ಸಾರಾಂಶ
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿನ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರಿನಲ್ಲಿ ಸತ್ಯಮೇವ ಜಯತೇ, ಸತ್ಯಕ್ಕೆ ಸಂದ ಜಯ ಎಂಬ ಪ್ಲೇ ಕಾರ್ಡ್ ಗಳನ್ನು ಪ್ರದರ್ಶಿಸುವ ಮೂಲಕ ಸಂಭ್ರಮಿಸಿದರು.
ನಗರದ ರಾಮಸ್ವಾಮಿ ವೃತ್ತದಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಸಿಹಿ ಹಂಚಿ, ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಡೊಳ್ಳಿನ ಸದ್ದಿಗೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು ಸ್ಟೆಪ್ಸ್ ಹಾಕಿ, ಸಂಭ್ರಮಿಸಿ, ಸತ್ಯಕ್ಕೆ ಸಂದ ಜಯ ಎಂದು ಘೋಷಣೆ ಕೂಗಿದರು.
ದರೋಡೆಕೊರರನ್ನು ಸತ್ಯ ಹರಿಶ್ಚಂದ್ರ ಎಂದು ಬಿಂಬಿಸಿಕೊಳ್ಳುತ್ತಿದ್ದರು. ಇಂದು ನಮ್ಮ ನಾಯಕ ಸಿದ್ದರಾಮಯ್ಯಗೆ ಜಯ ಸಿಕ್ಕಿದೆ ಎಂದು ಎಂ.ಕೆ. ಸೋಮಶೇಖರ್ ಹರ್ಷ ವ್ಯಕ್ತಪಡಿಸಿದರು.
ಸತ್ಯಮೇವ ಜಯತೇ:
ಇನ್ನೂ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವ ಕೋರಿಕೆಯನ್ನು ಹೈಕೋರ್ಟ್ ನಿಕಾರಿಸಿರುವುದನ್ನು ಸ್ವಾಗತಿಸಿ ಕಾಂಗ್ರೆಸ್ ಮುಖಂಡರು, ಸತ್ಯಮೇವ ಜಯಮೇವ ಜಯತೇ ಪ್ಲೇಕಾರ್ಡ್ ಪ್ರದರ್ಶಿಸಿ ಸಂಭ್ರಮಾಚರಣೆ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಿಂದ ಸತ್ಯಮೇವ ಜಯತೆ ಎಂಬ ಪ್ಲೇಕಾರ್ಡ್ ಗಳನ್ನು ಹಿಡಿದು ದಾಸಪ್ಪ ವೃತ್ತದವರೆಗೆ ಸಾಗಿ ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು. ಅಲ್ಲದೆ, ಸಿಹಿ ಹಂಚಿ ಸಂಭ್ರಮಿಸಿದರು.
ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮಾಜಿ ಮೇಯರ್ ಬಿ.ಎಲ್. ಭೈರಪ್ಪ, ಮುಖಂಡರಾದ ಎಂ. ಶಿವಣ್ಣ, ಗಿರೀಶ್, ಕೆ. ಮಹೇಶ್ ಮೊದಲಾದವರು ಇದ್ದರು.