ಸಾರಾಂಶ
ಹಾಸನ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿರವರು ಹೆಚ್ಚು ಮಳೆಯಿಂದ ಹಾನಿಗೊಳಗಾದ ಹಾಸನ ತಾಲೂಕಿನ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳವನ್ನು ವೀಕ್ಷಿಸಿ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.ಕಂದಾಯ ಇಲಾಖೆಯಿಂದ ಮನೆ ಕಳೆದುಕೊಂಡವರಿಗೆ ಶೀಘ್ರವಾಗಿ ಪರಿಹಾರದ ಚೆಕ್ ವಿತರಿಸುವಂತೆ ನಿರ್ದೇಶನವನ್ನು ನೀಡಿದರು. ನಿರಂತರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿ ಬೆಳೆ ಹಾನಿಯಾಗಿದೆ. ಇದರಿಂದ ಜಿಲ್ಲಾಡಳಿತ ಶೀಘ್ರವಾಗಿ ಪರಿಹಾರ ನೀಡಬೇಕು. ಸರ್ಕಾರದ ಸವಲತ್ತನ್ನು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.ಹಾಸನ ನಗರದ ಮತ್ತು ತಾಲೂಕಿನ ಶ್ರೀನಗರದಲ್ಲಿ ಪೆನ್ಷನ್ ಮೊಹಲ್ಲಾ, ತೇಜೂರು, ಕೋರಹಳ್ಳಿ, ಅರೆಕಲ್ಲು, ಹೊಸಳ್ಳಿ, ಎಚ್. ಹರಳಹಳ್ಳಿ, ಯರೆಹಳ್ಳಿ, ರಾಗಿಮುದ್ದನಹಳ್ಳಿ, ಎ. ಕಾಟಿಹಳ್ಳಿಯಲ್ಲಿ ಒಟ್ಟು ಹಾಸನ ತಾಲೂಕು ವ್ಯಾಪ್ತಿಯಲ್ಲಿ 12 ಮನೆಗಳು ಹಾನಿಗೊಳಗಾಗಿದ್ದು, ಶೀಘ್ರವಾಗಿ ಸರ್ಕಾರಕ್ಕೆ ಈ ಬಗ್ಗೆ ವರದಿಯನ್ನು ಸಲ್ಲಿಸಿ ಪರಿಹಾರದ ಚೆಕ್ ವಿತರಿಸುವಂತೆ ತಿಳಿಸಿದರು.
ಭೇಟಿ ಸಂಧರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಯು.ಎಮ್. ಮೋಹನ್ ಕುಮಾರ್ ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.