ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪ್ರಸ್ತುತ ದಿನಗಳಲ್ಲಿ ಪ್ರತಿಕೋದ್ಯಮದಲ್ಲಿ ಪತ್ರಕರ್ತರ ಬದುಕು ಜೀವನ ಭದ್ರತೆ ಇಲ್ಲದೆ ಆತಂತ್ರ ಸ್ಥಿತಿಯತ್ತ ಸಾಗುತ್ತಿರುವುದರ ಬಗ್ಗೆ ನಮ್ಮ ಸಾಮಾಜಿಕ ಮತ್ತು ಆಡಳಿತ ವ್ಯವಸ್ಥೆಗಳು ಚಿಂತನೆ ಮಾಡಬೇಕಾದ ಅಗತ್ಯವಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯಪಟ್ಟರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದವತಿಯಿಂದ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ತನಗೆ ಇಂದು ಪತ್ರಕರ್ತರ ಸಂಘದ ವತಿಯಿಂದ ಶಾಂತಿದೂತ ಎನ್ನುವ ಬಿರುದಿನೊಂದಿಗೆ ಸನ್ಮಾನ ಮಾಡಿದೆ, ಕಳೆದ 2 ವರ್ಷಗಳಿಂದ ನ್ಯಾಮತಿ ಮತ್ತು ಹೊನ್ನಾಳಿ ಅವಳಿ ತಾಲೂಕುಗಳಲ್ಲಿ ತನ್ನ ಅಧಿಕಾರಾವಧಿಯಲ್ಲಿ ಯಾವುದೇ ರೀತಿಯ ಗಲಾಟೆ ಗೊಂದಲಗಳಿಲ್ಲದಂತೆ ನೋಡಿಕೊಳ್ಳಲಾಗಿದೆ. ಇದರಲ್ಲಿ ಅವಳಿ ತಾಲೂಕುಗಳ ಪೊಲೀಸ್ ಇಲಾಖೆಯ ಅಧಿಕಾರಿಗಳ ಪಾತ್ರವೂ ಇದೆ, ಅವರಿಗೂ ಕೂಡ ಅವಳಿ ತಾಲೂಕುಗಳ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ವತಿಯಿಂದ ನೀಡಿದ ಮನವಿ ಪತ್ರ ಸ್ವೀಕರಿಸಿ, ಪತ್ರಕರ್ತರಿಗೆ ನಿವೇಶನ ಹಾಗೂ ಇರುವ ಪತ್ರಿಕಾ ಭವನ ಶಿಧಿಲಗೊಂಡಿದ್ದು ಈ ಕಟ್ಟಡದ ನವೀಕರಣಕ್ಕಾಗಿ ಅನುದಾನ ಒದಗಿಸುವಂತೆ ಪತ್ರಕರ್ತರು ಮನವಿ ಮಾಡಿದ್ದು, ಈ ಬಗ್ಗೆ ಕೂಡ ತಾನು ಸಕಾರಾತ್ಮವಾಗಿ ಸ್ಪಂದಿಸುವುದಾಗಿ ಪತ್ರಕರ್ತರ ಭವನದ ನವೀಕರಣಕ್ಕೆ ಅನುದಾನ ಬಿಡುಗಡೆಗೊಳಿಸುವ ಬಗ್ಗೆ ಕೂಡ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಕೇವಲ ಶಾಂತಿದೂತ ಎನ್ನುವ ಮುಖದ ಜತೆಗೆ ಅನ್ಯಾಯದ ವಿರುದ್ಧ ಹೋರಾಡುವ ಉಗ್ರ ಮುಖವೂ ತನಗಿದ್ದು ಪತ್ರಕರ್ತರು ಇದನ್ನೂ ಕೂಡ ಗಮನಿಸಬೇಕು ಎಂದು ಹಾಸ್ಯಚಟಾಕಿ ಹಾರಿಸಿದರು.ಯುವ ಸಾಹಿತಿ, ಪತ್ರಕರ್ತ ದರ್ಶನ್ ಬಳ್ಳೇಶ್ವರ, ಪತ್ರಿಕೆಗಳ ಪರಿಕಲ್ಪನೆ 12ನೇ ಶತಮಾನ ಬಸವಣ್ಣನವರ ಕಾಲದಿಂದಲೇ ಆರಂಭಗೊಂಡು ಇಂದಿನವರೆಗೆ ಮುಂದುವರಿದಿದೆ, ಮನುಷ್ಯನ ನೋವು, ನಲಿವುಗಳನ್ನು ದಿನದ ಬದುಕಿನ ಚಟುವಟಿಕೆಗಳ ಬಗ್ಗೆ ವಚನಗಳಲ್ಲಿ ಹೇಳುವ ಮೂಲಕ ವಚನ ಸಾಹಿತ್ಯ ಪತ್ರಿಕೆಗಳ ಕೆಲಸ ಮಾಡಿವೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾ ಪ್ರತಿನಿಧಿ ಎನ್.ಕೆ.ಆಂಜನೇಯ ಮಾತನಾಡಿದರು. ಪತ್ರಕರ್ತರ ಪ್ರತಿಭಾವಂತ ಮಕ್ಖಳನ್ನು ಸನ್ಮಾನಿಸಲಾಯಿತು. ಶಾಸಕ ಡಿ.ಜಿ.ಶಾಂತನಗೌಡ, ಪೊಲೀಸ್ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಎಚ್. ಹಾಗೂ ತಾಲೂಕಿನ ಹಿರಿಯ ಪತ್ರಕರ್ತರಾದ ಎಂ.ಪಿ.ಎಂ. ವಿಜಯಾನಂದ ಕುಮಾರ ಸ್ವಾಮಿ, ರಾಜು ಜಿ.ಎಚ್. ಅವರನ್ನು ಸನ್ಮಾನಿಸಲಾಯಿತು.ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಯೊಗೇಶ್ ಕೋರಿ ಪತ್ರಕರ್ತರಿಗೆ ನಿವೇಶನ ಮತ್ತು ಪತ್ರಕರ್ತರ ಕಟ್ಟಡದ ನವೀಕರಣ ಮಾಡಿಕೊಡುವ ಬಗ್ಗೆ ಶಾಸಕರಲ್ಲಿ ಮನವಿ ಮಾಡಿದರು.
ಪತ್ರಕರ್ತ ಮೃತ್ಯಂಜಯ ಪಾಟೀಲ್ ಸ್ವಾಗತಿಸಿದರು. ಪತ್ರಕರ್ತ ಟಿ.ಶ್ರೀನಿವಾಸ ನಿರೂಪಿಸಿದರು. ಗಿರೀಶ್ ವಂದಿಸಿದರು. ಹೊನ್ನಾಳಿ, ಸಾಸ್ವೇಹಳ್ಳಿ ಪತ್ರಕರ್ತರು,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುರುಗೇಪ್ಪ ಗೌಡ ಹಾಗೂ ರೈತಸಂಘದ ಪದಾಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು.