ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಜೆಎಸ್ಎಸ್ ಮಹಾವಿದ್ಯಾಪೀಠದ ಅಂಗ ಸಂಸ್ಥೆಯಾದ ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯಿಂದ ನಂಜನಗೂಡು ತಾಲೂಕಿನ ದೇವೀರಮ್ಮನಹಳ್ಳಿಯ ಗ್ರಾಪಂನಲ್ಲಿ ನೀರು ನಿರ್ವಹಣೆ ಕಾರ್ಯಕ್ರಮ ಹಾಗೂ ಸ್ವಚ್ಛತಾ ಪ್ರತಿಜ್ಞೆ, ಅಸಿಸ್ಟೆಂಟ್ ಡ್ರೆಸ್ ಮೇಕರ್ ಮತ್ತು ಅಸಿಸ್ಟೆಂಟ್ ಹ್ಯಾಂಡ್ ಎಂಬ್ರಾಯ್ಡರಿ ತರಬೇತಿಗಳ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸಿ. ರಮೇಶ್ ಮಾತನಾಡಿ, ತರಬೇತಿಯ ನಂತರ ಕೈಗೊಳ್ಳಬಹುದಾದ ಆರ್ಥಿಕ ಚಟುವಟಿಕೆಗಳ ಬಗ್ಗೆ, ಬ್ಯಾಂಕಿನಿಂದ ದೊರೆಯಬಹುದಾದ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸ್ವಚ್ಛತಾ ಪಕ್ವಾಡ ಕಾರ್ಯಕ್ರಮದ ಉದ್ದೇಶ ಕೈಗೊಂಡಿರುವ ಚಟುವಟಿಕೆಗಳು, ಅದರಿಂದಾಗುವ ಬದಲಾವಣೆಗಳು ಅಥವಾ ಪ್ರಯೋಜನಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಸಂಪನ್ಮೂಲ ವ್ಯಕ್ತಿಗಳಾದ ನಂಜನಗೂಡು ತಾಪಂಎನ್.ಆರ್.ಎಲ್.ಎಂ ಯೋಜನೆಯ ವಲಯ ಮೇಲ್ವಿಚಾರಕ ಹರೀಶ್ ಮಾತನಾಡಿ, ನೀರು ಜೀವ ಜಲವಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಪೋಲು ಮಾಡಬಾರದು. ಭೂಮಿಯ ಮೇಲೆ ನೈಸರ್ಗಿಕವಾಗಿ ದೊರೆಯಬಹುದಾದ ಹಲವು ಸಂಪನ್ಮೂಲಗಳಲ್ಲಿ ನೀರು ಸಹ ಒಂದು. ಈಗಾಗಲೇ ಎರಡು ಮಹಾಯುದ್ಧಗಳು ನಡೆದಿದ್ದು, ಮೂರನೇ ಮಹಾಯುದ್ಧವೇನಾದರೂ ನಡೆದರೆ ಅದು ನೀರಿಗಾಗಿ ನಡೆಯುತ್ತದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಈಗ ರಾಜ್ಯಾದ್ಯಂತ ಜಲಜೀವನ್ ಮಿಷನ್ ಅಡಿಯಲ್ಲಿ "ಮನೆ ಮನೆಗೆ ಗಂಗೆ " ಎಂಬ ಯೋಜನೆಯಡಿ ಎಲ್ಲ ಮನೆಗಳಿಗೂ ನೀರಿನ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಹೆಚ್ಚಿನ ಸಮಸ್ಯೆಗಳು ಬಗೆ ಹರಿದಿವೆ ಎಂದು ಹೇಳಿದರು.ಭಾರತೀಯ ಸ್ಟೇಟ್ ಬ್ಯಾಂಕಿನ ಆರ್ಥಿಕ ಸಾಕ್ಷರತೆಯ ಸಂಯೋಜಕ ದೊರೆಸ್ವಾಮಿ ಮಾತನಾಡಿ, ತರಬೇತಿ ಪೂರ್ಣಗೊಳಿಸಿದ ಫಲಾನುಭವಿಗಳಿಗೆ ಬ್ಯಾಂಕಿನಿಂದ ಸಿಗಬಹುದಾದ ಸಾಲ ಸೌಲಭ್ಯಗಳು, ಸಾಲ ಪಡೆಯುವ ರೀತಿ, ಸಾಲ ಮರುಪಾವತಿ, ಅವಶ್ಯವಿರುವ ದಾಖಲೆಗಳು, ರಿಯಾಯಿತಿ ಮತ್ತು ಮುದ್ರಾ ಯೋಜನೆ, ಹಾಗೂ ಇನ್ನೂ ಮೊದಲಾದ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿದರು.ಕಾರ್ಯಕ್ರಮದಲ್ಲಿ ಎಲ್ಲ ಫಲಾನುಭವಿಗಳಿಗೆ ತರಬೇತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಫಲಾನುಭವಿಗಳು ತಮ್ಮ ಅನುಭವ ಹಂಚಿಕೆ ಮಾಡಿಕೊಂಡರು. ಮೂರು ಫಲಾನುಭವಿಗಳು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿರುವುದು ಹಾಗೂ ಮನೆಯಲ್ಲಿಯೇ ಟೈಲರಿಂಗ್ ವೃತ್ತಿ ಮಾಡುತ್ತಿರುವುದರ ಮೂಲಕ ಹಣ ಸಂಪಾದಿಸಿ ತಮ್ಮ ಬದುಕು ಕಟ್ಟಿಕೊಂಡಿರುವ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.
ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಿ. ಸೌಭಾಗ್ಯ, ವೃತ್ತಿ ಬೋಧಕಿ ಸುಮಲತಾ ಇದ್ದರು.