ಕನ್ನಡಪ್ರಭ ವಾರ್ತೆ ಬಾಗಲಕೋಟೆ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಧೀಶರ ನೇಮಕವಾಗಿಲ್ಲ ಇದರಿಂದಲೇ ನ್ಯಾಯದಾನ ವಿಳಂಬವಾಗುತ್ತಿದೆ ಎಂದು ಕರ್ನಾಟಕ ಹೈಕೋರ್ಟ ನ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಕಳವಳ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಧೀಶರ ನೇಮಕವಾಗಿಲ್ಲ ಇದರಿಂದಲೇ ನ್ಯಾಯದಾನ ವಿಳಂಬವಾಗುತ್ತಿದೆ ಎಂದು ಕರ್ನಾಟಕ ಹೈಕೋರ್ಟ ನ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಕಳವಳ ವ್ಯಕ್ತಪಡಿಸಿದರು.ಇಲ್ಲಿನ ಜಿಲ್ಲಾ ನ್ಯಾಯಾಲಯದ ರಜತ ಮಹೋತ್ಸವದ ಪ್ರಯುಕ್ತ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯ ವಿತರಣೆಯಲ್ಲಿ ವಿಳಂಬ ವಾಗುತ್ತಿರುವುದಕ್ಕೆ ಕಾರಣ ಅಗತ್ಯಕ್ಕೆ ತಕ್ಕಷ್ಟು ನ್ಯಾಯಾಧೀಶರು, ನ್ಯಾಯಾಂಗ ಮೂಲಸೌಕರ್ಯವಿಲ್ಲ ಅದನ್ನು ಸೃಜಿಸುವ ಜವಾಬ್ದಾರಿ ಕಾಯಾರ್ಂಗದ ಮೇಲಿದೆ ಎಂದರು.ಇತರೆ ದೇಶಗಳಲ್ಲಿ 10 ಲಕ್ಷಕ್ಕೆ 80-120 ನ್ಯಾಯಧೀಶರಿದ್ದರೆ ಭಾರತದಲ್ಲಿ 10 ಲಕ್ಷಕ್ಕೆ ಶೇ.14.5 ನ್ಯಾಯಾಧೀಶರಿರುವುದು ಕಳವಳಕಾರಿ ಎಂದರು.
ಬಾಗಲಕೋಟೆ ಜಿಲ್ಲಾ ನ್ಯಾಯಾಲಯ 25 ವರ್ಷದ ಹಿಂದೆ ಸ್ಥಾಪನೆಗೊಂಡಿದೆ. ಆಗಿದ್ದ ಸಿಬ್ಬಂದಿ, ಸೌಕರ್ಯ ಈಗಲೂ ಮುಂದವರಿದಿದ್ದರೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದರು.ನಾನೂ ಇದೇ ಜಿಲ್ಲೆಯ ಹುನಗುಂದದವನು.ಹಿಂದೆ ಹುನಗುಂದ ನ್ಯಾಯಾಲಯ ಉದ್ಘಾಟನೆ ಸಂದರ್ಭದಲ್ಲಿ ಭೂಸ್ವಾಧೀನ ಪ್ರಕರಣಗಳ ತ್ವರಿತ ವಿಲೇವಾರಿಯಾಗಿ ರೈತರು ನನಗೆ ಮನವಿ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ವಕೀಲರ ಸಂಘಗಳು ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಹೇಳಿದರು.
ಹೈಕೋರ್ಟನ ಇನ್ನೋರ್ವ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ ಮಾತನಾಡಿ, ನಾವು ವಕೀಲ ವೃತ್ತಿಗೆ ಪ್ರವೇಶಿಸಿದ ಸಂದರ್ಭದಲ್ಲಿ ಯಾವುದೇ ಪ್ರಕರಣದ ಅಧ್ಯಯನ ಮಾಡಬೇಕಾದರೆ ಅದಕ್ಕೆ ತೊಡಕುಗಳಿರುತ್ತಿದ್ದವು. ಗ್ರಂಥಾಲಯಗಳಿಗೆ ತೆರಳಿ ಪುಸ್ತಕಗಳನ್ನು ಹುಡುಕಿ ಅಧ್ಯಯನ ಮಾಡಬೇಕಿತ್ತು. ಕೆಲವು ಕೇಸ್ಸ್ಟಡೀಸ್ಗಳನ್ನು ಕಾಲೇಜುಗಳಲ್ಲಿ ಹುಡುಕಬೇಕಿತ್ತು. ಅಂತರ್ಜಾಲ, ಎಐ ಈ ಎಲ್ಲ ಕಾರ್ಯವನ್ನೂ ದೂರಗೊಳಿಸಿದೆ. ವಕೀಲರಿಗೆ ಕ್ಷಣಮಾತ್ರದಲ್ಲಿ ಎಲ್ಲ ಮಾಹಿತಿಯೂ ಲಭಿಸುತ್ತದೆ. ಅದರ ಸಮರ್ಪಕ ಬಳಕೆಯ ನೈಪುಣ್ಯತೆ ಸಾಧಿಸಬೇಕೆಂದು ಕಿವಿಮಾತು ಹೇಳಿದರು.ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ನಾನು ವಕೀಲ ವೃತ್ತಿಗಾಗಿ ವಿಜಯಪುರ ಜಿಲ್ಲಾ ನ್ಯಾಯಾಲಯವನ್ನು ಆಯ್ಕೆ ಮಾಡಿಕೊಂಡಿದ್ದೆ. ಆದರೆ, ಮನೆಯಲ್ಲಿ ತಾಯಿ ಕೆಲಸ ಮಾಡುವುದಿದ್ದರೆ ಬಾದಾಮಿ ಅಥವಾ ಬಾಗಲಕೋಟೆಯಲ್ಲೇ ಮಾಡುವಂತೆ ಹೇಳಿದ್ದರು. ಮುಂದೆ ಅಶೋಕ ಕಟ್ಟಿಮನಿ, ಬಿ.ಬಿ.ಚಿಮ್ಮನಕಟ್ಟಿ ಅವರ ಸಲಹೆ, ಒತ್ತಾಯಸೆಯಂತೆ ಇಲ್ಲಿಯೇ ವೃತ್ತಿ ಮುಂದವರಿಸಿದೆ. ರಾಜಕಾರಣದಲ್ಲಿ ಯಶಸ್ಸು ಕಾಣುವುದಕ್ಕೂ ವಕೀಲ ವೃತ್ತಿಯೇ ಕಾರಣ ಎಂದು ನೆನೆದರು.
ಹೈಕೋರ್ಟನ ನಿವೃತ್ತ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ ಮಾತನಾಡಿ, ನ್ಯಾ.ಶಿವಂಶಂಕರ ಅಮರಣ್ಣವರ ಹಾಗೂ ನ್ಯಾ.ಅನಿಲ ಕಟ್ಟಿ ಅವರು ಹಿಂದೆ ಬಾಗಲಕೋಟೆ ಜಿಲ್ಲಾ ನ್ಯಾಯಾಧೀಶರಾಗಿ ಕೆಲಸ ಮಾಡಿದವರು. ಇಡೀ ವೃತ್ತಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ನ್ಯಾಯಾಂಗ ಕ್ಷೇತ್ರಕ್ಕೆ ಗೌರವ ತರುವ ರೀತಿಯಲ್ಲಿ ಅವರು ಕೆಲಸ ಮಾಡಿದ್ದಾರೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲ ಟಿ.ಆರ್.ಕುಲಕರ್ಣಿ ಅವರು, ಬಾಗಲಕೋಟೆ ವಕೀಲರ ಸಂಘಕ್ಕೆ 125 ವರ್ಷಗಳ ಇತಿಹಾಸವಿದೆ. ಅನೇಕರು ರಾಜ್ಯ, ರಾಷ್ಟ್ರದಲ್ಲಿ ಹೆಸರು ಮಾಡಿದ್ದಾರೆ ಎಂದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಪ ಸದಸ್ಯ ಹಣಮಂತ ನಿರಾಣಿ, ಹೈಕೋರ್ಟ ನ ನಿವೃತ್ತ ನ್ಯಾಯಮೂರ್ತಿ ಅನಿಲ ಕಟ್ಟಿ, ಜಿಲ್ಲಾ ನ್ಯಾಯಾಧೀಶ ಆರ್ಕೆಜಿಎಂಎಂ ಮಹಾಸ್ವಾಮೀಜಿ, ವಕೀಲರ ಸಂಘದ ಅಧ್ಯಕ್ಷ ಬಸವರಾಜ ಗದ್ದಿ ಇದ್ದರು. ಕಾರ್ಯದರ್ಶಿ ಪ್ರಶಾಂತ ನಾರಾಯಣಕರ ಸ್ವಾಗತಿಸಿದರು.