ಸಾರಾಂಶ
ಕವಿವಿ ಅಂತರ್ ಮಹಾವಿದ್ಯಾಲಯಗಳ ೭೨ನೇ ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭ
ಕನ್ನಡಪ್ರಭ ವಾರ್ತೆ ಹೊನ್ನಾವರಕ್ರೀಡೆ ವ್ಯಕ್ತಿ ವ್ಯಕ್ತಿಗಳ ನಡುವೆ, ದೇಶ ದೇಶಗಳ ನಡುವೆ ಪ್ರೀತಿ ಬೆಳೆಸುತ್ತದೆ. ಅವಮಾನ, ಸೋಲು, ಸವಾಲುಗಳನ್ನು ಎದುರಿಸಲು ಕ್ರೀಡೆ ಕಲಿಸಿಕೊಡುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್ ಗೌಡ ಹೇಳಿದರು.
ಕರ್ನಾಟಕ ವಿವಿ ಧಾರವಾಡ ಮತ್ತು ಎಸ್.ಡಿ.ಎಂ.ಕಾಲೇಜು ಹೊನ್ನಾವರದ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆದ ಕವಿವಿ ಅಂತರ್ ಮಹಾವಿದ್ಯಾಲಯಗಳ ೭೨ನೇ ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.ಇಂದಿನ ಯುವ ಜನತೆಯಲ್ಲಿ ಸೋಲನ್ನು ಎದುರಿಸುವ ಶಕ್ತಿ ಇಲ್ಲ. ಕ್ರೀಡೆ ಶಿಸ್ತು, ಸಂಯಮ ಮತ್ತು ತಾಳ್ಮೆ ಎಲ್ಲವನ್ನು ಕಲಿಸಿಕೊಡುವ ಮಹಾಗುರು ಇದ್ದಂತೆ ಎಂದು ಹೇಳಿದರು.
ಕವಿವಿ ನಿವೃತ್ತ ಕುಲಪತಿ ಡಾ. ಬಿ.ಎಂ. ಪಾಟೀಲ್ ಮಾತನಾಡಿದರು.೧೪೭ ಅಂಕಗಳಿಸಿದ ಜೆಎಸ್ಎಸ್ ಕಾಲೇಜು ಧಾರವಾಡ ಚಾಂಪಿಯನ್ ಆದರೆ, ೧೪೬ ಅಂಕ ಗಳಿಸಿದ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜು ರನ್ನರ್ ಅಪ್ ಸ್ಥಾನ ಪಡೆದರೆ, ಎಸ್.ಡಿ.ಎಂ. ಕಾಲೇಜು ಹೊನ್ನಾವರ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಯಿತು.
ಪುರುಷರ ವಿಭಾಗದ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ಆರ್ಟ್ಸ್ ಕಾಲೇಜ್ ಪ್ರಥಮ, ಜೆಎಸ್ಎಸ್ ಕಾಲೇಜ್ ಧಾರವಾಡ ದ್ವಿತೀಯ ಹಾಗೂ ಎಸ್.ಡಿ.ಎಂ.ಕಾಲೇಜ್ ತೃತೀಯ ಸ್ಥಾನವನ್ನು ಹಾಗೂ ಮಹಿಳೆಯರ ವಿಭಾಗದಲ್ಲಿ ಜೆಎಸ್ಎಸ್ ಕಾಲೇಜು ಧಾರವಾಡ ಪ್ರಥಮ,ಕರ್ನಾಟಕ ಆರ್ಟ್ಸ್ ಕಾಲೇಜ್ ಧಾರವಾಡ ದ್ವಿತೀಯ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಂಕಿ ತೃತೀಯ ಸ್ಥಾನ ಪಡೆಯಿತು.ಕರ್ನಾಟಕ ಆರ್ಟ್ಸ್ ಕಾಲೇಜಿನ ಪ್ರಸನ್ನ ಕುಮಾರ್ ಮುನ್ನೂರ್ ಮತ್ತು ಶ್ರಾವಣಿ ಭಾತೆ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು.
ಎಂ.ಪಿ.ಇ.ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ, ಉಪಾಧ್ಯಕ್ಷ ನಾಗರಾಜ್ ಕಾಮತ್, ಶ್ರೀಕಾಂತ್ ನಾಯ್ಕ, ಉದಯ್ ನಾಯ್ಕ, ಸುರೇಶ್ ಶೆಟ್ಟಿ, ಶ್ರೀಕಲಾ ಶಾಸ್ತ್ರಿ, ಕಾಲೇಜಿನ ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ್, ಕಾರ್ತಿಕ್ ಗೌಡ ಉಪಸ್ಥಿತರಿದ್ದರು.ಡಾ. ಎಂ.ಜಿ. ಹೆಗಡೆ ಸ್ವಾಗತಿಸಿದರು. ಪ್ರಶಾಂತ್ ಹೆಗಡೆ ನಿರೂಪಿಸಿದರು. ಆರ್.ಕೆ. ಮೇಸ್ತ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))