ಇಡಗುಂಜಿ ವಿನಾಯಕನಿಗೆ ಪ್ರಸ್ತುತ ಮಂಜುನಾಥ ಭಟ್ ಕುಟುಂಬದ ಪೂಜಾ ಪಾಳಿ ಇದೆ. ಪೂಜಾ ಕಮಿಷನ್ ಹಣದ ವಿಚಾರವಾಗಿ ನಾರಾಯಣ ಭಟ್ ಕುಟುಂಬ ಹೊನ್ನಾವರ ನ್ಯಾಯಾಲಯದಲ್ಲಿ ದಾವೆ ಹೂಡಿದೆ.
ಹೊನ್ನಾವರ: ಪೂಜಾ ಕಮಿಷನ್ ಹಣ ಬಾರದ ಹಿನ್ನೆಲೆಯಲ್ಲಿ ಅರ್ಚಕರು ಪೂಜೆ ಸ್ಥಗಿತಗೊಳಿಸಿದ್ದರಿಂದ ಇಡಗುಂಜಿ ಶ್ರೀ ವಿನಾಯಕ ದೇವಾಲಯಕ್ಕೆ ಬಂದ ಭಕ್ತರು ಪೂಜೆ ನೆರವೇರಿಸದೆ ಮರಳುವಂತಾಯಿತು. ನಂತರ ಜಿಲ್ಲಾ ನ್ಯಾಯಾಧೀಶರು ಆಗಮಿಸಿ ತಾತ್ಕಾಲಿಕವಾಗಿ ಪೂಜೆಯ ವ್ಯವಸ್ಥೆ ಕಲ್ಪಿಸಿದರು.
ಇಡಗುಂಜಿ ವಿನಾಯಕನಿಗೆ ಪ್ರಸ್ತುತ ಮಂಜುನಾಥ ಭಟ್ ಕುಟುಂಬದ ಪೂಜಾ ಪಾಳಿ ಇದೆ. ಪೂಜಾ ಕಮಿಷನ್ ಹಣದ ವಿಚಾರವಾಗಿ ನಾರಾಯಣ ಭಟ್ ಕುಟುಂಬ ಹೊನ್ನಾವರ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ತೀರ್ಪು ಬರುವ ತನಕ ಪೂಜಾ ಕಮಿಷನ್ ಹಣವನ್ನು ಮಂಜುನಾಥ ಭಟ್ ಕುಟುಂಬಕ್ಕೆ ನೀಡದಂತೆ ಆಡಳಿತಾಧಿಕಾರಿಗೂ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆ ನಾಲ್ಕು ತಿಂಗಳಿಂದ ಪೂಜಾ ಕಮಿಷನ್ ಹಣವನ್ನು ತಡೆಹಿಡಿಯಲಾಗಿತ್ತು. ಇದರಿಂದ ಅಸಮಾಧಾನಗೊಂಡ ಮಂಜುನಾಥ ಭಟ್ ಕುಟುಂಬ ಭಾನುವಾರದ ಪೂಜೆ ಸ್ಥಗಿತಗೊಳಿಸಿದರು.ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶರು ಆಗಮಿಸಿ ಮಾತುಕತೆ ನಡೆಸಿ ತಾತ್ಕಾಲಿಕವಾಗಿ ಬೇರೊಬ್ಬರಿಗೆ ಫೂಜಾಕಾರ್ಯ ವಹಿಸಿ ಎಂದಿನಂತೆ ವಿನಿಯೋಗ ನಡೆಯಲು ಅವಕಾಶ ಮಾಡಿಕೊಟ್ಟರು.
ಹೊನ್ನಾವರ ಜೆಎಂಎಫ್ ಸಿ ನ್ಯಾಯಾಧೀಶರು, ಹೊನ್ನಾವರ ತಹಸೀಲ್ದಾರರು, ಅಡಿಷನಲ್ ಎಸ್ಪಿ, ಮುರ್ಡೇಶ್ವರ ಸಿಪಿಐ, ಪಿಎಸ್ಐ ಹಾಗೂ 15ಕ್ಕೂ ಹೆಚ್ಚು ಪೊಲೀಸರು ಈ ವೇಳೆ ಹಾಜರಿದ್ದರು. ಈ ನಡುವೆ ದೇವಾಲಯಕ್ಕೆ ಬಂದ ಭಕ್ತರು ತಾವೇ ತೆಂಗಿನಕಾಯಿ ಒಡೆದುಕೊಂಡು ದೇವರಿಗೆ ನಮಸ್ಕರಿಸಿ ತೆರಳಿದರು. ಗಣಹವನ, ಪೂಜೆ ಎಲ್ಲ ಸೇವೆಗಳು ಕೆಲಸಮಯ ಸ್ಥಗಿತಗೊಂಡಿತ್ತು.