ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸಾಧಿಸುವ ಹಂಬಲ, ಛಲ ಮತ್ತು ಶ್ರಮ ಇದ್ದರೆ ಸಾಧನೆಗೆ ವಯಸ್ಸು ಎಂದೂ ಅಡ್ಡಿಪಡಿಸದು ಎಂದು ಜೆಎಸ್ಎಸ್ ದಂತ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಹಿಮಾಲಯ ಪರ್ವತಾರೋಹಿ ಡಾ. ಉಷಾ ಹೆಗ್ಡೆ ತಿಳಿಸಿದರು.ಮೈಸೂರಿನ ಜೆ.ಪಿ. ನಗರದ ಜೆಎಸ್ಎಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ 20224- 25ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಗೆ ಸಾಧಿಸುವ ಹಂಬಲವಿದ್ದು, ಛಲದಿಂದ ಶ್ರಮಪಟ್ಟರೆ ಆತನ ಸಾಧನೆಗೆ ವಯಸ್ಸು ಎಂದೂ ಅಡ್ಡಿ ಪಡಿಸುವುದಿಲ್ಲ. ಇದಕ್ಕೆ ತಾವು 53ರ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಪರಿಯೇ ಸಾಕ್ಷಿ ಎಂದು ಹೇಳಿದರು.ವಿದ್ಯಾರ್ಥಿ ಜೀವನದಲ್ಲಿ ಸಾಂಸ್ಕೃತಿಕ ಮತು ಕ್ರೀಡಾ ಚಟುವಟಿಕೆಗಳು ಆತನ ಭವ್ಯ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕಿ ಕೊಡುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ಚೆಲ್ಲಿದಾಗ ಆತನು ಸರ್ವಾಂಗೀಣವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದು ಅವರು ತಿಳಿಸಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಶಾಲಾ ಶಿಕ್ಷಣ ವಿಭಾಗದ ಸಹ ನಿರ್ದೇಶಕ ಎಂ. ಶಿವಮಾದಪ್ಪ ಮಾತನಾಡಿ, ವಿದ್ಯಾರ್ಜನೆ ಎಂಬ ದಾರಿಯಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ವಿದ್ಯಾರ್ಜನೆಗೆ ಪೂರಕವಾಗಿ ಸಹಾಯ ಮಾಡುತ್ತವೆ. ವಿದ್ಯಾರ್ಥಿ ಜೀವನದಲ್ಲಿ ಗುರುಗಳನ್ನು ಗೌರವಿಸಬೇಕು, ಹೆತ್ತ ತಂದೆ- ತಾಯಿಗಳಿಗೆ ಉತ್ತಮ ಮಕ್ಕಳಾಗಬೇಕು ಎಂದು ಕಿವಿಮಾತು ಹೇಳಿದರು.ಮೊಬೈಲ್ ಅನ್ನು ಸದ್ಬಳಕೆ ಮಾಡಿಕೊಳ್ಳಬೇಕೆ ಹೊರತು, ದುರ್ಬಳಕೆ ಮಾಡಿಕೊಳ್ಳಬಾರದು. ವಿದ್ಯಾರ್ಥಿಗಳೇ ತಮ್ಮ ಜೀವನದ ಭವ್ಯ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಕಾಳಜಿ ಇಲ್ಲದೆ ಉದಾಸೀನ ತೋರುವುದು ಬೇಸರ ತರಿಸುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ರೂಪಿಸಿಕೊಂಡು ಈ ಸಮಾಜಕ್ಕೆ ಮಾದರಿಯಾಗಬೇಕು ಎಂದು ಅವರು ಕರೆ ನೀಡಿದರು.ಅಂತಾರಾಷ್ಟ್ರೀಯ ಖೋಖೋ ಕ್ರೀಡಾಪಟು ಎಲ್. ಮೋನಿಕಾ ಮಾತನಾಡಿ, ಕ್ರೀಡಾ ಚಟುವಟಿಕೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿರುತ್ತವೆ. ಯಾವುದಾದರೂ ಕ್ರೀಡೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಾಗ ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಉನ್ನತ ಸ್ಥಾನಕ್ಕೇರುವ ಅವಕಾಶಗಳು ಲಭಿಸಲಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಪ್ರಾಸ್ತವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಎಚ್.ಎನ್. ನಿರಂಜನ ಅವರು, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸರ್ವಾಂಗೀಣವಾಗಿ ಬೆಳವಣಿಗೆ ಹೊಂದಬೇಕು ಎಂದು ಹೇಳಿದರು.ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಎಸ್. ಶ್ರುತಿ, ಕ್ರೀಡಾ ವೇದಿಕೆ ಸಂಚಾಲಕ ಎಚ್.ಎನ್. ನಾಗರಾಜ ಇದ್ದರು. ವಿದ್ಯಾರ್ಥಿಗಳಾದ ಕೋಮಲಾ ಮತ್ತು ಧನಲಕ್ಷ್ಮಿ ಪ್ರಾರ್ಥಿಸಿದರು. ವರಲಕ್ಷ್ಮಿ ಸ್ವಾಗತಿಸಿದರು. ಸಂಜಯ್ ಕುಮಾರ್ ನಿರೂಪಿಸಿದರು.