ಸಾರಾಂಶ
ಹಾವೇರಿ: ಹಾನಗಲ್ಲ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ನಡೆದಿರುವ ಪ್ರಕರಣವನ್ನು ಆಯೋಗ ಗಂಭಿರವಾಗಿ ಪರಿಗಣಿಸಿದೆ. ಪ್ರಕರಣದಲ್ಲಿ ಯಾರೆಲ್ಲ ಇದ್ದಾರೆಂದು ಕಂಡುಹಿಡಿಯಲಾಗುವುದು ಹಾಗೂ ಸಂತ್ರಸ್ತ ಮಗುವಿಗೆ ನ್ಯಾಯ ಒದಗಿಸಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ತಿಳಿಸಿದರು.ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಬ್ಯಾಗವಾದಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಂದ ಆರೋಪಿ ಲಕ್ಕವ್ವಳ ಕುರಿತು ಮಾಹಿತಿ ಪಡೆಯಲಾಗಿದೆ. ಪ್ರಕರಣ ಬೆಳಕಿಗೆ ಬರಲು ಕಾರಣರಾದ ಗ್ರಾಮಸ್ಥರನ್ನು ಅಭಿನಂದಿಸಬೇಕು ಎಂದರು.ಲಕ್ಕವ್ವ ಮದುವೆಯಾದ ಮಹಿಳೆಯರಿಗೆ ಕೆಲಸ ಕೊಡಿಸುವ ಆಮಿಷ ತೋರಿಸಿ ಕರೆದುಕೊಂಡು ಬಂದು ಬೇರೆ ಮದುವೆಗೆ ಒತ್ತಾಯಿಸುತ್ತಿದ್ದಳು ಎಂದು ತಿಳಿದುಬಂದಿದೆ. ಬಾಲಕಿಯರ ಬಾಲಮಂದಿರದಲ್ಲಿರುವ ಸಂತ್ರಸ್ತ ಬಾಲಕಿಯನ್ನು ಭೇಟಿ ಮಾಡಿ ಲಕ್ಕವ್ವನ ಕುರಿತು ಮಾಹಿತಿ ಪಡೆಲಾಗಿದ್ದು, ಮಗುವಿಗೆ ಚಿತ್ರಹಿಂಸೆ ನೀಡಿದ್ದಾಳೆ. ಕಡಿಮೆ ಊಟ ನೀಡಿದ್ದು, ತಲೆ ಬೋಳಿಸಿದ್ದಾಗಿ ಹಾಗೂ ರಾತ್ರಿ ಸಮಯದಲ್ಲಿ ಅಪರಿಚಿತರು ಮನೆಗೆ ಬಂದುಹೋಗುತ್ತಿದ್ದ ಬಗ್ಗೆ ಬಾಲಕಿ ಮಾಹಿತಿ ನೀಡಿದ್ದಾಳೆ.
ಮಗುವಿನ ತಾಯಿಯನ್ನು ಭೇಟಿ ಮಾಡಿ ಮಾತಾಡಿಸಿದಾಗ, ತಾನು ಹಾಗೂ ಲಕ್ಕವ್ವ ಸ್ನೇಹಿತೆಯರಾಗಿದ್ದು, ನಾನು ಎರಡು ಮಕ್ಕಳೊಂದಿಗೆ ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ಮಲಗುತ್ತಿದ್ದೆ. ಮಗಳನ್ನು ಶಾಲೆಗೆ ಸೇರಿಸುವುದಾಗಿ ಕರೆದುಕೊಂಡು ಬಂದಿದ್ದಳು ಎಂದು ಹೇಳಿದಳು. ಈ ಎಲ್ಲ ವಿಷಯಗಳನ್ನು ಗಮನಿಸಲಾಗಿದೆ. ಸಂಶಯಾಸ್ಪದವಾಗಿದೆ. ಮಕ್ಕಳ ಮಾರಾಟ ಅಥವಾ ಬೇರೆ ತಿರುವು ಪಡೆಯುವ ಸಾಧ್ಯತೆ ಇದೆ. ಪ್ರಕರಣ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದ್ದು, ಯಾವುದೇ ಒತ್ತಡಕ್ಕೆ ಒಳಗಾಗದೆ ಈ ಜಾಲ ಭೇದಿಸಿ ಮಗುವಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ ಎಂದರು.ಈ ಪ್ರಕರಣದಲ್ಲಿ ಲಕ್ಕವ್ವನ ಮಗಳು ಹಾಗೂ ತಮ್ಮನ ಹೆಸರು ಕೇಳಿ ಬಂದಿದ್ದು, ಚಾರ್ಜ್‌ಶೀಟ್‌ನಲ್ಲಿ ಹೆಸರು ಸೇರಿಸಲು, ಅಗತ್ಯ ಬಿದ್ದರೆ ಎಫ್ಐಆರ್ ದಾಖಲಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ.ಸಂತ್ರಸ್ತ ಬಾಲಕಿ ಹಾಗೂ ಅವಳ ತಾಯಿ ಜತೆಗಿರುವ ಇನ್ನೋರ್ವ ಬಾಲಕಿಯನ್ನು ಬಾಲಕಿಯರ ಬಾಲ ಮಂದಿರಕ್ಕೆ ದಾಖಲಿಸಿ ಅವರಿಗೆ ಅಗತ್ಯ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ. ಇಂತಹ ಪ್ರಕರಣ ಮುಚ್ಚಿ ಹಾಕುವುದು ಕಂಡುಬಂದರೆ ಆಯೋಗದ ಗಮನಕ್ಕೆ ತರಬಹುದು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶೈಲಜಾ ಕುರುಹಟ್ಟಿ ಉಪಸ್ಥಿತರಿದ್ದರು. ಸಮಾಜಘಾತುಕರಿಗೆ ಕಠಿಣ ಶಿಕ್ಷೆಯಾಗಲಿ: ಶಾಸಕ ಮಾನೆಹಾನಗಲ್ಲ: ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಮಹಿಳೆಯರ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಮಟ್ಟ ಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇಂಥ ಸಮಾಜಘಾತುಕ ಶಕ್ತಿಗಳಿಗೆ ಕಠಿಣ ಶಿಕ್ಷೆ ಆಗಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಇಂಥ ಘಟನೆಗಳನ್ನು ಮಟ್ಟ ಹಾಕುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಒಳಗೊಳಗೆ ಘಟನೆ ನಡೆದಾಗ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮಗಳಿಗೆ ಮಾಹಿತಿ ಇರುವುದಿಲ್ಲ. ಗ್ರಾಮದಲ್ಲಿ ಏನಾದರೂ ಸಂಶಯಾಸ್ಪದ ಸಂಗತಿಗಳಿದ್ದರೆ, ಇಂಥ ಘಟನೆಗಳು ನಡೆಯುತ್ತಿದ್ದರೆ ಸಾರ್ವಜನಿಕರು ತಕ್ಷಣವೇ ಮಾಹಿತಿ ನೀಡಿದರೆ ಖಂಡಿತವಾಗಿ ಕಡಿವಾಣ ಹಾಕಬಹುದು ಎಂದರು.ಬ್ಯಾಗವಾದಿ ಗ್ರಾಮದಲ್ಲಿ 2 ಬಾರಿ ಕಾರ್ಯಕ್ರಮಗಳಲ್ಲಿ ತಾವು ಪಾಲ್ಗೊಂಡ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು, ಮುಖಂಡರು ಇದ್ದರೂ ಇಂಥ ಚಟುವಟಿಕೆಗಳ ಬಗ್ಗೆ ಚರ್ಚಿಸಲಿಲ್ಲ, ಮಾಹಿತಿ ನೀಡಲಿಲ್ಲ. ಮಾಹಿತಿ ಇದ್ದರೂ ತಿಳಿಸಲಿಲ್ಲವೋ ಎನ್ನುವುದು ಮಾತ್ರ ಗೊತ್ತಿಲ್ಲ ಎಂದರು.ಜಿಲ್ಲೆಗೆ ಸಚಿವ ಸ್ಥಾನ ಸಿಗಲಿದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸಿ, ಹೈಕಮಾಂಡ್‌ಗೆ ಮನವರಿಕೆ ಮಾಡಲಾಗಿದೆ. ಜಿಲ್ಲೆಯ ಎಲ್ಲ 6 ಸ್ಥಾನಗಳನ್ನೂ ಕಾಂಗ್ರೆಸ್ ಗೆದ್ದುಕೊಂಡಿದೆ. ಹಾಗಾಗಿ ಸ್ಥಳೀಯವಾಗಿ ಪ್ರಾತಿನಿಧ್ಯ ಸಿಗಬೇಕು ಎನ್ನುವ ಬೇಡಿಕೆ ಇದೆ. 6 ಜನ ಶಾಸಕರ ಪೈಕಿ ಯಾರನ್ನಾದರೂ ಸಚಿವರನ್ನಾಗಿ ಮಾಡಿ ಎಂಬ ಮನವಿಗೆ ಸ್ಪಂದನೆ ಸಿಕ್ಕಿದ್ದು, ಮುಂದೆ ಅವಕಾಶ ಸಿಗುವ ವಿಶ್ವಾಸವಿದೆ ಎಂದರು.
ಅನುದಾನದ ಬೇಡಿಕೆ ಹೆಚ್ಚಿದೆ. ಬೇಡಿಕೆಯ ಪ್ರಮಾಣಕ್ಕೆ ತಕ್ಕಂತೆ ಆದಾಯ ಹೆಚ್ಚುತ್ತಿಲ್ಲ. ಹಾಗಾಗಿ ಅನುದಾನದ ಕೊರತೆ ಉಂಟಾಗಿದೆ. ತಾಲೂಕಿಗೆ ಕಳೆದ ವರ್ಷ ₹400 ಕೋಟಿ ಅನುದಾನ ಸಿಕ್ಕಿದ್ದು, ಈ ವರ್ಷ ಮುಖ್ಯಮಂತ್ರಿಗಳ ವಿಶೇಷ ಅನುದಾನ ₹50 ಕೋಟಿ, ನೀರಾವರಿಗೆ ₹50 ಕೋಟಿ, ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ₹30 ಕೋಟಿ ಅನುದಾನಕ್ಕೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ ಎಂದರು.