ತುಮಕೂರು ಜಿಲ್ಲೆಯಾದ್ಯಂತ ಸಂಭ್ರಮದ ಕ್ರಿಸ್‌ಮಸ್ ಆಚರಣೆ

| Published : Dec 26 2024, 01:00 AM IST

ತುಮಕೂರು ಜಿಲ್ಲೆಯಾದ್ಯಂತ ಸಂಭ್ರಮದ ಕ್ರಿಸ್‌ಮಸ್ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ಹೊರಪೇಟೆಯ ಸಂತ ಲೂರ್ದ್‌ ಮಾತೆ ದೇವಾಲಯ, ಸಿಎಸ್‌ಐ ಲೇಔಟ್‌ನ ಚರ್ಚ್, ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಚರ್ಚ್, ದೇವನೂರು ಚರ್ಚ್, ಶಿರಾ ಗೇಟ್‌ನಲ್ಲಿರುವ ಟಾಮ್ಲಿಸನ್ ಚರ್ಚ್ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿರುವ ಚರ್ಚ್ ಗಳಲ್ಲಿ ಕ್ರೈಸ್ತ ಬಾಂಧವರು ಬೆಳಿಗ್ಗೆ 8 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಕ್ರೈಸ್ತ ಸಮುದಾಯದ ಪವಿತ್ರ ಹಬ್ಬವಾದ ಕ್ರಿಸ್‌ಮಸ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಗರದ ಚರ್ಚ್ ಸರ್ಕಲ್‌ನಲ್ಲಿರುವ ಸಿಎಸ್‌ಐ ವೆಸ್ಲಿ ದೇವಾಲಯ, ಹೊರಪೇಟೆಯ ಸಂತ ಲೂರ್ದ್‌ ಮಾತೆ ದೇವಾಲಯ, ಸಿಎಸ್‌ಐ ಲೇಔಟ್‌ನ ಚರ್ಚ್, ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಚರ್ಚ್, ದೇವನೂರು ಚರ್ಚ್, ಶಿರಾ ಗೇಟ್‌ನಲ್ಲಿರುವ ಟಾಮ್ಲಿಸನ್ ಚರ್ಚ್ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿರುವ ಚರ್ಚ್ ಗಳಲ್ಲಿ ಕ್ರೈಸ್ತ ಬಾಂಧವರು ಬೆಳಿಗ್ಗೆ 8 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ನಗರದಲ್ಲಿರುವ 7 ಸಿಎಸ್‌ಐ ಚರ್ಚ್, ಎರಡು ರೋಮನ್ ಕ್ಯಾಥೋಲಿಕ್ ಚರ್ಚೆ, ಒಂದು ಮಾರ್ಥಾಂಬ ಚರ್ಚ್ ಒಂದು ಫೆದರಲ್ ಚರ್ಚ್, 15 ಇಂಡಿಪೆಂಡೆಂಟ್ ಚರ್ಚ್ ಗಳು ಸೇರಿದಂತೆ ಎಲ್ಲ ಚರ್ಚ್‌ಗಳಲ್ಲಿ ವಿಶೇಷವಾಗಿ ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ಬಣ್ಣ ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದವು. ಕ್ರೈಸ್ತ ಬಾಂಧವರು ಹೊಸ ಉಡುಪುಗಳನ್ನು ಧರಿಸಿ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ನಂತರ ಒಬ್ಬರಿಗೊಬ್ಬರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ವಿಶೇಷವಾಗಿ ತಯಾರಿಸಿದ್ದ ಸಿಹಿ ತಿಂಡಿಗಳನ್ನು ಸಹ ಕ್ರೈಸ್ತ ಬಾಂಧವರು ಪರಸ್ಪರ ಹಂಚಿ ತಿನ್ನುವ ಮೂಲಕ ಈ ಹಬ್ಬ ಶಾಂತಿ ಸೌಹಾರ್ದತೆ ಸಂಕೇತ ಎಂಬ ಸಂದೇಶವನ್ನು ಸಾರಿದರು. ಚರ್ಚ್ ವೃತ್ತದಲ್ಲಿರುವ ಸಿಎಸ್‌ಐ ಮಹಾದೇವಾಲಯದ ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆಯಾದ ಬಳಿಕ ಸಂದೇಶ ನೀಡಿದ ಸಿಎಸ್‌ಐ ಮಹಾದೇವಾಲಯದ ಸಭಾ ಪಾಲಕರು, ಕ್ರಿಸ್‌ಮಸ್ ಏಸುಕ್ರಿಸ್ತನ ಜನ್ಮದಿನದ ಸಂಕೇತ. ಮನುಷ್ಯರಿಗೋಸ್ಕರ ದೇವರು ಪರಲೋಕವನ್ನು ಬಿಟ್ಟು ಭೂಲೋಕಕ್ಕೆ ಬಂದಂತಹ ಶುಭ ವರ್ತಮಾನ ತಿಳಿಸುವಂತಹದ್ದು. ದೇವರು ಮನುಷ್ಯರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾನೆ ಎಂಬುದನ್ನು ತೋರಿಸುವುದು ಈ ಹಬ್ಬದ ಉದ್ದೇಶ ಎಂದರು. ಕ್ರಿಸ್‌ಮಸ್ ಹಬ್ಬ ಕ್ರೈಸ್ತ ಬಾಂಧವರುವರೆಲ್ಲರೂ ಬಹಳ ಉತ್ಸುಕತೆಯಿಂದ ಸಂತಸ, ಸಂಭ್ರಮದಿಂದ ಆಚರಿಸುವಂತಹ ಹಬ್ಬ. ಕ್ರೈಸ್ತರಿಗೆ ಮೂರು ಹಬ್ಬಗಳು ಮಹತ್ವದ್ದಾಗಿವೆ. ಕ್ರಿಸ್‌ಮಸ್ ಹಬ್ಬವನ್ನು ಬೆಳಕಿನ ಹಬ್ಬವೆಂದು ಆಚರಿಸಲಾಗುತ್ತದೆ. ಏಸುಕ್ರಿಸ್ತನು ಬೆಳಕಾಗಿ ಬಂದಿದ್ದಾನೆ. ಹಾಗಾಗಿ ಎಲ್ಲ ಚರ್ಚ್‌ಗಳಲ್ಲಿ ಕ್ಯಾಂಡಲ್‌ಗಳನ್ನು ಹಿಡಿದು ಏಸುವಿನ ಬೆಳಕು ನಮ್ಮೆಲ್ಲ ಸಂಕಷ್ಟವನ್ನು ದೂರ ಮಾಡುತ್ತದೆ ಎಂದು ಹಬ್ಬವನ್ನು ಆಚರಿಸಲಾಗುತ್ತದೆ ಎಂದರು. ಡಿಸೆಂಬರ್ ಮೊದಲ ದಿನದಿಂದ ಈ ಹಬ್ಬದ ಸಡಗರ ಸಂಭ್ರಮಗಳು ಆರಂಭವಾಗುತ್ತದೆ ಎಂದರು. ಬಹಳಷ್ಟು ವರ್ಷಗಳ ಹಿಂದೆ ಏಸುಕ್ರಿಸ್ತ ಹುಟ್ಟಿದಾಗ ಅಂದಿನ ಸಾಮಾಜಿಕ, ಆರ್ಥಿಕವಾದ ಪರಿಸ್ಥಿತಿಗಳು, ರಾಜಕೀಯ, ಧಾರ್ಮಿಕವಾದ ಪರಿಸ್ಥಿತಿಗಳು, ಬಡವರು, ನಿರ್ಗತಿಕರಿಗೆ ವಿರುದ್ಧವಾಗಿ ದೌರ್ಜನ್ಯ, ಶೋಷಣೆ ಮಾಡುವಂತಹ ಸನ್ನಿವೇಶ ಇದ್ದಾಗ ಏಸುಕ್ರಿಸ್ತ ಅಂತಹವರ ಪರವಾಗಿ ಸಮಾಜದಲ್ಲಿ ಶಾಂತಿ, ಸಮಾಧಾನ ತಂದು ದೇವರು ಬಡವರ ಪರ ಇದ್ದಾನೆ ಎಂದು ಸಾರಿ ಹೇಳಿದಂತಹ ಹಬ್ಬ ಇದಾಗಿದೆ ಎಂದು ಹೇಳಿದರು. ಕ್ರಿಸ್‌ಮಸ್ ಹಬ್ಬ ಇಡೀ ಮನುಷ್ಯರನ್ನು ರಕ್ಷಣೆಯ ದಾರಿಯಲ್ಲಿ ನಡೆಸಲಿಕ್ಕೆ ಬಂದಂತಹ ಏಸುವಿನ ಆಗಮನವನ್ನು ಸೂಚಿಸುತ್ತದೆ. ಕ್ರಿಸ್ಮಸ್ ಶಾಂತಿ ಸಮಾಧಾನದ ಹಬ್ಬ. ಶಾಂತಿ ಕಾಪಾಡುವುದೇ ಈ ಹಬ್ಬದ ಸಂದೇಶ ಎಂದರು. ತುಮಕೂರು ಕ್ಷೇತ್ರದ ಉಪಾಧ್ಯಕ್ಷ ಗಣಸುಧೀರ್ ಅವರು, ತುಮಕೂರು ಕ್ಷೇತ್ರಕ್ಕೆ ಒಳಪಡುವ ತುಮಕೂರು ನಗರ, ಗುಬ್ಬಿ, ಕುಣಿಗಲ್, ತಿಪಟೂರು, ಗೌರಿಬಿದನೂರು, ಚಿಕ್ಕಬಳ್ಳಾಪುರದ ಸರ್ವರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿ, ಕ್ರಿಸ್‌ಮಸ್ ಹಬ್ಬ ಜಗತ್ತಿನ ಬಹುತೇಕ ಜನರು ಸಂಭ್ರಮದಿಂದ ಆಚರಿಸುವ ಜಾಗತಿಕ ಹಬ್ಬ. ಈ ಹಬ್ಬ ಯಾವುದೇ ಸಂಪ್ರದಾಯ, ಆಚರಣೆಯಲ್ಲ. ಈ ಹಬ್ಬದ ಪ್ರಧಾನ ವ್ಯಕ್ತಿ ಏಸುಕ್ರಿಸ್ತ.ಆತನ ಜನನ ಮಹತ್ವದ ಅಡಿಗಿರುವುದು ಜನರೊಂದಿಗೆ ಆತ ಬೆರೆತು ಬಾಳ್ವೆ ಮಾಡಿರುವುದರಲ್ಲಿ. ಜನರಿಗಾಗಿ ತ್ಯಾಗ ಮಾಡಿರುವ ಆತನ ಆಚರಣೆಯೇ ಈ ಹಬ್ಬದ ಸಂಕೇತ ಎಂದರು. ದೇಶ, ರಾಜ್ಯ ಸಮೃದ್ಧಿ, ಸಾಮರಸ್ಯ, ಸಮಾಧಾನ, ಶಾಂತಿಯಿಂದ ಸದಾ ಕೂಡಿಸಲಿ ಎಂದು ಏಸುಕ್ರಿಸ್ತನಲ್ಲಿ ಪ್ರಾರ್ಥಿಸಿ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದು ಅವರು ಹೇಳಿದರು.