ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರ ನ್ಯಾಯಾಂಗ

| Published : Feb 16 2024, 01:50 AM IST

ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರ ನ್ಯಾಯಾಂಗ
Share this Article
  • FB
  • TW
  • Linkdin
  • Email

ಸಾರಾಂಶ

ಜನತೆಗೆ ನ್ಯಾಯಾಂಗದ ಕುರಿತು ಅಪಾರ ಗೌರವವಿದೆ, ಇಂದು ಶಾಸಕಾಂಗ,ಕಾರ್ಯಾಂಗ ದಾರಿ ತಪ್ಪಿದಾಗ ಅದನ್ನು ಸರಿದಾರಿಗೆ ನಡೆಸುವ ಕಾರ್ಯವನ್ನು ನ್ಯಾಯಾಂಗ ಮಾಡುತ್ತಿದೆ. ಶಾಸಕಾಂಗ, ಕಾರ್ಯಾಂಗ ದಾರಿ ತಪ್ಪಿದಾಗ ಅದನ್ನು ಸರಿದಾರಿಗೆ ನ್ಯಾಯಾಂಗ ತರುತ್ತದೆ

ಕನ್ನಡಪ್ರಭ ವಾರ್ತೆ ಕೋಲಾರ

ಸಂವಿಧಾನದಡಿ ನ್ಯಾಯಾಂಗಕ್ಕೆ ಅಪಾರ ಮಾನ್ಯತೆ ನೀಡಲಾಗಿದೆ. ಸಮಾಜದಲ್ಲಿ ಅರಾಜಕತೆ ತಡೆಯಲು, ಆಳುವ ಸರ್ಕಾರಗಳ ಜನವಿರೋಧಿ ನೀತಿಗಳ ಜಾರಿಗೆ ತಡೆಯೊಡ್ಡುವ ಕೆಲಸವನ್ನು ನ್ಯಾಯಾಲಯಗಳು ಮಾಡುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಉಳಿಯುವಂತೆ ಮಾಡಿವೆ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.

ನಗರ ಹೊರವಲಯದ ಅರಹಳ್ಳಿಯ ಸರ್ಕಾರಿ ಕಾನೂನು ಕಾಲೇಜು ಆವರಣದಲ್ಲಿ ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಣಕು ನ್ಯಾಯಾಲಯ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜನತೆಗೆ ಕೋರ್ಟ್‌ ಬಗ್ಗೆ ವಿಶ್ವಾಸ

ಜನತೆಗೆ ನ್ಯಾಯಾಂಗದ ಕುರಿತು ಅಪಾರ ಗೌರವವಿದೆ, ಇಂದು ಶಾಸಕಾಂಗ,ಕಾರ್ಯಾಂಗ ದಾರಿ ತಪ್ಪಿದಾಗ ಅದನ್ನು ಸರಿದಾರಿಗೆ ನಡೆಸುವ ಕಾರ್ಯವನ್ನು ನ್ಯಾಯಾಂಗ ಮಾಡುತ್ತಿದೆ ಎಂಬ ಅಚಲ ನಂಬಿಕೆ ಇನ್ನೂ ಉಳಿದಿದೆ. ಕಾನೂನು ವಿದ್ಯಾರ್ಥಿಗಳು ನ್ಯಾಯಾಂಗದ ಕಾರ್ಯಚಟುವಟಿಕೆಗಳ ಕುರಿತು ಅರಿಯಲು ಅಣಕು ನ್ಯಾಯಾಲಯ ಸ್ಪರ್ಧೆ ಸಹಕಾರಿಯಾಗಿದೆ ಎಂದರು.

ನೀವು ವಕೀಲರಾಗುವವರು ನಿಮ್ಮ ಮೇಲೆ ನಂಬಿಕೆಯಿಟ್ಟು ಕಕ್ಷಿದಾರರು ನಿಮ್ಮಲ್ಲಿಗೆ ಬರುತ್ತಾರೆ, ಅವರ ನಂಬಿಕೆಗೆ ದ್ರೋಹ ಬರೆಯದೇ ವೃತ್ತಿ ಘನತೆಗೆ ಚ್ಯುತಿಯಾಗದಂತೆ ಕೆಲಸ ಮಾಡಲು ಪ್ರತಿಜ್ಞೆ ಸ್ವೀಕರಿಸಿ ಎಂದು ಕಿವಿಮಾತು ಹೇಳಿದರು.ಸಂವಿಧಾನ ಜಾಗೃತಿ ಜಾಥಾ

ನಮ್ಮ ಸಂವಿಧಾನ ಜಾಗೃತಿ ಜಾಥಾ ಈಗ ಗ್ರಾಮಗಳಿಗೆಲ್ಲಾ ಸಂಚರಿಸುತ್ತಿದ್ದು, ನೀವೂ ಭಾಗವಹಿಸಿ, ಜನತೆಗೆ ಸಂವಿಧಾನದಲ್ಲಿನ ಹಕ್ಕುಗಳ ಜತೆಗೆ ಕರ್ತವ್ಯಗಳ ಕುರಿತು ತಿಳಿಸಿಕೊಡುವ ಅಗತ್ಯವಿದೆ, ಕಾನೂನಿನ ಅರಿವು ನೀಡಿದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಮಾಡಬಹುದಾಗಿದೆ. ಕಾನೂನು ನೆರವು ಪ್ರಾಧಿಕಾರ ಸಮಾಜದಲ್ಲಿ ಕಾನೂನಿನ ಅರಿವು ಮೂಡಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ, ನ್ಯಾಯಾಧೀಶರೇ ಶಾಲಾ ಕಾಲೇಜುಗಳಿಗೆ ತೆರಳಿ ಶಾಲಾ ಮಕ್ಕಳಿಗೆ ಅರಿವು ಮೂಡಿಸುತ್ತಿದ್ದಾರೆ, ಇಂತಹ ಕಾರ್ಯದಲ್ಲಿ ವಕೀಲರಾಗುವ ಸಿದ್ದತೆಯಲ್ಲಿರುವ ನೀವು ಪಾಲ್ಗೊಳ್ಳಿ, ಜನತೆಗೆ ಅರಿವು ಮೂಡಿಸಿ ಎಂದು ಸಲಹೆ ನೀಡಿದರು.ಸವಕೀಲರಿಗೆ ನಿರಂತರ ಅಧ್ಯಯನ ಅಗತ್ಯ

ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ ಕೆ.ದ್ವಾರಕನಾಥ್‌ ಬಾಬು ಮಾತನಾಡಿ, ವಕೀಲ ವೃತ್ತಿಯ ಆಶಯದೊಂದಿಗೆ ನೀವು ಬದುಕುಕಟ್ಟಿಕೊಳ್ಳಲು ಬಂದಿದ್ದೀರಿ, ನೀವು ಉತ್ತಮ ವಕೀಲರಾಗಲು ಅರ್ಹತೆ ಗಳಿಸಿಕೊಳ್ಳಿ, ವಕೀಲ ವೃತ್ತಿಯಲ್ಲಿ ಬದಲಾದ ಕಾನೂನುಗಳು,ನಿಯಮಗಳ ಕುರಿತು ನಿರಂತರ ಅಧ್ಯಯನ ಅಗತ್ಯವಿದೆ ಎಂದ ಅವರು, ಉತ್ತಮ ವಕೀಲರಾಗುವವರು ನಿರಂತರ ಓದುವ ವಿದ್ಯಾರ್ಥಿಯಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸ ಗಮನಿಸಿದಾಗ ವಕೀಲರ ಪಾತ್ರ ಅತ್ಯಂತ ಮಹತ್ತವಾಗಿದೆ, ಗಾಂಧೀಜಿಯವರೂ ಸಹಾ ವಕೀಲರೇ ಆಗಿದ್ದರು ಎಂಬುದು ಉಲ್ಲೇಖನೀಯ. ವಕೀಲ ವೃತ್ತಿ ಕೇವಲ ಹಣ ಗಳಿಕೆಗೆ ಸೀಮಿತವಾಗದಿರಲಿ, ನ್ಯಾಯ ಬಯಸಿ ಬರುವ ಬಡವರಿಗೂ ನೀರು ನೆರವಾಗುವ ಪ್ರಯತ್ನ ಮಾಡಿ ಎಂದರು.

ಅದಾಲತ್‌ ಸಹಕಾರಿ

ಇತ್ತೀಚಿನ ದಿನಗಳಲ್ಲಿ ರಾಜೀ, ಲೋಕ ಅದಾಲತ್‌ಗಳು ಹೆಚ್ಚು ಪ್ರಚಲಿತವಾಗುತ್ತಿದ್ದು, ನ್ಯಾಯಾಲಯದಲ್ಲಿ ಪ್ರಕರಣಗಳ ಹೊರೆ ತಗ್ಗಿಸುವಲ್ಲಿ ಇದು ಸಹಕಾರಿಯಾಗಿದೆ ಎಂದ ಅವರು, ಈ ನಿಟ್ಟಿನಲ್ಲಿ ಮುಂದೆ ವಕೀಲರಾಗುವ ನೀವು ಲೋಕ ಅದಾಲತ್,ರಾಜೀ ಪ್ರಕರಣಗಳಿಗೆ ಒತ್ತು ನೀಡುವ ಮೂಲಕ ಸಾಮಾಜಿಕ ಕಾಳಜಿ ತೋರಬೇಕು ಎಂದರು.

ಉಪನ್ಯಾಸಕರದ ಸಿ.ಎಸ್. ಪಾಟೀಲ್, ವಿ.ಸುದೇಶ್, ಎಸ್.ದಶರಥ, ಎಸ್.ದಿನೇಶ್, ಹೆಚ್.ಎಲ್.ವೆಂಕಟೇಶ್, ವಿನೀತ್ ಶ್ಯಾಮ್ ಭಟ್, ಎಸ್.ಏನ್.ಅಂಬೇಡ್ಕರ್, ರೇವಯ್ಯ ಒಡೆಯರ್, ಎಸ್.ಬಿ.ಚೇತನ ಇದ್ದರು.