ವಕ್ಫ್‌ನಿಂದ ರೈತರಿಗೆ ನೋಟಿಸ್‌ ಕುರಿತು ಜೆಪಿಸಿ ಗಮನ: ಬೊಮ್ಮಾಯಿ

| Published : Nov 07 2024, 11:49 PM IST

ಸಾರಾಂಶ

ರಾಜ್ಯದಲ್ಲಿ ತರಾತುರಿಯಲ್ಲಿ ವಕ್ಫ್‌ ಅದಾಲತ್ ಮಾಡಿ, ಕೇಂದ್ರದಲ್ಲಿ ವಕ್ಫ್‌ ಕಾಯ್ದೆ ತಿದ್ದುಪಡಿಯಾಗುವ ಮೊದಲೇ ರೈತರ ಭೂಮಿಯನ್ನು ವಕ್ಫ್‌ ಆಸ್ತಿಯನ್ನಾಗಿ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ.

ಹುಬ್ಬಳ್ಳಿ:

ರಾಜ್ಯದಲ್ಲಿ ವಕ್ಫ್‌ ಬೋರ್ಡ್‌ನಿಂದ ರೈತರಿಗೆ ನೋಟಿಸ್‌ ನೀಡಿರುವುದನ್ನು ವಕ್ಫ್‌ ಕಾಯ್ದೆ ತಿದ್ದುಪಡಿ ಕುರಿತು ಪರಿಶೀಲಿಸಲು ರಚನೆಯಾಗಿರುವ ಸಂಸತ್ತಿನ ಜಂಟಿ ಸದನ ಸಮಿತಿ ಗಮನಕ್ಕೆ ತಂದಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ವಕ್ಫ್‌ ಕಾಯ್ದೆ ತಿದ್ದುಪಡಿ ಕುರಿತು ನೇಮಕವಾಗಿರುವ ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರನ್ನು ನಗರದಲ್ಲಿ ಬಿಜೆಪಿ ನಾಯಕರ ನಿಯೋಗದೊಂದಿಗೆ ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಹಾವೇರಿ ಜಿಲ್ಲೆಯ ಶಿಗ್ಗಾಂವಿ-ಸವಣೂರು ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ವಕ್ಫ್‌ ಬೋರ್ಡ್‌ನಿಂದ ರೈತರಿಗೆ, ಆಸ್ಪತ್ರೆ, ಶಾಲೆ, ಕಾಗಿನೆಲೆ ಮಠಕ್ಕೆ ನೊಟೀಸ್ ನೀಡಿದ್ದಾರೆ‌‌. ಇದನ್ನು ಜೆಪಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ‌. ಕೇವಲ ಹಾವೇರಿ ಜಿಲ್ಲೆಯಷ್ಟೇ ಅಲ್ಲ ಧಾರವಾಡ, ವಿಜಯಪುರ, ಕೊಪ್ಪಳ, ಗದಗ, ಮಂಡ್ಯ, ಮೈಸೂರು ಜಿಲ್ಲೆ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ರೈತರಿಗೆ ನೋಟಿಸ್‌ ಕೊಟ್ಟಿದ್ದಾರೆ‌ ಎಂದರು. ವಕ್ಫ್‌ ಕಾಯಿದೆ ದುರ್ಬಳಕೆ ಮಾಡಿಕೊಂಡಿರುವುದರಿಂದ ಈ ಸಮಸ್ಯೆ ಉಲ್ಬಣಗೊಂಡಿದೆ. ಈ ಬಗ್ಗೆ ಸಮಿತಿ ಗಮನಕ್ಕೆ ತಂದಿದ್ದೇವೆ. ಈ ಸಮಿತಿ ತಳಮಟ್ಟದಲ್ಲಿ ವಾಸ್ತವ ಏನಿದೆ ಎನ್ನುವುದನ್ನು ತನ್ನ ವರದಿಯಲ್ಲಿ ಪ್ರಸ್ತಾಪಿಸಿ ಕಾಯ್ದೆ ತಿದ್ದುಪಡಿಗೆ ಸದನಕ್ಕೆ ಸಲ್ಲಿಸಲಿದೆ ಎಂದು ಹೇಳಿದರು.

ತರಾತುರಿಯ ಅದಾಲತ್‌:

ರಾಜ್ಯದಲ್ಲಿ ತರಾತುರಿಯಲ್ಲಿ ವಕ್ಫ್‌ ಅದಾಲತ್ ಮಾಡಿ, ಕೇಂದ್ರದಲ್ಲಿ ವಕ್ಫ್‌ ಕಾಯ್ದೆ ತಿದ್ದುಪಡಿಯಾಗುವ ಮೊದಲೇ ರೈತರ ಭೂಮಿಯನ್ನು ವಕ್ಫ್‌ ಆಸ್ತಿಯನ್ನಾಗಿ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಕೇವಲ ಹಿಂದೂಗಳಲ್ಲ, ಮುಸ್ಲಿಂ ಸಮುದಾಯದ ರೈತರ ಜಮೀನಿಗೂ ನೋಟಿಸ್ ಕೊಟ್ಟಿದ್ದಾರೆ. ಇಡೀ ರೈತ ಸಮುದಾಯ ಆಕ್ರೋಶಗೊಂಡಿದೆ ಎಂದು ಬೊಮ್ಮಾಯಿ ಹೇಳಿದರು.

ಕಾಂಗ್ರೆಸಿಗೆ ವಕ್ಫ್‌ ದೊಡ್ಡದು:

ಕಾಂಗ್ರೆಸ್‌ಗೆ ಸಂವಿಧಾನಕ್ಕಿಂತ ವಕ್ಫ್ ಬೋರ್ಡ್‌ ದೊಡ್ಡದು ಎನ್ನುವ ಥರ ನಡೆದುಕೊಳ್ಳುತ್ತಿದೆ. ರಾಜ್ಯದಲ್ಲಿ ವಕ್ಫ್ ಆಸ್ತಿ ಕಂಬಳಿಸುವ ಹಾವಳಿ ನಡೆಯುತ್ತಿದೆ. ಕೇಂದ್ರ ಸರ್ಕಾರ ವಕ್ಫ್ ಬೋರ್ಡ್‌ ತಿದ್ದುಪಡಿ ಮಸೂದೆ ತರಲು ಮುಂದಾಗಿದ್ದು, ಎಲ್ಲ ದಾಖಲೆಗಳನ್ನು ಬದಲಾಯಿಸಲಾಗುತ್ತಿದೆ. ರಾತ್ರೋರಾತ್ರಿ ರೈತರ ಜಮೀನುಗಳು ವಕ್ಫ್ ಬೋರ್ಡ್‌ಗೆ ನೋಂದಣಿ ಮಾಡಿದ್ದಾರೆ ಎಂದು ಆರೋಪಿಸಿದರು.

ಒಂದು ವೇಳೆ ಬಿಜೆಪಿ ಇದನ್ನು ವಿರೋಧ ಮಾಡದಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿತ್ತು. ಇದು ಕ್ಷಮೆಗೂ ಅರ್ಹವಲ್ಲ. ರೈತರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ ರಾಜ್ಯ ಸರ್ಕಾರ ಎಷ್ಟು ಬೇಗ ತೊಲಗುತ್ತೋ ಅಷ್ಟು ಒಳ್ಳೆಯದು ಎಂದು ಕಿಡಿಕಾರಿದರು.

ಹಣದ ಹೊಳೆ:

ಉಪಚುನಾವಣೆಗೆ ಮಂತ್ರಿಗಳು, ಶಾಸಕರ ದಂಡೇ ಬಂದು ಕುಳಿತಿದೆ. ಸರ್ಕಾರ ಅಧಿಕಾರಿಗಳ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಅಲ್ಲದೇ ಚುನಾವಣೆಯಲ್ಲಿ ಹಣದ ಹೊಳೆ ಹರಿಸುತ್ತಿದ್ದಾರೆ ಎಂದು ಆರೋಪಿಸಿದರು.