2023ರ ಮೇ ೧ರಿಂದ ಆರಂಭಿಸಿದ ಈ ದಂಡ ನಮಸ್ಕಾರ ಯಾತ್ರೆ ದೇಶಾದ್ಯಂತ ೩೦ ಸಾವಿರ ಕಿಮೀ ಸಂಚರಿಸುವ ಸಂಕಲ್ಪ ಹೊಂದಿದ್ದು, ಇಲ್ಲಿಯವರೆಗೆ ೧೨ ರಾಜ್ಯಗಳಲ್ಲಿ ಸಂಚರಿಸಿದ್ದಾರೆ.

ಯಲ್ಲಾಪುರ: ಸನಾತನ ಧರ್ಮ, ಗೋಮಾತೆಯ ರಕ್ಷಣೆ ಹಾಗೂ ಗೋಮಾತೆಗೆ ರಾಷ್ಟ್ರೀಯ ಮಾತೆಯ ಸ್ಥಾನ ನೀಡುವ ಸಂದೇಶ ಸಾರುವ ಉದ್ದೇಶದಿಂದ ದಂಡ ನಮಸ್ಕಾರದ ಮೂಲಕ ಇಡೀ ಭಾರತವನ್ನು ಪರ್ಯಟನೆ ಮಾಡುತ್ತಿರುವ ಉತ್ತರ ಪ್ರದೇಶದ ಬರೇಲಿಯದ ನರೇಶ ಗಂಗಾವರ್ ಮಹಾರಾಜ್ ಸುಮಾರು ೧೦,೮೦೦ ಕಿಮೀ ಕ್ರಮಿಸಿ, ಶುಕ್ರವಾರ ಯಲ್ಲಾಪುರಕ್ಕೆ ಆಗಮಿಸಿದ್ದರು.

2023ರ ಮೇ ೧ರಿಂದ ಆರಂಭಿಸಿದ ಈ ದಂಡ ನಮಸ್ಕಾರ ಯಾತ್ರೆ ದೇಶಾದ್ಯಂತ ೩೦ ಸಾವಿರ ಕಿಮೀ ಸಂಚರಿಸುವ ಸಂಕಲ್ಪ ಹೊಂದಿದ್ದು, ಇಲ್ಲಿಯವರೆಗೆ ೧೨ ರಾಜ್ಯಗಳಲ್ಲಿ ಸಂಚರಿಸಿದ್ದಾರೆ. ನರೇಶ ಮಹಾರಾಜ್ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಒಂದು ಶಾಲೆಯನ್ನು ಕೂಡ ನಡೆಸುತ್ತಿದ್ದಾರೆ. ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ಈ ಸಂಕಲ್ಪ ಯಾತ್ರೆಯನ್ನು ಕೈಗೊಂಡಿದ್ದು, ತಮ್ಮೊಂದಿಗೆ ಶಕ್ತಿಮಾತೆಯ ಪ್ರತಿಮೆಯನ್ನು ಕೊಂಡೊಯ್ಯುತ್ತಿದ್ದಾರೆ. ಪ್ರತಿನಿತ್ಯ ೭- ೮ ಕಿ.ಮೀ ದಂಡ ನಮಸ್ಕಾರ ಹಾಕುವ ಇವರು, ನಿತ್ಯಕ್ಕೆ ಒಂದೇ ಬಾರಿ ಭೋಜನ ಸೇವಿಸುವ ಪದ್ಧತಿ ಇಟ್ಟುಕೊಂಡಿದ್ದಾರೆ.

೧೨ ವರ್ಷ ಬ್ರಹ್ಮಚರ್ಯ ಸನ್ಯಾಸ ವ್ರತವನ್ನು ಆಚರಿಸುತ್ತಿರುವ ಇವರು, ಯಾರ ಬಳಿಯೂ ಆಹಾರ ಸ್ವೀಕರಿಸದೇ ಸ್ವತಃ ಅಡುಗೆ ಮಾಡಿ ಊಟ ಮಾಡುತ್ತಿದ್ದಾರೆ. ಪ್ರತಿನಿತ್ಯ ತಮ್ಮ ಯಾತ್ರೆಗೆ ಸಾವಿರಾರು ರು. ಖರ್ಚು ತಗುಲುತ್ತಿದ್ದು, ತಾವು ಯಾರಿಂದಲೂ ಹಣದ ಬೇಡಿಕೆ ಇಡುತ್ತಿಲ್ಲ ಎಂದ ಅವರು, ಭಕ್ತರು ಭಕ್ತಿಯಿಂದ ನೀಡಿದಲ್ಲಿ ಕಾಣಿಕೆ ರೂಪದಲ್ಲಿ ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಗೋಕರ್ಣ, ಕೊಲ್ಲೂರು, ರಾಮೇಶ್ವರದವರೆಗೆ ಹೋಗುವ ಮಾರ್ಗಮಧ್ಯದಲ್ಲಿ ಸಿಗುವ ಕ್ಷೇತ್ರಗಳನ್ನು ಸಂಚರಿಸುತ್ತ ದೇಶವ್ಯಾಪಿ ಸಂಚರಿಸುವುದಾಗಿ ತಿಳಿಸಿದ್ದಾರೆ.