ಮೊದಲು ನಮ್ಮನ್ನು ನಾವು ಅರಿಯಬೇಕು: ಡಾ.ಬಿ.ಎಸ್. ಸುದೀಪ್

| Published : May 28 2024, 01:07 AM IST

ಸಾರಾಂಶ

ಅರಿವುಳ್ಳಾತನೇ ಜಂಗಮ. ದೇಹವೆಂಬುದು ಚೆನ್ನಮಲ್ಲಿಕಾರ್ಜುನನ್ನು ಅರಿಯಲು ಇರುವ ಮಾಧ್ಯಮ ಎಂಬುದನ್ನು ಅಕ್ಕ ಮಹಾದೇವಿ ನಿರೂಪಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮೊದಲು ನಮ್ಮನ್ನು ನಾವು ಅರಿಯಬೇಕು, ಅರಿವು ಎಲ್ಲವನ್ನು ಒಳಗೊಂಡ ಭಗವಂತನ ಸ್ವರೂಪ ಎಂದು ಅಕ್ಕ ಮಹಾದೇವಿಯವರು ತನ್ನ ವಚನಗಳಲ್ಲಿ ಹೇಳಿದ್ದಾರೆ ಎಂದು ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಎಸ್. ಸುದೀಪ್ ತಿಳಿಸಿದರು.

ನಗರದ ರಾಜೇಂದ್ರ ಭವನದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ನಡೆದ 313ನೇ ಶಿವಾನುಭವ ದಾಸೋಹ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿಯ ವಚನಗಳಲ್ಲಿ ಅರಿವು ಕುರಿತು ಮಾತನಾಡಿದ ಅವರು, ಬಸವಾದಿ ಶರಣರು ರಚಿಸಿರುವ ವಚನಗಳು ವಿಶೇಷವಾದ ಅರ್ಥವನ್ನು ಒಳಗೊಂಡಿವೆ. ಅದರಲ್ಲಿ ಅಕ್ಕ ಮಹಾದೇವಿಯವರ ವಚನಗಳು ಹೆಚ್ಚು ಮೌಲ್ಯಯುತವಾದವು. ಅರಿವು ಬೇರೆಯವರಿಂದ ಪಡೆಯಲು ಸಾಧ್ಯವಿಲ್ಲ. ಅದನ್ನು ಪಡೆಯಬೇಕಾದರೆ ಮೊದಲು ಭಕ್ತನಾಗಬೇಕು ಎಂದರು.

ಅರಿವುಳ್ಳಾತನೇ ಜಂಗಮ. ದೇಹವೆಂಬುದು ಚೆನ್ನಮಲ್ಲಿಕಾರ್ಜುನನ್ನು ಅರಿಯಲು ಇರುವ ಮಾಧ್ಯಮ ಎಂಬುದನ್ನು ಅಕ್ಕ ಮಹಾದೇವಿ ನಿರೂಪಿಸಿದರು. ನಮ್ಮನ್ನು ನಾವು ಅರಿಯದಿದ್ದರೆ ಅದು ಅಜ್ಞಾನ. ಭಕ್ತನಾಗಿ, ಸುಜ್ಞಾನಿಯಾಗಿ ನಮ್ಮನ್ನು ನಾವು ಅರಿಯಬೇಕೆಂಬುದನ್ನು ಅಕ್ಕ ವಚನಗಳಲ್ಲಿ ಹೇಳಿದ್ದಾರೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವರಾತ್ರಿಶ್ವರ ಅಕ್ಕನ ಬಳಗದ ಅಧ್ಯಕ್ಷೆ ಎಂ.ಎ. ನೀಲಾಂಬಿಕಾ ಮಾತನಾಡಿ, ಅರಿವು- ಆಚಾರದ ಬಗ್ಗೆ ಬಸವಾದಿ ಶರಣರ ವಚನಗಳಲ್ಲಿ ಸಾಕಷ್ಟು ಸಮೃದ್ಧ ಜ್ಞಾನವಿದೆ. ಅದರಲ್ಲಿಯೂ ಅಕ್ಕನವರು ವಚನಗಳಲ್ಲಿ ಅನುಭಾವ ಮತ್ತು ಅಭಿವ್ಯಕ್ತಿಯ ಬಗ್ಗೆ ಹೇಳಿದ್ದಾರೆ. ಅಕ್ಕ ಮಹಾದೇವಿ ಹಂಗನ್ನು ತೊರೆದು, ಸಾವಿಲ್ಲದ, ಕೇಡಿಲ್ಲದ ಚೆನ್ನಮಲ್ಲಿಕಾರ್ಜುನನೇ ಪತಿಯೆಂದು ಮಹೋನ್ನತಿಯನ್ನು ಸಾಧಿಸಿದರು ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ಬೂದಿತಿಟ್ಟು ಗ್ರಾಮದ ಬಿ.ಪಿ. ಸುಶ್ಮಿತಾ ಮತ್ತು ಬಿ. ಮಹೇಶ್ ದಂಪತಿ ಕಾರ್ಯಕ್ರಮದ ಸೇವಾರ್ಥದಾರರಾಗಿದ್ದರು. ಎನ್. ಚೂಡಾಮಣಿ ವಚನ ಗಾಯನ ನಡೆಸಿಕೊಟ್ಟರು. ಡಿ.ಎಂ. ಸಿದ್ಧಲಿಂಗಸ್ವಾಮಿ ಸ್ವಾಗತಿಸಿದರು. ಎಂ. ಗಂಗಾಧರ್ ವಂದಿಸಿದರು. ಮಲ್ಲಿಕಾರ್ಜುನ ನಿರೂಪಸಿದರು.