ಪತ್ರಕರ್ತರು ಸಮಾಜಮುಖಿ, ಅಭಿವೃದ್ಧಿ ಚಿಂತನೆಯೊಂದಿಗೆ ಕೆಲಸ ಮಾಡಬೇಕು: ಪಿ.ರವಿಕುಮಾರ್

| Published : Mar 03 2025, 01:46 AM IST

ಪತ್ರಕರ್ತರು ಸಮಾಜಮುಖಿ, ಅಭಿವೃದ್ಧಿ ಚಿಂತನೆಯೊಂದಿಗೆ ಕೆಲಸ ಮಾಡಬೇಕು: ಪಿ.ರವಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಕರ್ತರಿಗೆ ವಿವೇಚನ ಇರಬೇಕು. ಯಾವುದನ್ನೂ, ಯಾರನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಒಂದು ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಬಹುದು ಇಲ್ಲವೇ, ಅಧೋಗತಿಗೂ ದೂಡುವಂತಹ ಸಾಮರ್ಥ್ಯ ಅವರಿಗೆ ಇರುತ್ತದೆ ಎಂಬುದನ್ನು ಮರೆಯಬಾರದು.

ಕನ್ನಡಪ್ರಭ ವಾರ್ತೆ ಮಂಡ್ಯ

ಪತ್ರಕರ್ತರು ಯಾವುದನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳದೆ ಸಮಾಜಮುಖಿ, ಅಭಿವೃದ್ಧಿಯ ಚಿಂತನೆಯೊಂದಿಗೆ ಕೆಲಸ ಮಾಡಬೇಕು ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಸಂಘದಿಂದ ಮಾಹಿತಿ ಆಯೋಗದ ನೂತನ ಆಯುಕ್ತ ಬದ್ರುದ್ದೀನ್ ಕೆ. ಮಾಣಿ ಹಾಗೂ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಡಿ.ಶಶಿಕುಮಾರ್ ಅವರಿಗೆ ಅಭಿನಂದನೆ ಮತ್ತು ಡೈರಿ ಬಿಡುಗಡೆ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರಿಗೆ ವಿವೇಚನ ಇರಬೇಕು. ಯಾವುದನ್ನೂ, ಯಾರನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಒಂದು ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಬಹುದು ಇಲ್ಲವೇ, ಅಧೋಗತಿಗೂ ದೂಡುವಂತಹ ಸಾಮರ್ಥ್ಯ ಅವರಿಗೆ ಇರುತ್ತದೆ ಎಂಬುದನ್ನು ಮರೆಯಬಾರದು ಎಂದರು.

ಪತ್ರಕರ್ತರ ಬರವಣಿಗೆ ಅತ್ಯುತ್ತಮವಾಗಿ ಸಮಾಜಕ್ಕೆ ಪೂರಕವಾಗಿರಬೇಕು. ನಿಮ್ಮ ವರದಿಯನ್ನು ಎಲ್ಲರೂ ಒಪ್ಪದಿದ್ದರೂ ಒಂದಿಬ್ಬರಾದರೂ ಒಪ್ಪಿಕೊಳ್ಳುತ್ತಾರೆ. ಅದರಿಂದ ಸಾಕಷ್ಟು ಪರಿಣಾಮಗಳೂ ಆಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ತಮ್ಮ ಅನುಭವ ಹಂಚಿಕೊಂಡರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಹಲವಾರು ಪತ್ರಕರ್ತರಿಗೆ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆಗಳು ಸಿಕ್ಕಿದೆ. ಇದರಿಂದ ಪತ್ರಕರ್ತರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಅನುಕೂಲವಾಗುತ್ತಿದೆ. ಬದ್ರುದ್ದೀನ್ ಅವರು ಮಾಹಿತಿ ಹಕ್ಕು ಆಯೋಗದ ಆಯುಕ್ತರಾಗಿದ್ದು, ಜನರಿಗೆ ಒಳ್ಳೆಯದನ್ನು ಮಾಡುವಂತಹ ಸಾಮರ್ಥ್ಯ ಅವರಿಗೆ ಎಂದರು.

ಡೈರಿ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪತ್ರಕರ್ತರಿಗೆ ತೀಕ್ಷ್ಣ ಜ್ಞಾನ, ಒಳ್ಳೆಯ ಆಲೋಚನೆ, ಹೃದಯವಂತಿಕೆ ಹಾಗೂ ಉತ್ತಮ ಬರವಣಿಗೆ ಇರಬೇಕು. ಇದರಿಂದ ಅವರು ಸಮಾಜವನ್ನು ಸರಿದಾರಿಗೆ ತರಲು, ಅಂಕು-ಡೊಂಕು ತಿದ್ದಲು ಸಹಕಾರಿಯಾಗುತ್ತದೆ ಎಂದರು.

ಒಳ್ಳೆಯದನ್ನು ಸರಿ ಎಂದು ಪ್ರತಿಪಾದಿಸುವ ಜೊತೆಗೆ ಕೆಟ್ಟದ್ದನ್ನೂ ಎತ್ತಿ ತೋರಿಸುವಂತಹ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ಅಧಿಕಾರಿಗಳಿಗಿಂತಲೂ ಪತ್ರಕರ್ತರಿಗೆ ಹೆಚ್ಚಿನ ಜವಾಬ್ದಾರಿಗಳಿವೆ ಎಂಬುದನ್ನು ಅರಿತು ಕೆಲಸ ಮಾಡಬೇಕು ಎಂದರು.

ಅಭಿನಂದನೆ ಸ್ವೀಕರಿಸಿದ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ.ಮಾಣಿ ಮಾತನಾಡಿ, ಪತ್ರಿಕೋದ್ಯಮದ ಹಾದಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರಲ್ಲದೇ, ಹೊಸ ಹುದ್ದೆಯ ಜವಾಬ್ದಾರಿ ನಿರ್ವಹಣೆ ಬಗ್ಗೆಯೂ ಸಂಕ್ಷಿಪ್ತವಾಗಿ ವಿವರಿಸಿದರು.

ಸಾಂವಿಧಾನಿಕ ಹುದ್ದೆಯಾಗಿರುವ ಆರ್‌ಟಿಎ ಆಯುಕ್ತರ ಅಧಿಕಾರ, ಶಿಷ್ಟಾಚಾರದ ನಡುವೆಯೂ ಸಮಾಜಕ್ಕೆ ಮತ್ತು ಪತ್ರಿಕಾ ಸಮುದಾಯಕ್ಕೆ ಒಳಿತನ್ನು ಮಾಡಬೇಕು ಎಂಬುದು ನನ್ನ ಮಹತ್ವಾಕಾಂಕ್ಷೆಯಾಗಿದೆ. ಜವಾಬ್ದಾರಿ ಅರಿತು ಕೆಲಸ ಮಾಡಿ ಈ ಕ್ಷೇತ್ರದಲ್ಲಿ ಬೆಳೆದ ಮಂಡ್ಯಕ್ಕೆ ಕೀರ್ತಿ ತರುವುದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ನವೀನ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಕಾರ್‍ಯದರ್ಶಿಗಳಾದ ಮತ್ತೀಕೆರೆ ಜಯರಾಂ, ಸೋಮಶೇಖರ್ ಕೆರಗೋಡು, ಮಾಜಿ ಅಧ್ಯಕ್ಷರಾದ ಕೆ.ಸಿ. ಮಂಜುನಾಥ್, ಬಿ.ಪಿ. ಪ್ರಕಾಶ್, ರಾಷ್ಟ್ರೀಯ ಮಂಡಳಿ ಸದಸ್ಯ ಜಿ.ಎಂ.ಬಾಲಕೃಷ್ಣ ಇತರರು ಭಾಗವಹಿಸಿದ್ದರು.