ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮೇಟಗಳ್ಳಿಯ ಜೆಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುತ್ತೂರು ಶ್ರೀ ವೀರಸಿಂಹಾಸನ ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಶತೋತ್ತರ ದಶಮಾನೋತ್ಸವ ಜಯಂತಿ ಮಹೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯು ಸಭಕ್ತಿ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.ಗಣ್ಯರು ಜ್ಯೋತಿ ಬೆಳಗಿಸಿ, ಪೂಜ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ನಂಜನಗೂಡು ತಾಲೂಕಿನ ಶಿರಮಳ್ಳಿ ಶ್ರೀ ವಿರಕ್ತ ಮಠದ ಶ್ರೀ ಇಮ್ಮಡಿ ಮುರಘಿ ಸ್ವಾಮೀಜಿ ಸಮ್ಮುಖ ವಹಿಸಿ, ಆಶೀರ್ವಚನ ನೀಡುತ್ತಾ ರಾಜೇಂದ್ರ ಶ್ರೀಗಳವರು ತ್ರಿವಿಧ ದಾಸೋಹಿಗಳಾಗಿದ್ದು, ಅನ್ನ, ಅಕ್ಷರ, ವಸತಿಯನ್ನು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಕಲ್ಪಿಸಿ ಅವರ ಬದುಕಿಗೆ ಆಶಾಕಿರಣವಾಗಿದ್ದರು. ನಿಸ್ವಾರ್ಥ ಮನೋಭಾವನೆ ಉಳ್ಳವರಾಗಿದ್ದು, ಸಂಸ್ಥೆಯನ್ನು ಬೃಹತ್ತಾಗಿ ಕಟ್ಟಿ ಬೆಳೆಸಿದರು ಎಂದು ತಿಳಿಸಿದರು.ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನುಡಿನಮನ ಸಲ್ಲಿಸಿ, ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರರು ಚೋಳರು ಹಾಗೂ ಗಂಗರ ನಡುವಿನ ಯುದ್ಧವನ್ನು ನಿಲ್ಲಿಸಿದ ಪ್ರಸಂಗವನ್ನು ವಿವರಿಸಿದರು. ರೂಪ ಕುಮಾರಸ್ವಾಮಿ ಮಾತನಾಡಿ, ಎಲ್ಲರ ಚಿತ್ತ ಸುತ್ತೂರಿನತ್ತ ಮಾಡಿದ ಕೀರ್ತೀ ರಾಜೇಂದ್ರ ಶ್ರೀಗಳವರಿಗೆ ಸಲ್ಲುತ್ತದೆ ಎಂದರು.2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 14 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಂತರ 2024-25ನೇ ಸಾಲಿನಲ್ಲಿ ಶೇ. 100 ರಷ್ಟು ಫಲಿತಾಂಶ ನೀಡಿದ ವಿಷಯವಾರು ಶಿಕ್ಷಕರಿಗೆ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಸಂಗೀತ ಶಿಕ್ಷಕರಾದ ಶ್ರೀಮತಿ ಸುಮಂಗಲ ಜಂಗಮಶೆಟ್ಟಿ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಎನ್.ಪಿ. ಸತೀಶ್ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕ ಬಿ.ಆರ್. ಸುನೇಶ್ ಕುಮಾರ್ ನಿರೂಪಿಸಿದರು. ಎಂ.ವಿ. ಅಮೃತವಾಣಿ ವಂದಿಸಿದರು. ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.