ಸಾರಾಂಶ
ಸಾಗರದ ಅಣಲೆಕೊಪ್ಪ ಬಡಾವಣೆಯಲ್ಲಿ ಪತ್ರಕರ್ತರ ಸಭಾಭವನಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಸಾಗರ
ಪತ್ರಕರ್ತರು ಸಂಘಟನಾತ್ಮಕವಾಗಿರುವ ಮೂಲಕ ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಮಾಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.ಪಟ್ಟಣದ ಅಣಲೆಕೊಪ್ಪ ಬಡಾವಣೆಯಲ್ಲಿರುವ ಸ್ತ್ರೀ ಶಕ್ತಿ ಭವನ ಮೇಲ್ಭಾಗದಲ್ಲಿ ಶುಕ್ರವಾರ ಪತ್ರಕರ್ತರ ಕಾರ್ಯ ಚಟುವಟಿಕೆಗಳಿಗೆ ನೂತನ ಸಭಾಭವನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪತ್ರಕರ್ತರಿಗೆ ಅಗತ್ಯ ಸೌಲಭ್ಯ ಒದಗಿಸಿ ಕೊಡುವ ಜೊತೆಗೆ ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡಲು ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.
ಪತ್ರಕರ್ತರ ಕಾರ್ಯ ಚಟುವಟಿಕೆಗೆ ಅಗತ್ಯವಾದ ಭವನವನ್ನು ಅತಿಶೀಘ್ರವಾಗಿ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ವಸ್ತುನಿಷ್ಠ ವರದಿ ಪ್ರಕಟಿಸುವುದು ಪತ್ರಕರ್ತರ ಕರ್ತವ್ಯ. ತಪ್ಪು ಮಾಡಿದರೆ ನನ್ನ ಬಗ್ಗೆ ಬೇಕಾದರೂ ಸುದ್ದಿ ಮಾಡಿ. ನಾನು ಆಕ್ಷೇಪಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆ ಪತ್ರಿಕಾರಂಗ ಸಹ ಮಹತ್ವ ಪಡೆದಿದೆ ಎಂದು ಹೇಳಿದರು.ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ದಿ ಕೆಲಸಗಳು ವೇಗವಾಗಿ ನಡೆಯುತ್ತಿದೆ. ನೂತನ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ. ಲೋಕೋಪಯೋಗಿ ಇಲಾಖೆಯಿಂದ ಸುಮಾರು ೧೦ ಕೋಟಿ ರೂ. ವೆಚ್ಚದಲ್ಲಿ ೩೬ ಕಿ.ಮೀ. ರಸ್ತೆ, ಜಿಲ್ಲಾ ಪಂಚಾಯ್ತಿಯಿಂದ ೧೦.೩೦ ಕೋಟಿ ರೂ. ವೆಚ್ಚದಲ್ಲಿ ೩೧.೫೯ ಕಿ.ಮೀ. ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ಕೊಳವೆ ಬಾವಿ ನಿರ್ಮಾಣಕ್ಕೆ ೧ ಕೋಟಿ ರು. ಅನುದಾನ ಮಂಜೂರಾಗಿದೆ ಎಂದು ಹೇಳಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ, ಉಪಾಧ್ಯಕ್ಷ ಲೋಕೇಶ ಕುಮಾರ್, ಖಜಾಂಚಿ ಎಂ.ಜಿ.ರಾಘವನ್, ಜಿಲ್ಲಾ ಕಾರ್ಯದರ್ಶಿ ದೀಪಕ್‌ಸಾಗರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗಂಗಾಬಾಯಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಮಧುಮಾಲತಿ, ಲಲಿತಮ್ಮ ಇನ್ನಿತರರಿದ್ದರು.