ಕುಕನೂರು ತಾಲೂಕಿನ ಮಂಡಲಗೇರಿ ಗ್ರಾಮದ ಜಗದ್ಗುರು ಶ್ರೀ ತೋಂಟದಾರ್ಯ ಐಟಿಐ ಕಾಲೇಜಿನಲ್ಲಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕುಕನೂರು: ಗ್ರಾಮೀಣ ಮಟ್ಟದಿಂದ ಸಮಾಜಾಭಿವೃದ್ಧಿಗೆ ಅಮೃತ ನೀಡುವ ಕಾರ್ಯವನ್ನು ಪತ್ರಿಕೆ ಹಾಗೂ ಪತ್ರಕರ್ತರು ಮಾಡುತ್ತಾರೆ ಎಂದು ದಳಪತಿ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ಗೌಡ ಹೊರಪೇಟೆ ಹೇಳಿದರು.
ತಾಲೂಕಿನ ಮಂಡಲಗೇರಿ ಗ್ರಾಮದ ಜಗದ್ಗುರು ಶ್ರೀ ತೋಂಟದಾರ್ಯ ಐಟಿಐ ಕಾಲೇಜಿನಲ್ಲಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ನ್ಯಾಯ, ನಿಷ್ಠೆ, ಆಮಿಷಕ್ಕೆ ಒಳಗಾಗದೇ ನಿರ್ಭಯವಾಗಿ ಸುದ್ದಿ ಮಾಡಬೇಕು. ಅಂದಾಗ ಪತ್ರಿಕಾ ಕಾರ್ಯಕ್ಕೆ ಶೋಭೆ. ಸುಳ್ಳು ಸುದ್ದಿಗಳು ನಡುವೆ ನಿಖರವಾಗಿ ಜಾತಿ-ವಿಜಾತಿ, ಬಡವ-ಬಲ್ಲಿದ ಅನ್ನದೇ ಸುದ್ದಿ ಬಿತ್ತರಿಸುವ ಕಾರ್ಯ ಗಟ್ಟಿತನಕ್ಕೆ ಒಳಗಾಗಬೇಕಿದೆ. ಸಮಾಜಮುಖಿ ಆಗಿ ಪತ್ರಕರ್ತರು ಅನುಭವಯುತವಾಗಿ ಇರಬೇಕು ಎಂದರು.ತಾಪಂ ಮಾಜಿ ಅಧ್ಯಕ್ಷೆ ಮಹಾದೇವಿ ಕಳಕಪ್ಪ ಕಂಬಳಿ ಮಾತನಾಡಿ, ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗವನ್ನು ಸ್ಥಿರದಲ್ಲಿಡುವುದು ಪತ್ರಿಕಾ ರಂಗ. ಸುದ್ದಿ ಸಂಗ್ರಹ, ಬಿತ್ತರ, ವಿತರಣೆ ಕಾರ್ಯ ಮಾಡುವುದು ಶ್ರಮದ ಸಂಕೇತ. ಪತ್ರಕರ್ತರು, ಪತ್ರಿಕಾ ಮಂಡಳಿ ಸಮಾಜದ ನಿಜ ಶ್ರಮಿಕರು. ಸಮಾಜ ಧ್ವನಿಯಾಗಿ ಪತ್ರಿಕಾ ರಂಗ ಕಾರ್ಯ ಮಾಡುತ್ತಿದೆ. ಪತ್ರಕರ್ತರು ಸಮಾಜಮುಖಿ ಕಾರ್ಯಕ್ಕೆ ಅರ್ಪಿಸಿಕೊಂಡ ಇರುತ್ತಾರೆ. ಮಾದ್ಯಮ ಸರ್ಕಾರ ಹಾಗೂ ಜನಸಾಮಾನ್ಯರ ಸೇತುವೆ ಆಗಿ ಕೆಲಸ ಮಾಡುತ್ತದೆ. ಕಡಿಮೆ ವಂತಿಕೆಯಲ್ಲಿ ಗ್ರಾಮೀಣ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಅವರ ಜೀವನಕ್ಕೆ ಸರ್ಕಾರ ಸ್ಪಂದಿಸಬೇಕು. ಪತ್ರಿಕಾ ಮಾಧ್ಯಮಕ್ಕೆ ಸರ್ಕಾರ ಸಹ ಅನುದಾನ ನೀಡಬೇಕು. ಯೋಜನೆ ರೂಪಿಸಬೇಕು ಎಂದರು.
ಹಿರಿಯ ಸಾಹಿತಿ ಕೆ.ಬಿ. ಬ್ಯಾಳಿ ಮಾತನಾಡಿ, ಪತ್ರಕರ್ತರು ಅಭ್ಯಾಸ ನಿರತರಾಗಿ ವರದಿ ಮಾಡಿದಾಗ ಮಹತ್ವಪೂರ್ಣ ಆಗಿರುತ್ತವೆ ಎಂದರು.ಸಮಾಜ ಸೇವಕ ಶಿವಣ್ಣ ರಾಯರೆಡ್ಡಿ, ತಾಪಂ ಇಒ ಬೆಟ್ಟದಪ್ಪ ಮಾಳೆಕೊಪ್ಪ ಮಾತನಾಡಿದರು. ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಲ್ಲಾವುದ್ದೀನ್ ಎಮ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಘದಿಂದ ಕೊಡಮಾಡಿದ ದತ್ತಿ ಪ್ರಶಸ್ತಿ ಪುರಸ್ಕೃತ ರುದ್ರಪ್ಪ ಭಂಡಾರಿ, ಜಿಲ್ಲಾ ಉತ್ತಮ ವರದಿಗಾರ ಪ್ರಶಸ್ತಿ ಪುರಸ್ಕೃತ ಬಸವರಾಜ ಕೊಡ್ಲಿ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಬೆಣಕಲ್ಲ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಹಂಚ್ಯಾಳಪ್ಪ ತಳವಾರ, ಹನುಮಂತಪ್ಪ ಉಪ್ಪಾರ, ಶಿವಮೂರ್ತಿ ದಳವಾಯಿ, ಪ್ರಾಚಾರ್ಯ ಸಿ.ಎಸ್. ಅಂಗಡಿ, ಎಸ್.ವಿ. ಜಂಗ್ಲಿ, ಗಾಯಕ ಮೇಘರಾಜ ಜಿಡಗಿ, ಲಿಂಗರಾಜ ಹೊರಪೇಟೆ ಇದ್ದರು. ಪತ್ರಕರ್ತ ರುದ್ರೇಶ್ ಆರುಬೆರಳಿನ್ ಕಾರ್ಯಕ್ರಮ ನಿರೂಪಿಸಿದರು, ಪತ್ರಕರ್ತ ಅಮರೇಶ್ವರಸ್ವಾಮಿ ಕಂದಗಲ್ಲಮಠ ಸ್ವಾಗತಿಸಿದರು.