ಸಾರಾಂಶ
ಆತ್ಮಹತ್ಯೆ ಮಾಡಿಕೊಂಡ ಇಲ್ಲಿನ ಕೊನ್ನಾಪುರ ಗ್ರಾಮದ ವಾಸಿ ಪ್ರೇಮಾ ಹಾಗೂ ಮಗ ರಂಜಿತ್ ನಿವಾಸಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪರಿಹಾರ ನೀಡಿದರು.
ಹಲಗೂರು : ಮೈಕ್ರೋ ಫೈನಾನ್ಸ್ ಸಂಸ್ಥೆಯವರ ಕಿರುಕುಳ ಸಹಿಸದೆ ಆತ್ಮಹತ್ಯೆಗೆ ಶರಣಾದ ತಾಯಿ- ಮಗನ ಸಾವಿನ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಆತ್ಮಹತ್ಯೆ ಮಾಡಿಕೊಂಡ ಇಲ್ಲಿನ ಕೊನ್ನಾಪುರ ಗ್ರಾಮದ ವಾಸಿ ಪ್ರೇಮಾ ಹಾಗೂ ಮಗ ರಂಜಿತ್ ನಿವಾಸಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪರಿಹಾರ ನೀಡಿದರು. ಈ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಹಾಗೂ ಸರ್ಕಾರದಿಂದ ನೊಂದ ಕುಟುಂಬದವರಿಗೆ ತಕ್ಷಣವೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮೃತ ಪ್ರೇಮಾ ಅವರ ಮಗಳು ಮಾತನಾಡಿ, ನಾವು ಮೂರು ತಿಂಗಳು ಬಾಕಿ ಕಂತು ಮಾತ್ರ ಕಟ್ಟಬೇಕಿತ್ತು, ಸ್ವಲ್ಪ ಸಮಯ ಕೊಡಿ ಕಟ್ಟುತ್ತೇವೆ ಎಂದರೂ ನಮ್ಮನ್ನು ಮನೆಯಲ್ಲಿರಲು ಬಿಡದೆ ಮನೆಯಿಂದ ಹೊರಗೆ ಕಳಿಸಿದರು. ನಾವು ನಮ್ಮ ಸಂಬಂಧಿಕರ ಮನೆಯಲ್ಲಿದ್ದೆವು, ನಮಗೆ ನ್ಯಾಯ ಕೊಡಿಸಿಕೊಡಿ, ಮುಂದೆ ಈ ರೀತಿ ಯಾರಿಗೂ ಆಗುವುದು ಬೇಡ. ಫೈನಾನ್ಸ್‌ನವರ ಕಿರುಕುಳದಿಂದ ಹಲವಾರು ಮನೆಯವರು ಗ್ರಾಮ ಬಿಟ್ಟು ಹೋಗಿದ್ದಾರೆ. ನಮಗೆ ತುಂಬಾ ತೊಂದರೆ ನೀಡಿದರು, ಮನೆಯಲ್ಲಿ ಸಾಕಿದ ಕೋಳಿಗಳನ್ನೂ ಸಹ ಹೊರಬಿಡಲು ಆಗದೆ ಅವುಗಳನ್ನು ಕೂಡಿಹಾಕಿ ಬೀಗ ಹಾಕಿದ್ದರಿಂದ ಅವುಗಳೂ ಸಹ ಸಾವನ್ನಪ್ಪಿವೆ ಎಂದು ಕಣ್ಣೀರಿಡುತ್ತಾ ಕುಟುಂಬದವರು ಆರ್.ಅಶೋಕ್ ಅವರಿಗೆ ವಿವರಿಸಿದರು.
ನಂತರ ಆರ್.ಅಶೋಕ್ ಮಾತನಾಡಿ, ಸದನದಲ್ಲಿ ನಾನು ಇದರ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸುತ್ತೇನೆ. ಈ ಗ್ರಾಮದಲ್ಲಿ ಎಷ್ಟು ಜನರು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದಿದ್ದೀರಿ ಎಂಬ ಬಗ್ಗೆ ಮಹಿಳೆಯರಿಂದ ಮಾಹಿತಿ ಪಡೆದುಕೊಂಡರು.