ಧಾರವಾಡ:

ತಲೆಯಲ್ಲಿ ಮಾಹಿತಿ ಇದ್ದಷ್ಟು ಸಬಲರಾಗುತ್ತೇವೆ. ನ್ಯಾಯಾಧೀಶರೂ ಕೂಡ ವ್ಯವಸ್ಥೆಯ ಶಿಶುವೆ ಎಂದು ನ್ಯಾಯಮೂರ್ತಿ ಬಿ.ಎಂ. ಶ್ಯಾಮಪ್ರಸಾದ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಚನ್ನಬಸಪ್ಪ ಕೊಟ್ಟೂರಶೆಟ್ಟರ್‌ ಮತ್ತು ಮಹಾಂತೇಶ ಕೊಟ್ಟೂರಶೆಟ್ಟರ ಸಂಸ್ಮರಣೆ ದತ್ತಿಯಲ್ಲಿ ‘ನ್ಯಾಯಾಂಗದಲ್ಲಿ ತಂತ್ರಜ್ಞಾನ ಅಳವಡಿಕೆ’ ಕುರಿತು ಮಾತನಾಡಿ, 1995ರಿಂದ ನ್ಯಾಯ ವ್ಯವಸ್ಥೆ ದಶಕದಿಂದ ದಶಕಕ್ಕೆ ಹೇಗೆ ತಂತ್ರಜ್ಞಾನದಲ್ಲಿ ಬದಲಾಯಿತು ಎಂದು ವಿವರಿಸಿದರು. ಮೊದಲು ಪೇಜರ್, ನಂತರ ಮೊಬೈಲ್ ಇಂಟರ್‌ನೆಟ್ ಬಂದು ಬದಲಾವಣೆ ಶೀಘ್ರ ಗತಿಯಲ್ಲಿ ಆಯಿತು. ಇಂಟರ್‌ನೆಟ್ ಎಂಬುದು ಕಮ್ಯೂನಿಟಿ ಬದಲಾವಣೆ ಮಾಡಿತು. ರಾಜ್ಯಾದ್ಯಂತ 180 ಕಾನೂನು ಕಾಲೇಜುಗಳಿದ್ದು ಶಹರಗಳಲ್ಲಿ ಶೇ. 56 ಜನಸಂಖ್ಯೆ ಅಂತರ್ಜಾಲ ಬಳಸುತಿದ್ದಾರೆ ಎಂದರು.

ಮೊದಲು ನ್ಯಾಯಾಲಯದಲ್ಲಿ ಕಕ್ಷಿದಾರರು ಬಂದು ವಕೀಲರನ್ನು ತಮ್ಮ ಕೇಸ್ ಏನಾಗಿದೆ ಅಂತ ಕೇಳುತ್ತಿದ್ದರು. ಈಗ ಇಂಟರ್‌ನೆಟ್ ಮೂಲಕ ಅವರೆ ತಿಳಿದುಕೊಂಡು ಪ್ರಕರಣ ಕುರಿತು ಅವರೇ ಪ್ರಶ್ನಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೋರ್ಟ್‌ಗಳಲ್ಲಿ ಆನ್‌ಲೈನ್ ಕಾನೂನು ತಿದ್ದುಪಡಿ ಮಾಡಿಕೊಂಡರು. ತಂತ್ರಜ್ಞಾನದ ಕ್ಯಾಮೆರಾಗಳ ಮೂಲಕ ವಿಡಿಯೋ, ಆಡಿಯೋ ಬಳಸಿಕೊಂಡು ಕಕ್ಷಿದಾರರ ಮನೆ ಬಾಗಿಲಿಗೆ ನ್ಯಾಯ ಒಯ್ಯುವ ಕಾರ್ಯ ಆರಂಭವಾಯಿತು. ಎಐ ಬಂದರೆ ದಕ್ಷತೆ ಸುಧಾರಿಸಬಹುದು ಎಂದು ಹೇಳಿದರು.

ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ, ಡಾ. ಎಸ್. ಎಸ್. ಹೂಗಾರ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.