ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಾಡಿನ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿಕೊಂಡು ಜನರ ಒಳಗಣ್ಣನ್ನು ತೆರೆಸಬೇಕು ಎಂದು ಕವಿ ಹಾಗೂ ನಾಟಕಕಾರ ಪ್ರೊ.ಎಚ್.ಎಸ್. ಶಿವಪ್ರಕಾಶ್ ಹೇಳಿದರು.ನಗರದ ಜೆಎಸ್ ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಮಲೆಯೂರು ಗುರುಸ್ವಾಮಿ ಪ್ರತಿಷ್ಠಾನ ಮತ್ತು ಪ್ರಕಾಶನ ವತಿಯಿಂದ ಭಾನವಾರ ನಡೆದ ''''''''ಮಲೆಯೂರು ಮಂದಾರ'''''''' ಕೃತಿ ಲೋಕಾರ್ಪಣೆ ಹಾಗೂ ಮಲೆಯೂರು ಗುರುಸ್ವಾಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಜಗತ್ತು ಬದಲಾಗುತ್ತಿದ್ದು, ಮೌಲ್ಯಗಳು ವಿನಾಶವಾಗುತ್ತಿದೆ. ಬಂಡವಾಳ ಹೆಚ್ಚಾದ ಹಾಗೇ ಮನುಷ್ಯನು ಕಾಣುವ ಜಗತ್ತನ್ನು ಬಿಟ್ಟು, ಕಾಣದ ಜಗತ್ತನ್ನು ತೋರಿಸಲಾಗುತ್ತಿದೆ. ಇಂದಿನ ಸಾಹಿತಿಗಳು ಇದನ್ನೆ ಮಾಡುತ್ತಿದ್ದಾರೆ. ಎಂದರು.ಚಿಕ್ಕಲ್ಲೂರು ಜಾತ್ರೆಗೆ ಹೋಗಿದ್ದೆ. ಅಲ್ಲಿ ಲಕ್ಷಾಂತರ ಜನ ಬಂದು ಸೇರಿದ್ದರು. ಇದೇನು ತಿರುಪತಿ ತಿಮ್ಮಪ್ಪ ದೇವಸ್ಥಾನವಲ್ಲ. ಟಿವಿಯಲ್ಲಿ ಬರುವುದಿಲ್ಲ. ಆದರೆ, ಇದೊಂದು ಸಾಂಸ್ಕೃತಿಕ ಚರಿತ್ರೆಯನ್ನು ಜೀವಂತವಾಗಿಸಿದೆ. ಆ ಮೂಲ ಸಾಂಸ್ಕೃತಿಕ ಮೌಲ್ಯಗಳು ಉಳಿದುಕೊಂಡಿವೆ. ಆದರೆ ಇದು ರಾಜಕಾರಣಿಗಳಿಗೆ ಅರ್ಥವಾಗುತ್ತಿಲ್ಲ. ಸ್ವಾಮೀಜಿಗಳು, ಸಾಹಿತಿಗಳಿಗೂ ಅರ್ಥವಾಗುತ್ತಿಲ್ಲ. ಇಂತಹ ಸಾಂಸ್ಕೃತಿಕ ಮೌಲ್ಯ ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಾಹಿತ್ಯದ ಕೆಲಸ ಅಧ್ಯಾತ್ಮಿಕ ಕೆಲಸ. ಈ ಕೆಲಸವನ್ನು ಮಾಡುತ್ತಿದ್ದೇನೆ. ಜೀವನದಲ್ಲಿ ನಾನು ದುಡ್ಡು ಕಾಸು ಮಾಡಿಲ್ಲ. ಕರ್ನಾಟಕದಲ್ಲಿ ಸ್ವಂತದ್ದು ಅಂತ ಏನು ಇಲ್ಲದಿರುವ ಬರಹಗಾರರ ನಾನು. ಬೌದ್ಧರಲ್ಲಿಯೇ ಪೂರ್ಣತೆ ಭೀಕ್ಷಾ ಪಾತ್ರೆ ಬುದ್ದನದ್ದು. ಆ ರೀತಿ ಇದ್ದೇನೆ ಎಂದರು.ಇಂದು ಶಿಕ್ಷಣ ಕೂಡ ಉದ್ಯಮೀಕರಣವಾಗಿ ಎಲ್ಲವನ್ನು ನಾಶ ಮಾಡುತ್ತಿದೆ. ಇದರ ನಡುವೆ ಅಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ಹಿಂದೆ ಮನುಷ್ಯರಲ್ಲಿ ಬಹಳಷ್ಟು ಮಂದಿ ಯೋಗ್ಯರಿದ್ದರು. ಇವತ್ತಿನ ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆಯಾಗಿದೆ. ಆದರೆ ಪ್ರಯೋಜನಕಾರಿ ಆಗಿಲ್ಲ. ಏಕೆಂದರೆ ಕಳೆದ ಆರೇಳು ತಿಂಗಳಿಂದ ನನಗಿರುವ ಸಮಸ್ಯೆಯನ್ನು ಗುರುತಿಸಿ ಪರಿಹಾರ ನೀಡಲು ಯಾರಿಂದ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.
ಆಸ್ಪತ್ರೆಗಳು ಸ್ಟಾರ್ ಹೊಟೇಲ್ ಗಳಂತಾಗಿವೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸಣ್ಣ ಸರ್ಜರಿಗೆ ಒಂದೂವರೆ ಲಕ್ಷ ಖರ್ಚಾಯಿತು ಎಂದರು.ಮಲೆಯೂರು ಗುರುಸ್ವಾಮಿ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಛಾಪು ಮೂಡಿಸಿದ್ದಾರೆ. ಕಾಲೇಜಿನ ಪ್ರಾಧ್ಯಾಪಕರಾಗಿರುವ ವ್ಯಕ್ತಿ ಯಾವುದೇ ಪ್ರಚಾರವನ್ನೂ ಬಯಸದೇ ಇಷ್ಟೊಂದು ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.
ವಿಮರ್ಶಕ ಡಾ.ಸಿ. ನಾಗಣ್ಣ ಮ.ಗು. ಬದುಕು ಮತ್ತು ಸಾಹಿತ್ಯ- ಒಂದು ಚಿಂತನೆ ಕುರಿತು ಮಾತನಾಡಿ, ಚಾಮರಾಜನಗರ ಜಿಲ್ಲಾ ಸಾಹಿತ್ಯವನ್ನು ಮತ್ತು ಜಿಲ್ಲೆಯ ಸಮಗ್ರ ಚಿತ್ರಣವನ್ನು ಮಲೆಯೂರು ಗುರುಸ್ವಾಮಿ ಅವರು ಕಟ್ಟಿಕೊಟ್ಟಿದ್ದಾರೆ. ಸತತ ಮೂರು ಬರಿ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅವರು, ಕಪಿಲೆ ಹರಿದಳು ಕಡಲಿಗೆ, ಸಂಶ, ಬಂಗಾರದೊಡ್ಡಿ, ಸುವರ್ಣಾವತಿ ಸೇರಿದಂತೆ ಅನೇಕ ಕೃತಿಗಳನ್ನು ಹೊರ ತಂದಿದ್ದಾರೆ. ಅವರ 77 ವರ್ಷಗಳ ಜೀವನದಲ್ಲಿ ಸುಮಾರು 50 ವರ್ಷ ಸಾಹಿತ್ಯ ಸೇವೆಯಲ್ಲಿಯೇ ತೊಡಿಗಿಸಿಕೊಂಡಿದ್ದಾಗಿ ಬಣ್ಣಿಸಿದರು.ಬಂಗಾರದೊಡ್ಡಿ ಕಾದಂಬರಿಯಲ್ಲಿ ಗುರುಸ್ವಾಮಿ ಅವರ ಸಾಹಿತ್ಯ ಪ್ರತಿಭೆಯನ್ನು ಮತ್ತೆ ಮತ್ತೆ ಕಾಣಬಹುದು. ಮಲೆಯೂರು ಗುರುಸ್ವಾಮಿ ಅವರ ನಿರ್ಗಮನದಿಂದ ವಿಶಾಲವಾದ ಸಾಹಿತ್ಯ ಲೋಕಕ್ಕೆ ನಷ್ಟವಾಗಿದೆ. ಗುರುಸ್ವಾಮಿ ಅವರು ಮಲೆಯೂರಿನ ಬಗ್ಗೆ ಸಂಪರ್ಕ ಬೆಳೆಸಿಕೊಂಡಿದ್ದರು. ಬರೀ ಅವರೊಬ್ಬ ವ್ಯಕ್ತಿಯಾಗಿರದೆ, ಶಕ್ತಿಯಾಗಿದ್ದರು. ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಲೋಕವನ್ನು ಚೆನ್ನಾಗಿ ಬಲ್ಲವರಾಗಿದ್ದರು ಎಂದು ಕೊಂಡಾಡಿದರು.
ಚಿರಪರಿಚಿತ ವ್ಯಕ್ತಿಗಳು ತಿಳಿದುಕೊಂಡ ವ್ಯಕ್ತಿತ್ವಕ್ಕೆ ಭಿನ್ನಾವಾಗಿದ್ದರು. ಅನೇಕಾರು ಊರು, ಪ್ರದೇಶಗಳ ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದರು. ಕೆಲವು ಬೀದಿಗಳಲ್ಲಿ ಸಂಚರಿಸುತ್ತ ಪೂರ್ವ ಇತಿಹಾಸವನ್ನು ವಿವರಿಸುತ್ತಿದ್ದರು. ಅವರೊಬ್ಬ ಉಸಿರಾಡುವ ಚೇತನವಾಗಿದ್ದರು. ಗುರುಸ್ವಾಮಿ ಅವರ ಮಾತುಗಳನ್ನು ಕೇಳುಗರು ಚಪ್ಪರಿಸುತ್ತಿದ್ದರು. ಮೂರವರೆ ದಶಕಗಳ ಕಾಲ ಜೆಎಸ್ಎಸ್ ಕಾಲೇಜಿನ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾಗಿ ಅವರು ಹೇಳಿದರು.ಮಲೆಯೂರು ಗುರುಸ್ವಾಮಿ ಸಾಹಿತ್ಯದಲ್ಲಿನ ಪಾತ್ರಗಳನ್ನು ಗಮನಿಸಿದರೆ ಅವರ ಹೃದಯ ಯಾರೊಂದಿಗೆ ಮಿಡಿಯುತ್ತಿತ್ತು ಎಂಬುದನ್ನು ಮನವರಿಕೆ ಮಾಡಲಿದೆ. ಮಲೆಯೂರು ಮಂದರದಲ್ಲಿ ಮಲೆಯೂರರ ಕೃತಿಗಳ ವಿಮರ್ಶೆಯನ್ನು ನೀಗಿಸಿದ್ದಾರೆ. ಸಂಶಾ ಕಾದಂಬರಿಯ ಮೂಲಕ ಅವರ ವ್ಯಕ್ತಿತ್ವವನ್ನು ಅನಾವರಣ ಮಾಡಿದ್ದಾರೆ.
ಪ್ರಶಸ್ತಿ ಪುರಸ್ಕೃತರಾದ ಪ್ರೊ.ಎಚ್.ಎಸ್. ಶಿವಪ್ರಕಾಶ್‌ಅವರು ಅಧ್ಯಯನ ಶೀಲರು. ಆಫ್ರಿಕನ್‌ಸಾಹಿತ್ಯ, ಮಧ್ಯ ಪ್ರಾಚ್ಯ ಸಾಹಿತ್ಯ ಓದಲು 15 ದಿನ ಧ್ವನ್ಯಲೋಕದಲ್ಲಿ ಉಳಿದಿದ್ದರು. ಅದು ಅವರ ಜ್ಞಾನದ ಹಸಿವು ಎಷ್ಟಿತ್ತು ಎಂಬುದನ್ನು ತೋರಿಸುತ್ತದೆ. ಕಾವ್ಯ, ನಾಟಕ ಅನುವಾದ ವಿಮರ್ಶೆ, ಹಲವು ಪ್ರಕಾರಗಳಲ್ಲಿ ಅವರ ಕೊಡುಗೆ ಇದೆ. ದೇಶ, ವಿದೇಶ ಭಾಷೆಗೆ ಹಲವು ಮೌಲಿಕ ಕೃತಿಗಳನ್ನು ನೀಡಿದ್ದಾರೆ. ಎಲ್ಲಾ ಬರವಣಿಗೆಯಲ್ಲಿ ಭಾರತೀಯತೆ ಚಿಂತನೆ ಒಳಗೊಂಡಿರುವುದು ವಿಶಿಷ್ಟವಾದದ್ದು ಎಂದು ಅವರು ಹೇಳಿದರು.ಕುಂದೂರು ಮಠದ ಡಾ.ಶ್ರೀ. ಶರತ್ ಚಂದ್ರ ಸ್ವಾಮೀಜಿ ಸಮ್ಮುಖವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಮಲೆಯೂರು ಮಂದಾರ ಕೃತಿ ಲೋಕಾರ್ಪಣೆಗೊಳಿಸಿದರು.
ಡಾ. ಸಿಪಿಕೆ ಅವರು ಗುರುಸ್ವಾಮಿ ಅವರ ಬಗ್ಗೆ ಬರೆದಿರುವ ಶರಣು ಶರಣಾರ್ಥಿ ಕವನವನ್ನು ವಾಚಿಸಲಾಯಿತು.ಶಾಸಕ ಎಚ್.ಎಂ. ಗಣೇಶ್ ಪ್ರಸಾದ್, ನಿವೃತ್ತ ಉಪನ್ಯಾಸಕಿ ಜಯಂತಿ ಮಲೆಯೂರು ಗುರುಸ್ವಾಮಿ ಮುಖ್ಯ ಅತಿಥಿಗಳಾಗಿದ್ದರು. ಪ್ರಕಾಶಕ ಡಿ.ಎನ್. ಲೋಕಪ್ಪ, ಕಾನ್ಯ ಶಿವಮೂರ್ತಿ ಮೊದಲಾದವರು ಇದ್ದರು. ಪ್ರೊ. ಮೊರಬದ ಮಲ್ಲಿಕಾರ್ಜುನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಎಂ. ಸುಗುಣ ಪ್ರಾರ್ಥಿಸಿದರು. ಕೆಬ್ಬೆಪುರ ರಾಜು ಸ್ವಾಗತಿಸಿದರು. ಪ್ರೊ.ಡಿ.ಎಸ್. ಸದಾಶಿವಮೂರ್ತಿ ನಿರೂಪಿಸಿದರು.