ಮುಕ್ತ ಕೋರ್ಟಲ್ಲಿ ದೀರ್ಘ ತೀರ್ಪು ಬರೆಸದೆ ಇರಲು ಜಡ್ಜ್‌ ನಿರ್ಧಾರ

| Published : Oct 25 2024, 12:45 AM IST

ಮುಕ್ತ ಕೋರ್ಟಲ್ಲಿ ದೀರ್ಘ ತೀರ್ಪು ಬರೆಸದೆ ಇರಲು ಜಡ್ಜ್‌ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕರಣಗಳ ತ್ವರಿತ ವಿಲೇವಾರಿಗೆ ಹೆಸರುವಾಸಿಯಾಗಿರುವ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಇದೀಗ ಅಮೂಲ್ಯವಾದ ಕೋರ್ಟ್‌ ಸಮಯ ಉಳಿಸಲು ಮುಕ್ತ ನ್ಯಾಯಾಲಯದಲ್ಲಿ ದೀರ್ಘವಾದ ತೀರ್ಪಿನ ಉಕ್ತಲೇಖನ (ಡಿಕ್ಟೇಷನ್‌) ನೀಡದಿರಲು ನಿರ್ಣಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಕರಣಗಳ ತ್ವರಿತ ವಿಲೇವಾರಿಗೆ ಹೆಸರುವಾಸಿಯಾಗಿರುವ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಇದೀಗ ಅಮೂಲ್ಯವಾದ ಕೋರ್ಟ್‌ ಸಮಯ ಉಳಿಸಲು ಮುಕ್ತ ನ್ಯಾಯಾಲಯದಲ್ಲಿ ದೀರ್ಘವಾದ ತೀರ್ಪಿನ ಉಕ್ತಲೇಖನ (ಡಿಕ್ಟೇಷನ್‌) ನೀಡದಿರಲು ನಿರ್ಣಯಿಸಿದ್ದಾರೆ.

ಮುಕ್ತ ನ್ಯಾಯಾಲಯದಲ್ಲಿ ದೀರ್ಘವಾದ ತೀರ್ಪಿನ ಉಕ್ತಲೇಖನ ನೀಡುವುದನ್ನು ತಪ್ಪಿಸುವಂತೆ ಸುಪ್ರೀಂಕೋರ್ಟ್‌ ಸಲಹೆ ನೀಡಿರುವ ಬೆನ್ನಲ್ಲೇ ನ್ಯಾಯಮೂರ್ತಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಪ್ರಕರಣವೊಂದರ ಸಂಬಂಧ ಸುಮಾರು 8 ನಿಮಿಷಗಳ ಕಾಲ ಅರ್ಜಿದಾರ ಮತ್ತು ಪ್ರತಿವಾದಿಗಳ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿಗಳು, ತಕ್ಷಣವೇ ತೀರ್ಪಿನ ಉಕ್ತಲೇಖನ ನೀಡಲು ಮುಂದಾದರು. ಕೆಲ ಕ್ಷಣ ತೀರ್ಪಿನ ಉಕ್ತಲೇಖನ ನೀಡಿದ ನ್ಯಾಯಮೂರ್ತಿಗಳು ಇದು ದೀರ್ಘವಾದ ತೀರ್ಪು ಆಗಲಿದೆ. ಹಾಗಾಗಿ, ತೀರ್ಪಿನ ಉಕ್ತಲೇಖನವನ್ನು ಇಲ್ಲಿ (ಮುಕ್ತ ನ್ಯಾಯಾಲಯದಲ್ಲಿ) ನೀಡುವುದಿಲ್ಲ. ಕಚೇರಿಯಲ್ಲಿ ತೀರ್ಪು ಬರೆಯಿಸುವುದಾಗಿ ತಿಳಿಸಿದರು.

ಅದಕ್ಕೆ ವಕೀಲರು ನ್ಯಾಯಮೂರ್ತಿಗಳ ನಿರ್ಣಯಕ್ಕೆ ತಮ್ಮದೇನೂ ತಕರಾರು ಇಲ್ಲ ಎಂದು ತಿಳಿಸಿದರು. ಆಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, ನ್ಯಾಯಾಂಗದ ಸಮಯ ಉಳಿಸಲು ದೀರ್ಘವಾದ ತೀರ್ಪಿನ ಉಕ್ತಲೇಖನವನ್ನು ತೆರೆದ ನ್ಯಾಯಾಲಯದಲ್ಲಿ ನೀಡದಂತೆ ಸುಪ್ರೀಂಕೋರ್ಟ್‌ ಮಂಗಳವಾರ ಆದೇಶಿಸಿರುವುದರಿಂದ ದೀರ್ಘವಾದ ತೀರ್ಪಿನ ಉಕ್ತಲೇಖನವನ್ನು ತೆರೆದ ನ್ಯಾಯಾಲಯದಲ್ಲಿ ನೀಡುವುದಿಲ್ಲ. ಬದಲಿಗೆ ಕಚೇರಿಯಲ್ಲಿ ನೀಡಲಾಗುವುದು ಎಂದು ತಿಳಿಸಿದರು.