕ್ಕಿಂತ ಹರಿತ. ಆದರೆ, ಏಕಮುಖಿ ವರದಿ ಮಾಡಬಾರದು. ಟಿ.ವಿ ಮಾದ್ಯಮ ಬಂದ ತಕ್ಷಣ ಪತ್ರಿಕೆಗಳು ನಿಂತು ಹೋಗು ತ್ತದೆ ಎಂಬುದು ಹಲವರ ಭಾವನೆಯಾಗಿತ್ತು. ಆದರೆ, ಪತ್ರಿಕೆಗಳು ಈಗಲೂ ತನ್ನ ಅಸ್ತಿತ್ವ ಉಳಿಸಿಕೊಂಡು ಯಶಸ್ವಿಯಾಗಿ ಮುನ್ನೆಡೆಯುತ್ತಿದೆ. ನಾನು ಈ ಹಿಂದೆ ಭರವಸೆ ನೀಡಿದಂತೆ ಬಾಳೆಹೊನ್ನೂರಿನ ಪತ್ರಿಕಾ ಭವನಕ್ಕೆ ರಾಜ್ಯ ನವೀಕರಿಸ ಬಹುದಾದ ಇಂದನ ಅಭಿವೃದ್ದಿ ನಿಗಮದಿಂದ ₹1 ಲಕ್ಷ ರು. ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಸಚಿವ ಡಿ.ಎನ್.ಜೀವರಾಜ್ ಪತ್ರಿಕಾ ಭವನದ ನೀಲಿ ನಕ್ಷೆ ಅನಾವರಣಗೊಳಿಸಿ ಮಾತನಾಡಿ, ಬಾಳೆಹೊನ್ನೂರಿನಲ್ಲಿ ನೂತನ ಪತ್ರಿಕಾ ಭವನ ಪಟ್ಟಣದ ಹೃದಯ ಭಾಗದಲ್ಲೇ ನಿರ್ಮಾಣವಾಗಲಿದೆ. ನೂತನ ಭವನಕ್ಕೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮೂಲಕ ಅನುದಾನ ಕೊಡಿಸುತ್ತೇನೆ. ಟಿ.ವಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಸುದ್ದಿಗಳು ಬಂದರೂ ಈಗಲೂ ಜನರಿಗೆ ನಿಖರವಾದ ಸುದ್ದಿ ನೀಡುತ್ತಿರುವುದು ದಿನ ಪತ್ರಿಕೆಗಳೇ ಆಗಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ರಾಜ್ಯ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ.ಆರತಿಕೃಷ್ಣ ಮಾತನಾಡಿ, ಪತ್ರಿಕೆಗಳು ಹೊಸ, ಹೊಸ ತಂತ್ರಜ್ಞಾನ ಕಂಡುಕೊಳ್ಳಬೇಕಿದೆ. ಯುವ ಪತ್ರಕರ್ತರಿಗೆ ತರಬೇತಿ ಅಗತ್ಯ. ಆರೋಗ್ಯಕರ ಸಮಾಜ ನಿರ್ಮಾಣ ದಲ್ಲಿ ಪತ್ರಕರ್ತರ ಪಾತ್ರ ದೊಡ್ಡದು. ನರಸಿಂಹರಾಜಪುರ ತಾಲೂಕು ಪತ್ರಕರ್ತರು ಪತ್ರಿಕಾ ವೃತ್ತಿಗೆ ಗೌರವ ತಂದುಕೊಟ್ಟಿದ್ದಾರೆ. ಸರ್ಕಾರದಿಂದ ಆಗುವ ಕೆಲಸವನ್ನ ನನ್ನ ಗಮನಕ್ಕೆ ತಂದರೆ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ವಿದ್ಯಾರ್ಥಿ ವೇತನ ನೀಡಿ ಮಾತನಾಡಿದರು. ಅತಿಥಿಗಳಾಗಿದ್ದ ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಅಮ್ಮ ಪೌಂಡೇಷನ್ ಅಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿದರು. ಸಭೆ ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್.ಸಚಿನ್ ಕುಮಾರ್ ವಹಿಸಿದ್ದರು. ಅತಿಥಿಗಳಾಗಿ ಮುಖಂಡ ರಾದ ವೆನಿಲ್ಲಾ ಭಾಸ್ಕರ್, ಮಾಲತೇಶ್ ಸಿಗಸೆ, ಎಂ.ಎಸ್.ಚನ್ನಕೇಶವ್, ಟಿ.ಎಂ.ಉಮೇಶ್ ಕಲ್ಮಕ್ಕಿ, ಮಹಮ್ಮದ್ ಹನೀಫ್, ಪ್ರಭಾಕರ ಪ್ರಣಸ್ವಿ, ಕೌಶಿಕ್ ಪಟೇಲ್, ಕೆ.ಕೆ.ವೆಂಕಟೇಶ್, ಚಂದ್ರಮ್ಮ, ಕೆ.ವಿ.ನಾಗರಾಜ ಮತ್ತಿತರರು ಇದ್ದರು.ಇದೇ ಸಂದರ್ಭದಲ್ಲಿ ದಿ.ಬಿ.ಎಸ್.ಸುಧಾಕರರಾವ್ ಸ್ಮರಣಾರ್ಥ ನೀಡುವ ಹಿರಿಯ ಪತ್ರಕರ್ತ ಪ್ರಶಸ್ತಿಯನ್ನು ಪ್ರವೀಣ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು. ಸಿಂಹನಗದ್ದೆ ಬಸ್ತಿಮಠದಿಂದ ನೀಡುವ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ ಯನ್ನು ಬಿ.ಎಸ್.ನಾಗರಾಜಭಟ್ ಅವರಿಗೆ ನೀಡಿ ಗೌರವಿಸಲಾಯಿತು. ಶಿವಾನಂದ ಭಟ್, ಸುರೇಂದ್ರ, ನಾಗರಾಜ ಭಟ್ ಇದ್ದರು.