ಪತ್ರಕರ್ತರೇ ಸತ್ಯಕ್ಕಾಗಿ ಪೆನ್ನು, ಕ್ಯಾಮೆರಾ ಬಳಸಿ: ಚುಂಚನಗಿರಿ ಶ್ರೀ

| Published : Aug 01 2025, 12:00 AM IST

ಸಾರಾಂಶ

ವಿದ್ಯೆ ಬಂದ ಮೇಲೆ ಶಿಕ್ಷಣದ ಬಗ್ಗೆ ಯಾರೂ ಕೂಡ ಮಾತನಾಡುತ್ತಿಲ್ಲ. ನಿಮಗೆಷ್ಟು ಕೌಶಲ್ಯವಿದೆ ಎಂದು ಕೇಳುತ್ತಾರೆ. ಕೌಶಲ್ಯವೂ ಕೂಡ ಪಕ್ಕಕ್ಕೆ ಸರಿಯುತ್ತಿದೆ. ಪವಿತ್ರವಾದ ಬರಹಗಾರರು ಮತ್ತು ಪತ್ರಿಕಾ ವರದಿಗಾರರಾಗಬೇಕೆಂದರೆ ಪತ್ರಿಕೆಯ ವಿಚಾರಕ್ಕೆ ಸಂಬಂಧಿಸಿದ ಕೌಶಲ್ಯಾಧಾರಿತ ತರಬೇತಿಗಳು ನಡೆಯುವ ಅನಿವಾರ್ಯತೆ ಇದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ದೇವಸ್ಥಾನದಲ್ಲಿರುವ ಘಂಟೆ ಎಷ್ಟು ಪವಿತ್ರವೋ ಪತ್ರಕರ್ತರಲ್ಲಿರುವ ಪೆನ್ನು ಮತ್ತು ಕ್ಯಾಮೆರಾ ಕೂಡ ಅಷ್ಟೇ ಪವಿತ್ರವಾದದ್ದು. ಸತ್ಯ ಮತ್ತು ವಸ್ತು ನಿಷ್ಠೆಗೋಸ್ಕರ ಪೆನ್ನು ಮತ್ತು ಕ್ಯಾಮೆರಾಗಳನ್ನು ಬಳಸಿದಾಗ ಮಾತ್ರ ಅದಕ್ಕಿರುವ ಪಾವಿತ್ರ್ಯತೆ ಉಳಿಯುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಆಧಾರಸ್ತಂಭವಾಗಿರುವ ಪತ್ರಕರ್ತರಿಗೆ ಬಹುದೊಡ್ಡ ಜವಾಬ್ದಾರಿಯಿದೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಕೌಶಲ್ಯ ಮತ್ತು ತರಬೇತಿ ಇರುತ್ತದೆ. ನಾವು ಬಳಸುವ ಆಯುಧಗಳು ಮೊಂಡಾದರೆ ತನ್ನ ತೀಕ್ಷ್ಣತೆ ಮತ್ತು ಪ್ರಭುತ್ತತೆಯನ್ನು ಕಳೆದುಕೊಳ್ಳುತ್ತವೆ ಎಂದರು.

ವಿದ್ಯೆ ಬಂದ ಮೇಲೆ ಶಿಕ್ಷಣದ ಬಗ್ಗೆ ಯಾರೂ ಕೂಡ ಮಾತನಾಡುತ್ತಿಲ್ಲ. ನಿಮಗೆಷ್ಟು ಕೌಶಲ್ಯವಿದೆ ಎಂದು ಕೇಳುತ್ತಾರೆ. ಕೌಶಲ್ಯವೂ ಕೂಡ ಪಕ್ಕಕ್ಕೆ ಸರಿಯುತ್ತಿದೆ. ಪವಿತ್ರವಾದ ಬರಹಗಾರರು ಮತ್ತು ಪತ್ರಿಕಾ ವರದಿಗಾರರಾಗಬೇಕೆಂದರೆ ಪತ್ರಿಕೆಯ ವಿಚಾರಕ್ಕೆ ಸಂಬಂಧಿಸಿದ ಕೌಶಲ್ಯಾಧಾರಿತ ತರಬೇತಿಗಳು ನಡೆಯುವ ಅನಿವಾರ್ಯತೆ ಇದೆ ಎಂದರು.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಪತ್ರಕರ್ತರಾದವರು ಯಾವುದೇ ಒಬ್ಬ ರಾಜಕಾರಣಿ ಅಥವಾ ಒಂದು ಪಕ್ಷದ ಪರವಾಗಿರಬಾರದು. ಸಮಾಜದ ಒಳಿತಿಗೆ ಒತ್ತು ನೀಡಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಸುಳ್ಳು ಹಾಗೂ ಸಮಾಜದ ಸ್ವಾಸ್ತ್ಯ ಕೆಡಿಸುವ ವಿಚಾರಗಳನ್ನು ಪ್ರಸ್ತಾಪಿಸುವುದು ಹೆಚ್ಚಾಗುತ್ತಿದೆ. ಮಾಧ್ಯಮಗಳು ನಿರ್ಭೀತಿಯಿಂದ ನ್ಯಾಯಸಮ್ಮತ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸುದ್ದಿಗಳು ಸತ್ಯಾಂಶಗಳಿಂದ ಕೂಡಿರಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮಾಧ್ಯಮ ರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಶಾಸಕಾಂಗ ನ್ಯಾಯಾಂಗ ಮತ್ತು ಕಾರ್ಯಾಂಗ ಈ ಮೂರು ಅಂಗಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ವಿಶ್ಲೇಷಣೆ ಮಾಡಿ ಅವೆಲ್ಲವನ್ನೂ ಸಮಾಜದ ಗಮನಕ್ಕೆ ತಿಳಿಸುವ ಕೆಲಸ ಮಾಡುವುದರಿಂದ ಮಾಧ್ಯಮ ರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥಂಭವೆಂದು ಕರೆಯಲಾಗುತ್ತದೆ ಎಂದರು.

ಸಮಾಜವನ್ನು ಸರಿದಾರಿಗೆ ಕರೆದೊಯ್ಯುವ ಸಾಮಾಜಿಕ ಹೊಣೆಗಾರಿಕೆ ಪತ್ರಕರ್ತರಲ್ಲಿರುತ್ತದೆ. ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿ ಇರುವುದರಿಂದ ಆರೋಗ್ಯಕರ ಸಮಾಜವನ್ನು ಸೃಷ್ಟಿಸಬೇಕು. ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಹಳಷ್ಟು ಅನಾರೋಗ್ಯಕರ ಪೈಪೋಟಿಯನ್ನು ಕಾಣುತ್ತಿದ್ದೇವೆ. ಈ ಪೈಪೋಟಿಯಿಂದ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡಲು ಸಾಧ್ಯವಿಲ್ಲ ಎಂದರು.

ವೇದಿಕೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ.ಶರತ್‌ಕುಮಾರ್, ಶಿಕ್ಷಣ ಕ್ಷೇತ್ರದ ಸಾಧಕ ಎನ್.ಮುರಳೀಧರ್, ಕೃಷಿ ಕ್ಷೇತ್ರದ ಸಾಧಕ ವಿರೂಪಾಕ್ಷಮೂರ್ತಿ, ಮಾಧ್ಯಮ ಕ್ಷೇತ್ರದ ಸಾಧಕ ಎ.ಎಚ್.ಬಾಲಕೃಷ್ಣ, ಹಿರಿಯ ಪತ್ರಿಕಾ ವಿತರಕ ರಾಮಣ್ಣ ಮತ್ತು ಪೌರಕಾರ್ಮಿಕರಾದ ಪಾರ್ವತಮ್ಮ ಅವರನ್ನು ಡಾ.ನಿರ್ಮಲಾನಂದನಾಥಶ್ರೀಗಳು ಮತ್ತು ಸಚಿವ ಎನ್.ಚಲುವರಾಯಸ್ವಾಮಿ ಅಭಿನಂದಿಸಿದರು.

ಸಮಾರಂಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕರಡಹಳ್ಳಿ ಸೀತಾರಾಮು ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚನಗಿರಿ ಮಠದ ಸತ್ಕೀರ್ತಿನಾಥಸ್ವಾಮೀಜಿ, ರಾಜ್ಯ ಸಂಘದ ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಮು, ಸೋಮಶೇಖರ ಕೆರಗೋಡು, ಜಿಲ್ಲಾಧ್ಯಕ್ಷ ಕೆ.ಎನ್.ನವೀನ್‌ಕುಮಾರ್, ರಾಜ್ಯ ಸಮಿತಿ ಸದಸ್ಯ ಸಿ.ಎನ್.ಮಂಜುನಾಥ್, ಜಿಲ್ಲಾ ಮಾಜಿ ಅಧ್ಯಕ್ಷರಾದ ಕೆ.ಸಿ.ಮಂಜುನಾಥ್, ಬಿ.ಪಿ.ಪ್ರಕಾಶ್, ಕಾರ್ಯದರ್ಶಿ ಆನಂದ್, ಖಜಾಂಚಿ ನಂಜುಂಡಸ್ವಾಮಿ, ತಾಲೂಕು ಸಂಘದ ಮಾಜಿ ಅಧ್ಯಕ್ಷ ಪಿ.ಜೆ.ಜಯರಾಮ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಮಂದಿ ಪತ್ರಕರ್ತರು ಹಾಗೂ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.