ಸಹಕಾರ ಕ್ಷೇತ್ರ ಬೆಳವಣಿಗೆಯಿಂದ ಎಲ್ಲಾ ವರ್ಗಕ್ಕೆ ನ್ಯಾಯ: ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ

| Published : Nov 15 2024, 12:37 AM IST

ಸಹಕಾರ ಕ್ಷೇತ್ರ ಬೆಳವಣಿಗೆಯಿಂದ ಎಲ್ಲಾ ವರ್ಗಕ್ಕೆ ನ್ಯಾಯ: ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಕ್ಷೇತ್ರ ಬೆಳೆದಂತೆ ರೈತರ ಪ್ರಗತಿಯ ಜೊತೆಗೆ ಎಲ್ಲಾ ವರ್ಗದವರಿಗೆ ಅಧಿಕಾರ ಮತ್ತು ಸಾಮಾಜಿಕ ನ್ಯಾಯ ಕಲ್ಪಿಸಿಕೊಡಲು ಸಾಧ್ಯವಿದೆ ಎಂದು ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ ತಿಳಿಸಿದರು. ಚಾಮರಾಜನಗರದಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಹಕಾರ ಕ್ಷೇತ್ರ ಬೆಳೆದಂತೆ ರೈತರ ಪ್ರಗತಿಯ ಜೊತೆಗೆ ಎಲ್ಲಾ ವರ್ಗದವರಿಗೆ ಅಧಿಕಾರ ಮತ್ತು ಸಾಮಾಜಿಕ ನ್ಯಾಯ ಕಲ್ಪಿಸಿಕೊಡಲು ಸಾಧ್ಯವಿದೆ ಎಂದು ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ ತಿಳಿಸಿದರು. ತಾಲೂಕಿನ ಕುದೇರಿನ ಚಾಮುಲ್ ಘಟದಲ್ಲಿರುವ ಎಚ್‌ಎಸ್‌ಎಂ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕುದೇರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಸಹಯೋಗದಲ್ಲಿ ನಡೆದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಕ್ಷೇತ್ರ ಬೆಳೆದಷ್ಟು ಆ ಗ್ರಾಮಗಳು ಅಭಿವೃದ್ಧಿಯಾಗುತ್ತದೆ. ಅಲ್ಲಿರುವ ಎಲ್ಲರಿಗೂ ಸಹ ಸಮಾನಂತರ ಅಧಿಕಾರ ಲಭಿಸುತ್ತದೆ. ಎಲ್ಲಾ ವರ್ಗದವರು ಭಾಗವಹಿಸುವುದರಿಂದ ಸೌಹಾರ್ದತೆ ಬೆಳೆಯುತ್ತದೆ. ಪರಸ್ಪರ ಸಹಕಾರದಿಂದ ಅಭಿವೃದ್ಧಿ ಹೊಂದಲು ಸಹಕಾರಿ ಕ್ಷೇತ್ರ ಪ್ರಬಲವಾದ ಅಸ್ತ್ರವಾಗಿದೆ. ಈ ನಿಟ್ಟಿನಲ್ಲಿ ಏಳು ದಿನಗಳ ಕಾಲ ನಡೆಯುವ ಸಹಕಾರಿ ಸಪ್ತಾಹ ಜಿಲ್ಲೆಯಲ್ಲಿ ಯಶಸ್ವಿಯಾಗಲಿ. ಯುವ ಸಮುದಾಯಕ್ಕೆ ಸಹಕಾರಿ ತತ್ವಗಳ ಬಗ್ಗೆ ಹೆಚ್ಚು ಮನವರಿಕೆ ಮಾಡಿಕೊಟ್ಟರೆ ಇನ್ನು ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು. ಸಹಕಾರಿ ಕ್ಷೇತ್ರ ಸ್ವಾತಂತ್ರ್ಯ ಪೂರ್ವದಿಂದಲು ರಾಜ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಸಿದ್ದನಗೌಡ ಪಾಟೀಲ್ ಅವರು ಸಹಕಾರ ಕ್ಷೇತ್ರದ ಪಿತಾಮಹ ಅವರ ಶ್ರಮ ಬಹಳ ಇದೆ. ಹೀಗಾಗಿ ಅವರನ್ನು ಸ್ಮರಿಸಿಕೊಳ್ಳುತ್ತಾ ಸಹಕಾರಿ ರಂಗವನ್ನು ನಾವೆಲ್ಲರು ಸೇರಿ ಬೆಳೆಸೋಣ ಎಂದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಚಾಮುಲ್ ನಿರ್ದೇಶಕ ಎಚ್.ಎಂ.ನಂಜುಂಡಪ್ರಸಾದ್ ಸಹಕಾರಿ ಧ್ವಜಾರೋಹಣ ನೆರವೇರಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಸಪ್ತಾಹವನ್ನು ಹಬ್ಬದ ಮಾದರಿಯಲ್ಲಿ ಆಚರಣೆ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಸಹಕಾರಿ ಸಪ್ತಾಹವನ್ನು ಅತ್ಯಂತ ಯಶಸ್ವಿಯಾಗಿ ಆಯೋಜನೆ ಮಾಡುವ ನಿಟ್ಟಿನಲ್ಲಿ ಏಳು ದಿನಗಳು ಸಹ ವಿವಿಧ ತಾಲೂಕು ಕೇಂದ್ರಗಳ ಸಹಕಾರಿ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದೆ. ಸಹಕಾರಿ ಕ್ಷೇತ್ರದ ಬಗ್ಗೆ ಅಪಾರದ ಕೊಡುಗೆಯನ್ನು ನೀಡಿರುವ ಹಾಗು ಜಿಲ್ಲಾ ಹಾಲು ಒಕ್ಕೂಟದ ಸ್ಥಾಪನೆಗೆ ಕಾರಣಕರ್ತರಾದ ದಿ.ಎಚ್.ಎಸ್.ಮಹದೇವಪ್ರಸಾದ್ ಸಭಾಂಗಣದಲ್ಲಿ ಸಹಕಾರಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದರು.

ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್ ಮಾತನಾಡಿ, ಸಹಕಾರಿ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ನಮ್ಮ ಚಾಮುಲ್ ಕಾರಣವಾಗಿದೆ. ನಂದಿನಿ ಬ್ರ್ಯಾಂಡ್ ವಿದೇಶದಲ್ಲಿ ಹೆಸರು ಮಾಡಲು ಸಹಕಾರಿ ತತ್ವದಲ್ಲಿ ಸ್ಥಾಪನೆಯಾಗಿರುವ ಕೆಎಂಎಫ್, ಕಾರಣವಾಗಿದೆ. ತಿರುಪತಿ ತಿಮ್ಮಪ್ಪನ ಲಾಡು ತಯಾರಿಕೆಯುಲ್ಲಿ ನಂದಿನಿ ತುಪ್ಪದ ಘಮಲು ಇದೆ. ಅದೇ ರೀತಿ ವಿವಿಧ ನಂದಿನಿ ಉಪ ಉತ್ಪನ್ನಗಳನ್ನು ತಯಾರಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಗಮನಾರ್ಹವಾದ ಸಾಧನೆಯನ್ನು ನಂದಿನಿ ಮಾಡಿದೆ. ಇಂಥ ಸಹಕಾರಿ ರಂಗದಲ್ಲಿ ನಾವೆಲ್ಲರು ಸೇವೆ ಸಲ್ಲುತ್ತಿದ್ದೇವೆ ಎಂಬುದು ಹೆಮ್ಮೆ ಎಂದರು. ಚಾ.ನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಉಮೇಶ್ ನಾಯಕ್ ಸಹಕಾರಿ ಕ್ಷೇತ್ರಗಳ ಬೆಳವಣಿಗೆ ಬಗ್ಗೆ ವಿಚಾರ ಮಂಡಿಸಿದರು. ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ರಾಯಪ್ಪನ್, ನಿರ್ದೇಶಕರಾದ ಜಿ.ಮಡಿವಾಳಪ್ಪ, ಎಚ್.ಎಂ.ಬಸವಣ್ಣ, ಎಂ.ಎಂ.ನಾಗರಾಜು, ಪ್ರಭುಸ್ವಾಮಿ, ಸುಂದರರಾಜ್, ವಿ.ಮಹದೇವಸ್ವಾಮಿ, ದಾಕ್ಷಾಯಿನಿ, ಚಾಮುಲ್ ನಿರ್ದೇಶಕರಾದ ಸದಾಶಿವಮೂರ್ತಿ, ಎಂ. ನಂಜುಂಡಸ್ವಾಮಿ, ಎಂ.ಪಿ. ಸುನೀಲ್, ರಾಹುಲ್ ಅಹಮದ್, ಕಮರವಾಡಿ ರೇವಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಹದೇವಪ್ಪ, ಹಾಪ್‌ಕಾಮ್ಸ್ ಅಧ್ಯಕ್ಷ ಲೋಕೇಶ್, ಎಡಿಸಿ ಗೀತಾ ಹುಡೇದಾ, ಸಹಕಾರ ಸಂಘಗಳ ಉಪ ನಿಬಂಧಕರಾದ ಜ್ಯೋತಿ ಅರಸು, ಸಹಾಯಕ ನಿಬಂಧಕರಾದ ಪಿ. ಶೋಭಾ, ಸಹಕಾರ ಅಭಿವೃದ್ದಿ ಅಧಿಕಾರಿ ಡಿ.ಎಲ್. ಸುರೇಶ್, ಚಾಮುಲ್ ವ್ಯವಸ್ಥಾಪಕ ಶ್ರೀಕಾಂತ್, ಮ್ಯಾನೇಜರ್ ಮಲ್ಲಿಕಾರ್ಜುನ್, ಮಲ್ಲೇಶ್, ಕೆಂಡಗಣ್ಣ ಹಾಗೂ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಭಾಗವಹಿಸಿದ್ದರು.