ಸರ್ಕಾರದ ಹಸ್ತಕ್ಷೇಪವಿಲ್ಲದೇ ವಕ್ಫ್‌ ಹೆಸರು ಸೇರ್ಪಡೆ ಹೇಗೆ ಸಾಧ್ಯ?

| Published : Nov 07 2024, 11:49 PM IST

ಸರ್ಕಾರದ ಹಸ್ತಕ್ಷೇಪವಿಲ್ಲದೇ ವಕ್ಫ್‌ ಹೆಸರು ಸೇರ್ಪಡೆ ಹೇಗೆ ಸಾಧ್ಯ?
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಈಗ ರೈತರಿಗೆ ನೀಡಿರುವ ನೋಟಿಸ್‌ ವಾಪಸ್‌ ಪಡೆಯುವ ಬಗ್ಗೆ ಮಾತನಾಡುತ್ತಿದೆ. ಆದರೆ, ಇದು ತಾತ್ಕಾಲಿಕ ಪರಿಹಾರವಾಗಲಿದೆ. ಉತಾರದಲ್ಲಿ ನಮೂದಾಗಿರುವ ವಕ್ಫ್‌ ಹೆಸರು ರದ್ದಾಗಬೇಕು.

ಹುಬ್ಬಳ್ಳಿ:

ಕರ್ನಾಟಕದಲ್ಲಿ ನೂರಾರು ವರ್ಷದಿಂದ ಉಳುಮೆ ಮಾಡುತ್ತಿದ್ದ ಜಮೀನುಗಳಲ್ಲಿ ವಕ್ಫ್‌ ಹೆಸರು ನಮೂದಿಸಿರುವುದು, ರೈತರಷ್ಟೇ ಅಲ್ಲ ಮಠ, ಮಂದಿರಗಳ ಆಸ್ತಿಯೂ ವಕ್ಷ ತಮ್ಮದೆಂದು ಹೇಳಿರುವುದು ಅತ್ಯಂತ ಗಂಭೀರ ವಿಷಯ. ಇದು ಸರ್ಕಾರದ ಹಸ್ತಕ್ಷೇಪ ಇಲ್ಲದೇ ಇದ್ದರೆ ಇದು ಹೇಗೆ ಸಾಧ್ಯವಾಗಲಿದೆ? ಎಂದು ಕೇಂದ್ರ ಸರ್ಕಾರದ ವಕ್ಫ್‌ ಕಾಯ್ದೆ ತಿದ್ದುಪಡಿ ಸಂಬಂಧಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಂಬಿಕಾ ಪಾಲ್ ಪ್ರಶ್ನಿಸಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರದಂದು ಧಾರವಾಡ, ಗದಗ, ಹಾವೇರಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು, ಶಾಸಕರು, ಜನಪ್ರತಿನಿಧಿಗಳ ನಿಯೋಗದಿಂದ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಸರ್ಕಾರ ಈಗ ರೈತರಿಗೆ ನೀಡಿರುವ ನೋಟಿಸ್‌ ವಾಪಸ್‌ ಪಡೆಯುವ ಬಗ್ಗೆ ಮಾತನಾಡುತ್ತಿದೆ. ಆದರೆ, ಇದು ತಾತ್ಕಾಲಿಕ ಪರಿಹಾರವಾಗಲಿದೆ. ಉತಾರದಲ್ಲಿ ನಮೂದಾಗಿರುವ ವಕ್ಫ್‌ ಹೆಸರು ರದ್ದಾಗಬೇಕು. ಹೀಗೆಂದು ಅನೇಕ ರೈತರು ಮನವಿ ಮಾಡಿದ್ದಾರೆ. ರೈತರು, ವಿವಿಧ ಸಂಘ-ಸಂಸ್ಥೆಯವರು ನೀಡಿರುವ ಮನವಿಯನ್ನು ಕೂಲಂಕಷವಾಗಿ ಪರಿಶೀಲನೆ ಮಾಡಲಾಗುವುದು. ಕರ್ನಾಟಕದಲ್ಲಿ ಈ ಕುರಿತು ಬಿಜೆಪಿಯಿಂದ ರಚನೆಯಾಗಿರುವ ಸತ್ಯ ಶೋಧನಾ ಸಮಿತಿಯವರನ್ನು ದೆಹಲಿಗೆ ಕರೆಸಿಕೊಂಡು ಸಮಾಲೋಚನೆ ಮಾಡಲಾಗುವುದು. ಆ ನಂತರವೇ ಸಮಗ್ರ ವರದಿ ಸಿದ್ಧಪಡಿಸಿ ಸ್ಪೀಕರ್‌ಗೆ ಸಲ್ಲಿಸಲಾಗುವುದು ಎಂದರು.

ಸಮಿತಿಯಲ್ಲಿ ಎಲ್ಲ ಪಕ್ಷದವರೂ ಇದ್ದಾರೆ

31 ಸದಸ್ಯರುಳ್ಳ ಸಮಿತಿಯಲ್ಲಿ ಬಿಜೆಪಿ, ಕಾಂಗ್ರೆಸ್, ಆಪ್, ಸಮಾಜವಾದಿ ಸೇರಿ ಎಲ್ಲ ಪಕ್ಷಗಳ ಲೋಕಸಭೆ ಸದಸ್ಯರು ಇದ್ದಾರೆ. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಎಂದು ಪಾಲ್ ಸ್ಪಷ್ಟಪಡಿಸಿದರು. ಸಮಿತಿ ಸದಸ್ಯ, ಸಂಸದ ತೇಜಸ್ವಿಸೂರ್ಯ ಮಾತನಾಡಿ, ವಕ್ಫ್‌ ಕಾಯ್ದೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು 3 ತಿಂಗಳ ಹಿಂದೆ ಹೊಸ ಕಾಯಿದೆಯನ್ನು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಇದರ ಕರಡು ತಯಾರಿಸುವ ಮೊದಲು ಜಂಟಿ ಸದನ ಸಮಿತಿಯು ದೇಶದ ಎಲ್ಲೆಡೆ ಅಭಿಪ್ರಾಯ ಸಂಗ್ರಹಿಸುತ್ತಿದೆ. ಕರ್ನಾಟಕದಲ್ಲೂ ರೈತರು, ಸಾರ್ವಜನಿಕರ ಮನವಿ ಆಲಿಸಲಾಗುತ್ತಿದೆ. ಎಲ್ಲರ ಅಭಿಪ್ರಾಯ ಪಡೆದು ಆಮೂಲಾಗ್ರ ಬದಲಾವಣೆಗೆ ಕೇಂದ್ರ ಅಣಿಯಾಗಲಿದೆ. ಹುಬ್ಬಳ್ಳಿಯಲ್ಲಿ ಒಟ್ಟು 70ಕ್ಕೂ ಅಧಿಕ ಅರ್ಜಿಗಳು ಸ್ವೀಕೃತವಾಗಿವೆ ಎಂದರು.