ನೆಲಮಂಗಲ: ಪತ್ರಕರ್ತರು ಸಮಾಜದ ಅಭಿವೃದ್ಧಿಗೆ ಸಲಹೆ, ಸೂಚನೆ ನೀಡಿದಾಗ ಅಭಿವೃದ್ಧಿಯ ವೇಗ ಕೂಡ ಹೆಚ್ಚಾಗುತ್ತದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು
ನೆಲಮಂಗಲ: ಪತ್ರಕರ್ತರು ಸಮಾಜದ ಅಭಿವೃದ್ಧಿಗೆ ಸಲಹೆ, ಸೂಚನೆ ನೀಡಿದಾಗ ಅಭಿವೃದ್ಧಿಯ ವೇಗ ಕೂಡ ಹೆಚ್ಚಾಗುತ್ತದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ನೆಲಮಂಗಲದ ಬಸವಣ್ಣ ದೇವರ ಮಠದ ಆವರಣದಲ್ಲಿ ಪ್ರೆಸ್ ಕ್ಲಬ್ ಕೌನ್ಸಿಲ್ ತಾಲೂಕು ಘಟಕ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ತಾಲೂಕು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಹಾಗೂ ಪತ್ರಿಕಾ ವಿತರಕರಿಗೆ ಸೈಕಲ್, ಜರ್ಕಿನ್ ವಿತರಣೆ ಮತ್ತು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಸಮಾಜದ ಅಭಿವೃದ್ಧಿಗಾಗಿ ಪತ್ರಕರ್ತರ ಸಲಹೆ, ಸೂಚನೆಗಳು ಬಹಳ ಮುಖ್ಯವಾಗಿದ್ದು, ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಪತ್ರಕರ್ತರು ಹೆಚ್ಚಿನ ಒತ್ತು ನೀಡಬೇಕು. ವರದಿಗಳ ಮೂಲ ಸಾಧ್ಯತೆಗಳು ಹಾಗೂ ಸಲಹೆಗಳ ಮೂಲಕ ವರದಿ ಮಾಡಿದಾಗ ಬಹಳಷ್ಟು ಅನುಕೂಲವಾಗುತ್ತದೆ. ಸರಿ ದಾರಿಯಲ್ಲಿ ಹೋಗುವ ಪತ್ರಕರ್ತರನ್ನು ಯಾರೇ ಟಾರ್ಗೆಟ್ ಮಾಡಿದರೂ ಏನೂ ಮಾಡಲು ಸಾಧ್ಯವಿಲ್ಲ. ಪತ್ರಿಕೋದ್ಯಮಕ್ಕೆ ವಿಶೇಷ ಅವಕಾಶವನ್ನು ಸಮಾಜ ನೀಡಿದೆ, ಆ ಗೌರವವನ್ನು ನಾವೆಲ್ಲರೂ ಕಾಪಾಡಿಕೊಂಡು ಹೋಗಬೇಕು ಎಂದರು.
ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಸಮಸಮಾಜ ನಿರ್ಮಾಣ ಮಾಡಲು ಹಾಗೂ ಸಮಾಜದ ಸರಿ-ತಪ್ಪುಗಳನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ಪತ್ರಿಕೋದ್ಯಮ ಕ್ಷೇತ್ರ ಮಾಡುತ್ತಿದೆ. ಆದರೆ ಇತ್ತೀಚಿನ ಕೆಲ ಬೆಳವಣಿಗೆಗಳು ಪತ್ರಿಕೋದ್ಯಮವನ್ನು ಪ್ರಶ್ನೆ ಮಾಡುವ ಮಟ್ಟಕ್ಕೆ ಹೋಗುತ್ತಿರುವುದು ಬೇಸರ ತಂದಿದ್ದರೂ, ಅನೇಕ ನೈಜ ವರದಿಗಳು ಸಮಾಜದ ಬದಲಾವಣೆಗೆ ಕಾರಣವಾಗಿವೆ ಎಂದರು.ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ : ಪ್ರೆಸ್ ಕ್ಲಬ್ ಕೌನ್ಸಿಲ್ ತಾಲೂಕು ಘಟಕದಿಂದ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೈರವಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶೇಖ್ ಕರೀಂ, ಕಾನೂನು ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಯಣ್ಣ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಿರಾಗ್ ಶೆಟ್ಟಿ, ಸಾಹಿತ್ಯ ಮತ್ತು ಇತಿಹಾಸ ತಜ್ಞರಾದ ಬಾಲಸುಬ್ರಹ್ಮಣ್ಯ ಜಿ.ರಾವ್ ಅವರಿಗೆ ತಾಲೂಕು ಪ್ರೆಸ್ ಕ್ಲಬ್ ಕೌನ್ಸಿಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪದಾಧಿಕಾರಿಗಳ ಪದಗ್ರಹಣ : ತಾಲೂಕು ಘಟಕದ ಅಧ್ಯಕ್ಷರಾಗಿ ವಿಜಯ್ ಹೊಸಪಾಳ್ಯ, ಉಪಾಧ್ಯಕ್ಷರಾಗಿ ಮಾರುತಿ ಮತ್ತು ಸಿದ್ಧರಾಜು, ಪ್ರಧಾನ ಕಾರ್ಯದರ್ಶಿಯಾಗಿ ರಾಮಪ್ರಸಾದ್, ಜಂಟಿ ಕಾರ್ಯದರ್ಶಿಯಾಗಿ ಸಿದ್ಧರಾಜು ಮತ್ತು ಮೊಹಮ್ಮದ್ ಅಲೀಂ, ಸಂಘಟನಾ ಕಾರ್ಯದರ್ಶಿಯಾಗಿ ರಾಮಚಂದ್ರಯ್ಯ, ಜಿಲ್ಲಾಪ್ರತಿನಿಧಿಗಳಾಗಿ ಶ್ರೀಧರ್ ಮತ್ತು ರಾಮಚಂದ್ರಯ್ಯ ಪದಗ್ರಹಣ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಅವರಿಗೆ ನೇಮಕಾತಿ ಪತ್ರ ನೀಡಲಾಯಿತು.ಸೈಕಲ್, ಜರ್ಕಿನ್ ವಿತರಣೆ : ನೆಲಮಂಗಲ ತಾಲೂಕಿನ 80ಕ್ಕೂ ಹೆಚ್ಚು ಪತ್ರಿಕಾ ವಿತರಕರಿಗೆ ಜರ್ಕಿನ್ ಹಾಗೂ ಪತ್ರಿಕಾ ಏಜೆನ್ಸಿಗಳಿಗೆ ಸೈಕಲ್ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ ಹಾಗೂ ವರದಿಗಳ ಪ್ರತಿ ಸಂಗ್ರಹ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ಈ ಸಂದರ್ಭದಲ್ಲಿ ಶಿವಾನಂದಶ್ರಮದ ಶ್ರೀ ರಮಣಾನಂದನಾಥ ಸ್ವಾಮೀಜಿ, ಬಮೂಲ್ ನಿರ್ದೇಶಕ ಭವಾನಿಶಂಕರ್ ಬೈರೇಗೌಡ, ಎನ್ಪಿಎ ಮಾಜಿ ಅಧ್ಯಕ್ಷರಾದ ಎಂ.ಕೆ. ನಾಗರಾಜು, ಎಂ. ನಾರಾಯಣಗೌಡ, ಹೇಮಂತ್ಕುಮಾರ್, ಹರ್ಷ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಎಸ್. ಶಿವಕುಮಾರ್, ಕುಮುದ್ವತಿ ಸಂಸ್ಥೆಯ ಮಾಲೀಕ ಚಿಕ್ಕಹನುಮೇಗೌಡ, ಹುಸ್ಕೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಡಾ. ಬಿ. ರಮೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತರಾಜು, ವಕೀಲ ಹನುಮಂತೇಗೌಡ, ತಾಪಂ. ಮಾಜಿ ಸದಸ್ಯ ಮುನಿರಾಜು, ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯಾಧ್ಯಕ್ಷ ರಾಘವೇಂದ್ರಚಾರ್, ಪ್ರಧಾನ ಕಾರ್ಯದರ್ಶಿ ಆಶಾ, ಕಾರ್ಯದರ್ಶಿ ಕೊಟ್ರೇಶ್, ಜಿಲ್ಲಾಧ್ಯಕ್ಷ ಭಾನುಪ್ರಕಾಶ್, ತಾಲೂಕು ಅಧ್ಯಕ್ಷ ವಿಜಯ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಟ್ಟೆಕೆರೆ ಬಾಬು, ಟಿಎಪಿಸಿಎಂಎಸ್ ನಿರ್ದೇಶಕ ಗುರುಪ್ರಸಾದ್, ಚಿಲುಮೆ ಸಂಸ್ಥೆಯ ಅಧ್ಯಕ್ಷ ಚಿಲುಮೆ ರವಿಕುಮಾರ್ ಮತ್ತಿತರರು ಹಾಜರಿದ್ದರು.ಪೋಟೋ 2 : ನೆಲಮಂಗಲ ನಗರದ ಬಸವಣ್ಣ ದೇವರ ಮಠದ ಆವರಣದಲ್ಲಿ ಪ್ರೆಸ್ ಕ್ಲಬ್ ಕೌನ್ಸಿಲ್ ತಾಲೂಕು ಘಟಕದಿಂದ ಆಯೋಜಿಸಲಾಗಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಶಾಸಕ ಎನ್.ಶ್ರೀನಿವಾಸ್ ಹಾಗೂ ಗಣ್ಯರು ಸಾಧಕರನ್ನು ಅಭಿನಂದಿಸಿದರು