ಸಮಾಜದಲ್ಲಿ ಸಂಘಟನೆಗಳು ಬಲಿಷ್ಠಗೊಂಡಲ್ಲಿ ಅನ್ಯಾಯಕ್ಕೊಳಗಾದ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ. ಹಾಗಾಗಿ ಗ್ರಾಮೀಣ ಭಾಗಕ್ಕೂ ಸಂಘಟನೆಗಳನ್ನು ವಿಸ್ತರಿಸಿ ಗಟ್ಟಿಗೊಳಿಸುವ ಕಾರ್ಯ ಪ್ರಸ್ತುತ ದಿನಗಳಲ್ಲಿ ಅನಿವಾರ್ಯವಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಹೇಳಿದರು
ಕನ್ನಡ ಪ್ರಭ ವಾರ್ತೆ ಮೊಳಕಾಲ್ಮೂರು
ಸಮಾಜದಲ್ಲಿ ಸಂಘಟನೆಗಳು ಬಲಿಷ್ಠಗೊಂಡಲ್ಲಿ ಅನ್ಯಾಯಕ್ಕೊಳಗಾದ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ. ಹಾಗಾಗಿ ಗ್ರಾಮೀಣ ಭಾಗಕ್ಕೂ ಸಂಘಟನೆಗಳನ್ನು ವಿಸ್ತರಿಸಿ ಗಟ್ಟಿಗೊಳಿಸುವ ಕಾರ್ಯ ಪ್ರಸ್ತುತ ದಿನಗಳಲ್ಲಿ ಅನಿವಾರ್ಯವಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಹೇಳಿದರುಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಗುರುವಾರ ದಸಂಸ, ಸಾಮಾಜಿಕ ಪರಿವರ್ತನಾ ವೇದಿಕೆ, ಮಾದಿಗ ದಂಡೋರ, ಕರ್ನಾಟಕ ಪ್ರಾಂತ್ಯ ರೈತ ಸಂಘ, ತಾಲೂಕು ನೀರಾವರಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಪ್ರಗತಿ ಪರ ಸಂಘಟನೆಗಳ ಸಹಯೋಗದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮ ಹಾಗೂ ನೀರಾವರಿ ಸಮಾವೇಶದಲ್ಲಿ ಮಾತನಾಡಿದರು
ಪ್ರಸ್ತುತ ದಿನಗಳ ಜನ ಸಾಮಾನ್ಯರಲ್ಲಿ ಹೋರಾಟ ಮನೋಭಾವನೆ ಕಡಿಮೆಯಾಗುತ್ತಿದೆ. ಸಂಘಟನಾತ್ಮಕ ಚಿಂತಕರಿಗೆ ಸಹಕಾರ ಸಿಗುವುದು ವಿರಳವಾಗುತ್ತಿದೆ.ಸಮಾಜಕ್ಕೆ ಸಂಘಟನೆಗಳು ಅಗತ್ಯವಾಗಿವೆ. ಹೋರಾಟದ ಮನೋಭಾವನೆ ಇಲ್ಲದೆ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗದಂತಹ ಸ್ಥಿತಿ ಎದುರಾಗಿದೆ.ನೋವುಂಡ ಜನರಿಗೆ ನ್ಯಾಯ ದೊರಕಿಸಿಕೊಡಲು ಸಂಘಟನೆಗಳು ಅನಿವಾರ್ಯ ಮತ್ತು ಅಗತ್ಯವಾಗಬೇಕಿದೆ.ಕಾರ್ಯಕರ್ತರು ಸಂಘಟಿತರಾಗಬೇಕು.ಗ್ರಾಮೀಣ ಭಾಗಕ್ಕೂ ಸಂಘಟನೆಗಳನ್ನು ವಿಸ್ತರಿಸುವ ಮೂಲಕ ಸಂಘಟನೆಗಳನ್ನು ಬಲಿಷ್ಠವಾಗಿ ಕಟ್ಟುವ ಕೆಲಸವಾಗಬೇಕು ಎಂದರುಹಿರಿಯ ಪತ್ರ ಕರ್ತ ದೊಣ್ಣೆಹಳ್ಳಿ ಗುರುಮೂರ್ತಿ ಮಾತನಾಡಿ, ಕುಡಿಯುವ ನೀರಿಗೆ,ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವಂತೆ,ಸೂರು ಕಲ್ಪಿಸಿಕೊಳ್ಳಲು ಹೋರಾಟ ಮಾಡುವಂತ ಸಂದಿಗ್ಧ ಪರಿಸ್ಥಿಯಲ್ಲಿ ದೇಶದ ಜನ ಸಾಮಾನ್ಯರಿಗೆ ಎದುರಾಗಿದೆ.ಸಮಗ್ರ ನೀರಾವರಿ ಇಲ್ಲದಾಗಿದೆ.ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಬದುಕನ್ನು ಕಟ್ಟಿಕೊಡುವಂತ ಸಂವಿಧಾನಿಕ ಹಕ್ಕುಗಳಿಗಾಗಿ ಜನಸಾಮಾನ್ಯರು ಹೋರಾಟ ಮಾಡುವಂತ ಅನಿವಾರ್ಯತೆ ದೇಶದಲ್ಲಿ ತಲೆದೋರಿದೆ.ಆಳಿದ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ ಭಾವನೆಯಿಂದಾಗಿ ದೇಶ ಶಿಥಿಲಗೊಂಡಂತಾ ಸ್ಥಿತಿಯಲ್ಲಿದೆ. ಜನರು ಜಾಗೃತರಾಗಬೇಕು ನಮ್ಮ ಹಕ್ಕಿಗಾಗಿ ಸಂಘಟಿತರಾಗುವುದು ಅಗತ್ಯ ಎಂದರು.
ಇದೇ ವೇಳೆ ಚಿಂತಕ ಯಾದವ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಸರ್ಕಾರಗಳ ನಿರ್ಲಕ್ಷ್ಯ ಭಾವನೆಯಿಂದಾಗಿ ಬಯಲು ಸೀಮೆಯ ಜೀವನಾಡಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವಿಳಂಬವಾಗಲು ಕಾರಣವಾಗಿದೆ. ಕಳೆದ 15 ವರ್ಷಗಳ ಹಿಂದೆ ಆರಂಭಗೊಂಡ ಎತ್ತಿನ ಹೊಳೆ ಯೋಜನೆಗೆ 17 ಸಾವಿರ ಕೋಟಿ ಅನುದಾನ ನೀಡಿರುವ ಸರ್ಕಾರಗಳು ಭದ್ರಾ ಮೇಲ್ದಂಡೆ ಯೋಜನೆ ಆರಂಭಗೊಂಡು ಎರಡು ದಶಕ ಕಳೆದರೂ ಕೇವಲ 10 ಸಾವಿರ ರು. ಅನುದಾನ ನೀಡಿರುವುದು ವಿಪರ್ಯಾಸ. ಪ್ರಭಲ ರಾಜಕೀಯ ಒತ್ತಡದ ಕೊರತೆ ಯೋಜನೆಗೆ ಕುಂಟುತ್ತಾ ಸಾಗಲು ಕಾರಣವಾಗಿದೆ.ತಾಲೂಕು ಬರಕ್ಕೆ ತುತ್ತಾಗುತ್ತಿದ್ದರೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ತಾರ್ಕಿಕ ಅಂತ್ಯ ದೊರೆತಿಲ್ಲ. ತಮಿಳುನಾಡು ಮಾದರಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರುಣಿಸಿ ಜಿಲ್ಲೆಯನ್ನು ಸಮಗ್ರ ನೀರಾವರಿ ಜಿಲ್ಲೆಯಾಗಿಸಬಹುದು ಎಂದರು.ಇದೇ ವೇಳೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಹಿರಿಯ ಹೋರಾಟಗಾರ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸಿದ್ದಯ್ಯನ ಕೋಟೆ ಬಸವಲಿಂಗ ಸ್ವಾಮೀಜಿ, ಪಿಎಸ್ಐ ಮಹೇಶ್ ಹೊಸಪೇಟೆ, ಸಾಮಾಜಿಕ ಪರಿವರ್ತನಾ ವೇದಿಕೆಯ ಪ್ರದಾನ ಕಾರ್ಯದರ್ಶಿ ಮರ್ಲಹಳ್ಳಿ ಪರಮೇಶ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಪ್ರಕಾಶ, ಸಮಾಜವಾದಿ ಪಕ್ಷದ ಅಧ್ಯಕ್ಷ ಜಿ.ಎ.ಜಯಣ್ಣ, ಹಿರಿಯ ವಕೀಲ ರಾಜಶೇಖರ ನಾಯಕ, ಕೊಂಡಾಪುರ ಪರಮೇಶ, ಬೇಡರೆಡ್ಡಿ ಹಳ್ಳಿ ಪ್ರಶಾಂತ ರೆಡ್ಡಿ, ಕಲಾವಿದ ಡಿ.ಓ.ಮೊರಾರ್ಜಿ, ಹಿರಿಯ ಮುಖಂಡ ಚಂದ್ರಶೇಖರ ಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್, ಕಸಾಪ ಅಧ್ಯಕ್ಷ ಜಿಂಕಾ ಶ್ರೀನಿವಾಸ ,ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ವಿ.ಮಾರನಾಯಕ, ರೈತ ಸಂಘದ ತಾಲೂಕು ಅಧ್ಯಕ್ಷ ಸೂರಮ್ಮನಹಳ್ಳಿ ರಾಜಣ್ಣ ಇದ್ದರು.