ಮರಕುಂಬಿ ಪ್ರಕರಣದಲ್ಲಿ ದಲಿತರಿಗೆ ನ್ಯಾಯ: ಎಂ.ಎ. ಬೇಬಿ

| Published : Dec 01 2024, 01:31 AM IST

ಮರಕುಂಬಿ ಪ್ರಕರಣದಲ್ಲಿ ದಲಿತರಿಗೆ ನ್ಯಾಯ: ಎಂ.ಎ. ಬೇಬಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ಉಳ್ಳವರು, ಬಡವರು ಎಂದು ವಿಂಗಡಣೆ ಮಾಡಿಕೊಂಡು ದೇಶವನ್ನು ವಿಭಜನೆ ಮಾಡಲು ಹೊರಟಿದೆ. ಬಂಡವಾಳಶಾಹಿಗಳ ಪರವಾಗಿ ಆಡಳಿತ ನಡೆಸುವ ಮೂಲಕ ಬಡ ಜನರ ಬದುಕು ಸರ್ವನಾಶ ಮಾಡಲು ಹೊರಟಿದೆ ಎಂದು ಕೇರಳದ ಮಾಜಿ ಸಚಿವರಾದ ಎಂ.ಎ. ಬೇಬಿ ಆರೋಪಿಸಿದರು.

ಗಂಗಾವತಿ: ಮರಕುಂಬಿ ಗ್ರಾಮದಲ್ಲಿ ನಡೆದ ದಲಿತರ ಮೇಲಿನ ಹಲ್ಲೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ನೀಡುವ ಮೂಲಕ ದಲಿತರಿಗೆ ನ್ಯಾಯವನ್ನು ಒದಗಿಸಿದೆ. ಈ ಪ್ರಕರಣದಲ್ಲಿ ನಾವು ಗೆಲುವು ಸಾಧಿಸಿದಂತೆ ಆಗಿದೆ ಎಂದು ಕೇರಳದ ಮಾಜಿ ಸಚಿವರಾದ ಎಂ.ಎ. ಬೇಬಿ ಹೇಳಿದರು.

ನಗರದ ಡಾ. ಬಾಬು ಜಗಜೀವನ ರಾವ್ ಸರ್ಕಲ್‌ನಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ 6ನೇ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಮರಕುಂಬಿ ಗ್ರಾಮದಲ್ಲಿ ಸವರ್ಣೀಯರು ಒಗ್ಗೂಡಿಕೊಂಡು ದಲಿತರ ಮನೆಗಳಿಗೆ ಬೆಂಕಿ ಹಚ್ಚಿ, ಹಲ್ಲೆ ಮಾಡಿದ್ದರು. ಈ ಘಟನೆಯ ಪ್ರಮುಖ ಸಾಕ್ಷಿಯಾಗಿರುವ ವೀರೇಶ ಎನ್ನುವ ದಲಿತ ಯುವಕನ ಕೊಲೆ ಮಾಡಿ, ಪ್ರಕರಣ ಮುಚ್ಚಿ ಹಾಕಲು ಹೊರಟಿದ್ದರು. ಆದರೆ ದಲಿತರ ಪರವಾಗಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಉಗ್ರ ಹೋರಾಟ ನಡೆಸಿ, ಜಿಲ್ಲಾಡಳಿತದ ಕಣ್ಣು ತೆರೆಸಲು ಮುಂದಾಗಿತ್ತು. ಸೂಕ್ತ ರೀತಿಯಲ್ಲಿ ಪ್ರಕರಣದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳ ಕಾಲ ವಿಚಾರಣೆ ನಡೆಸಿ ವಕೀಲರು, ನ್ಯಾಯಾಧೀಶರು ದಲಿತರ ಮೇಲೆ ಹಲ್ಲೆ ನಡೆಸಿದ 98 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡುವ ಮೂಲಕ ದಲಿತರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಇದು ನಾವೆಲ್ಲರೂ ಗೆಲುವು ಆಗಿದೆ ಎಂದರು.

ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ಉಳ್ಳವರು, ಬಡವರು ಎಂದು ವಿಂಗಡಣೆ ಮಾಡಿಕೊಂಡು ದೇಶವನ್ನು ವಿಭಜನೆ ಮಾಡಲು ಹೊರಟಿದೆ. ಬಂಡವಾಳಶಾಹಿಗಳ ಪರವಾಗಿ ಆಡಳಿತ ನಡೆಸುವ ಮೂಲಕ ಬಡ ಜನರ ಬದುಕು ಸರ್ವನಾಶ ಮಾಡಲು ಹೊರಟಿದೆ. ಕಾರ್ಮಿಕರಿಗೆ, ಬಡವರಿಗೆ, ದಲಿತರಿಗೆ ನ್ಯಾಯ ದೊರೆಯಬೇಕಾದರೆ ಮೋದಿ ಸರ್ಕಾರವನ್ನು ಕಿತ್ತು ಹಾಕಬೇಕು. ಅದಕ್ಕಾಗಿಯೇ ನಾವೆಲ್ಲರೂ ಹೋರಾಟ ನಡೆಸಬೇಕಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಭಾರತ ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ವಹಿಸಿದ್ದರು. ಯು. ಬಸವರಾಜ್, ಎಸ್. ವರಲಕ್ಷ್ಮೀ, ಜಿ. ನಾಗರಾಜ್, ಚಂದ್ರಪ್ಪ ಹೊಸಕೇರಿ, ಅಮರೇಶ ಕಡಗದ, ಗ್ಯಾನೇಶ ಕಡಗದ, ಮಂಜುನಾಥ ಡಗ್ಗಿ, ಬಾಳಪ್ಪ ಹುಲಿಹೈದರ್, ಕೆ. ಹುಸೇನಪ್ಪ, ಸಂಗಮ್ಮ, ಸುಕಂಪ್ಪ ಗದಗ, ಕಾಶಿಂಸಾಬ ಇತರರು ಇದ್ದರು.