ಸಾರಾಂಶ
ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಂಡಾಗ ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತದೆ
ಕನ್ನಡಪ್ರಭ ವಾರ್ತೆ ಮೈಸೂರು
ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಮೈಸೂರು ವಿವಿ ಬಿ.ಎನ್. ಬಹದೂರ್ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ ಪ್ರಾಧ್ಯಾಪಕ ಪ್ರೊ.ಡಿ. ಆನಂದ್ ತಿಳಿಸಿದರು.ನಗರದ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ವಾಣಿಜ್ಯ ವಿಭಾಗವು ಆಯೋಜಿಸಿದ್ದ ''''''''ತರಂಗ'''''''' ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಅವರು, ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಂಡಾಗ ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.ಜ್ಞಾನದ ಮಾನದಂಡಗಳು ವೇಗವಾಗಿ ಬದಲಾಗುತ್ತಿವೆ. ಈ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳುವುದು ಅತ್ಯಗತ್ಯ ಎಂದು ಅವರು ಕಿವಿಮಾತು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ.ಕೆ. ಮಂಟೇಲಿಂಗು ಮಾತನಾಡಿ, ಜೆಎಸ್ಎಸ್ ಸಂಸ್ಥೆಯು ಮಹತ್ತರವಾದ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಕಾಲೇಜಿನಲ್ಲಿ ಅಚ್ಚುಕಟ್ಟಾಗಿ ತರಂಗ ಫೆಸ್ಟ್ ಅನ್ನು ಆಯೋಜಿಸಿದ್ದಾರೆ. ಮಹತ್ತರವಾದ ಸಾಧನೆಯನ್ನು ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.ಸಿನಿಮಾ ನಟ ಅರ್ಜುನ್ ರಮೇಶ್ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿಯೇ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಒಳ್ಳೆಯ ಮನುಷ್ಯರಾಗಿ ಬದುಕಬೇಕು. ಕಲಾವಿದರಿಗೆ ಸಮಾಜ ಸೇವೆ ಮಾಡುವ ಗುಣವಿರಬೇಕು. ಆತ ಮಾತ್ರ ನಿಜವಾದ ಕಲಾವಿದ ಎನಿಸಿಕೊಳ್ಳುತ್ತಾನೆ ಎಂದು ಹೇಳಿದರು.ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ. ಗಂಗಾಧರಸ್ವಾಮಿ ಇದ್ದರು. ವೈಷ್ಣವಿ ಕೊಣ್ಣೂರು ವೃಂದದವರು ಪ್ರಾರ್ಥಿಸಿದರು. ಎಂ.ಪಿ. ದೀಪಿಕಾ ಸ್ವಾಗತಿಸಿದರು. ಎಂ. ಅನನ್ಯಾ ಮತ್ತು ಕೆ. ಭೂಮಿಕಾ ನಿರೂಪಿಸಿದರು.