ಬ್ಯಾಡಗಿ: ತಾಲೂಕಿನಲ್ಲಿ ವಿಜಯದಶಮಿ ಹಬ್ಬವನ್ನು 2 ದಿನಗಳ ಕಾಲ ಸಂಭ್ರಮ, ಸಡಗರ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು, ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬರದ ಛಾಯೆ ನಡುವೆಯೇ ಹಬ್ಬದ ಸಂಭ್ರಮ ಮನೆಮಾಡಿತ್ತು, ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆಗಳು ಹಾಗೂ ಸಾಂಪ್ರದಾಯಿಕ ಆಚರಣೆಗಳ ಮೂಲಕ ಜನರು ವಿಜಯದಶಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಪಟ್ಟಣದ ಪ್ರಮುಖ ಮೆಣಸಿನಕಾಯಿ ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಸ್ವಚ್ಛ ಗೊಳಿಸಿ, ತಳಿರು ತೋರಣ ಹಾಗೂ ಹೂಗಳಿಂದ ಅಲಂಕರಿಸಿದ್ದರು. ಬಳಿಕ ತಮ್ಮ ಅಂಗಡಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ವ್ಯಾಪಾರ-ವಹಿವಾಟಿನಲ್ಲಿ ಉತ್ತಮ ಪ್ರಗತಿ, ಆರ್ಥಿಕ ಸಮೃದ್ಧಿ ಹಾಗೂ ಕುಟುಂಬದ ಸುಖ-ಶಾಂತಿಗಾಗಿ ಪ್ರಾರ್ಥಿಸಿದರು. ವ್ಯಾಪಾರಕ್ಕೆ ಬಳಸುವ ತೂಕದ ಯಂತ್ರಗಳು, ಲೆಕ್ಕಪತ್ರಗಳು ಹಾಗೂ ವಿವಿಧ ಉಪಕರಣಗಳನ್ನು ಪೂಜಿಸಿ, ಸಿಹಿ ಹಂಚುವ ಮೂಲಕ ಹಬ್ಬದ ಸಂತಸವನ್ನು ಪರಸ್ಪರ ಹಂಚಿಕೊಂಡರು. ಈ ಸಂದರ್ಭದಲ್ಲಿ ಅಂಗಡಿಗಳಿಗೆ ಅಳವಡಿಸಿದ ವಿದ್ಯುತ್ ದೀಪಾಲಂಕಾರ ಎಲ್ಲರ ಗಮನ ಸೆಳೆಯಿತುಕಾಯಕದ ಪರಿಕರಗಳಿಗೆ ಪೂಜೆ: ವಿಜಯದಶಮಿ ಹಾಗೂ ಆಯುಧ ಪೂಜೆಯ ಹಿನ್ನೆಲೆಯಲ್ಲಿ ವಿವಿಧ ವೃತ್ತಿಗಳಲ್ಲಿ ತೊಡಗಿರುವವರು ತಮ್ಮ ಕಾಯಕದ ಪರಿಕರಗಳಿಗೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಿದರು. ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಿ, ಹೂವಿನಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ರೈತರು ಕೃಷಿ ಉಪಕರಣಗಳು, ಟ್ರ್ಯಾಕ್ಟರ್ಗಳು ಹಾಗೂ ಕೃಷಿ ಚಟುವ ಟಿಕೆಗಳಿಗೆ ಬಳಸುವ ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಿ ಉತ್ತಮ ಫಸಲು, ಸಮೃದ್ಧಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಯಶಸ್ಸು ದೊರೆಯಲಿ ಎಂದು ಪ್ರಾರ್ಥಿಸಿದರು.
ಮಾರುಕಟ್ಟೆಯಲ್ಲಿ ಕಳೆಗಟ್ಟಿದ ಹಬ್ಬ: ಪಟ್ಟಣದ ಮಾರುಕಟ್ಟೆ ಪ್ರದೇಶಗಳಲ್ಲಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ವಾತಾವರಣ ಕಂಡು ಬಂದರೆ, ಅಂಗಡಿ-ಮುಂಗಟ್ಟುಗಳಲ್ಲಿ ಪೂಜಾ ಕಾರ್ಯಗಳು ಸಂಭ್ರಮದಿಂದ ನಡೆದವು. ವ್ಯಾಪಾರಸ್ಥರು, ಕಾರ್ಮಿಕರು ಹಾಗೂ ಸಾರ್ವಜನಿಕರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬದ ಸಂತಸದಲ್ಲಿ ಭಾಗಿಯಾದರು.ಗ್ರಾಮೀಣ ಭಾಗದಲ್ಲೂ ಹಬ್ಬದ ಕಳೆ: ತಾಲೂಕಿನ ಗ್ರಾಮೀಣ ಭಾಗದಲ್ಲಿಯೂ ವಿಜಯದಶಮಿ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು. ಗ್ರಾಮಗಳ ಮನೆಮನೆಗಳಲ್ಲಿ ಸ್ವಚ್ಛತೆ, ಅಲಂಕಾರ ಹಾಗೂ ಪೂಜಾ ಕಾರ್ಯಗಳು ನಡೆದವು. ಮನೆಗಳ ಮುಂದೆ ರಂಗೋಲಿ ಬಿಡಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಜನರು ಕುಟುಂಬದ ಒಳಿತಿಗಾಗಿ ಪ್ರಾರ್ಥಿಸಿದರು. ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ರೈತ ಕುಟುಂಬಗಳು ತಮ್ಮ ಜಮೀನು, ಕೃಷಿ ಉಪಕರಣಗಳು ಹಾಗೂ ಜಾನುವಾರುಗಳಿಗೆ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸಿದರು.ಪ್ರಸಕ್ತ ವರ್ಷ ವರುಣನ ಅವಕೃಪೆಯಿಂದ ಜನರು ಖುಷಿಯಾಗಿ ಹಬ್ಬದಾಚರಣೆಯಲ್ಲಿ ತೊಡಗಲು ಸಾಧ್ಯವಿಲ್ಲದಂತಾಗಿದೆ, ಆದರೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾತ್ರ ವರ್ತಕರು ಅತ್ಯಂತ ಸಂಭ್ರದಿಂದ ಹಬ್ಬದಾಚರಣೆಯಲ್ಲಿ ತೊಡಗಿದ್ದು ಮತಕ್ಷೇತ್ರದ ಸರ್ವರಿಗೂ ದೇವರು ಸುಖಶಾಂತಿ ಹಾಗೂ ಸಮೃದ್ಧಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದ್ದಾರೆ.