ಸಾರಾಂಶ
ಸಿದ್ದಾಪುರ: ಸಮಾಜದ ಮತಗಳನ್ನು ಪಡೆದು ಆಯ್ಕೆಯಾದ ಸಮಾಜದ ರಾಜಕಾರಣಿಗಳು ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಆದರೆ ಹೊಂದಾಣಿಕೆ ರಾಜಕಾರಣದಿಂದ ನಮಗೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ. ನಮ್ಮ ಸಮುದಾಯ ಇದರ ಕುರಿತು ಚಿಂತನೆ ಮಾಡಬೇಕಿದೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಬಾಲ ಭವನದಲ್ಲಿ ಹಮ್ಮಿಕೊಂಡ ಚಿಂತನ ಮಂಥನ ಶಿಬಿರದಲ್ಲಿ ಅವರು ಈಡಿಗ ಸಮುದಾಯದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ರಾಜಕೀಯದ ಬಗ್ಗೆ ಮಾತನಾಡಿ, ಇತರೆ ಸಮಾಜದವರು ಬೇರೆ ಬೇರೆ ಪಕ್ಷದಲ್ಲಿದ್ದರೂ ಸಮಾಜದ ಸ್ವಾಮೀಜಿಗಳು ಸಭೆ ಕರೆದರೆ ಒಟ್ಟಾಗಿ ಹಕ್ಕೊತ್ತಾಯ ಮಾಡುತ್ತಾರೆ. ಆದರೆ ಈಡಿಗ ಸಮಾಜದವರಿಗೆ ಒಗ್ಗಟ್ಟು ಇಲ್ಲದಂತಾಗಿದೆ. ನಾವು ಬೇರೆ ಸಮುದಾಯವನ್ನು ದೂರಲಿಕ್ಕಾಗಿ ಅಲ್ಲ, ನಮ್ಮ ಸಮಾಜದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಒಗ್ಗೂಡಬೇಕಿದೆ. ನಮ್ಮ ಸಮಾಜದ ಸ್ವಾಭಿಮಾನದ ಬದುಕಿಗಾಗಿ ನಾನು ಹೋರಾಡುತ್ತಿದ್ದೇನೆ. ಅದೇ ನನ್ನ ಕನಸು. ಯಾವ ವ್ಯಕ್ತಿಯು ರಾಜಕೀಯದಲ್ಲಿ ಶಾಶ್ವತ ಅಲ್ಲ ಬದಲಾವಣೆ ಜಗದ ನಿಯಮ ಎಂದರು.ಶಿರಸಿ - ಸಿದ್ದಾಪುರ, ಹೊನ್ನಾವರ - ಭಟ್ಕಳ, ಕುಮಟಾ ಕ್ಷೇತ್ರದಲ್ಲಿ ನಾವು ಶಾಸಕರನ್ನು ಆರಿಸಬಹುದು. ಆದರೆ ಮೇಲ್ವರ್ಗದವರ ರಾಜಕಾರಣಿಗಳ ಷಡ್ಯಂತ್ರದಿಂದ ನಮ್ಮ ಸಮುದಾಯದವರ ಸ್ವಾರ್ಥದಿಂದ ಇದು ಸಾಧ್ಯವಾಗುತ್ತಿಲ್ಲ. ಈಡಿಗ ಸಮಾಜ ಛಿದ್ರ ಛಿದ್ರವಾಗಿದೆ. ನಮ್ಮನ್ನು ಕತ್ತಲಲ್ಲಿ ಇಟ್ಟಿದ್ದಾರೆ. ನಾರಾಯಣ ಗುರುಗಳು ಹೇಳಿದಂತೆ ಜಾತಿ ಅಹಂಕಾರ ಇರಬಾರದು. ಜಾತಿ ಅಭಿಮಾನ ನಿಮ್ಮಲ್ಲಿರಬೇಕು. ಆಡಳಿತ ಪಕ್ಷದವರ ತಪ್ಪುಗಳನ್ನು ವಿರೋಧ ಪಕ್ಷದವರು ಎತ್ತಿ ತೋರಿಸಬೇಕು. ಆದರೆ ಉತ್ತರ ಕನ್ನಡದಲ್ಲಿ ಅಡ್ಜಸ್ಟ್ಮೆಂಟ್ ರಾಜಕಾರಣದ ರಾಜಕೀಯ ನಡೆಯುತ್ತಿದೆ. ಅಂಬೇಡ್ಕರ್ ನೀಡಿರುವಂತಹ ಸಂವಿಧಾನವನ್ನು ಮುಂದಿಟ್ಟು ಸಮಾಜವನ್ನು ಕಟ್ಟೋಣ. ರಾಜಕಾರಣವನ್ನು ಮಾಡೋಣ ಎಂದು ಕರೆ ನೀಡಿದರು.
ಮಾಜಿ ಶಾಸಕ ಜೆ.ಡಿ. ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು. ಸಮಾಜ ಅಭಿವೃದ್ಧಿ ಸಮಾಜ ಬಾಂಧವರು ಕೈಜೋಡಿಸಬೇಕು. ರಾಜಕೀಯ ಶಕ್ತಿ ಬೇಕೆಂದಾರೆ ಒಗ್ಗಟ್ಟಾಗಿ ಸಹಕರಿಸಬೇಕು. ನಮ್ಮ ತೀರ್ಮಾನಗಳು ಇನ್ನೊಂದು ಸಮಾಜಕ್ಕೆ ತೊಂದರೆ ಯಾಗಬಾರದು.ಸಂಘಟನೆಯ ಬಲಿಷ್ಠ ವಾಗಬೇಕಾದರೆ ಕಾರ್ಯಕರ್ತರು ಬಲಿಷ್ಠ ವಾಗಿರಬೇಕು ಎಂದರು.ಸಾಮಾಜಿಕ ಧುರೀಣ ವಸಂತ ನಾಯ್ಕ ಮನ್ಮನೆ ಮಾತನಾಡಿ, ಮೇಲ್ವರ್ಗದವರ ತುಳಿತಕ್ಕೆ ನಾವು ಒಳಗಾಗಿದ್ದೇವೆ. ಅಡ್ಜಸ್ಟ್ಮೆಂಟ್ ರಾಜಕೀಯ ಹೋಗದಿದ್ದರೆ ನಮ್ಮ ಸಮಾಜ ಉದ್ಧಾರವಾಗುವುದಿಲ್ಲ. ಅನ್ಯಾಯವಾದಾಗ ಎಲ್ಲರ ಧ್ವನಿಯಾಗಿ ಸಂಘಟನೆಯ ಮೂಲಕ ಹೋರಾಡಬೇಕು. ನಮ್ಮವರು ಅಧಿಕಾರ ಸಿಕ್ಕಾಗ ಬೆಂಬಲಿಸಿದವರನ್ನು ಮರೆಯುತ್ತಾರೆ. ನಮ್ಮ ಸಮಾಜವನ್ನು ಗಟ್ಟಿ ಮಾಡಿ ಎಲ್ಲ ಸಮಾಜಕ್ಕೆ ನೆರವಾಗೋಣ. ಜೊತೆಯಲ್ಲಿ ಇದ್ದವರನ್ನು ನಾಯಕರಾಗಿ ಬೆಳಸಬೇಕು ಅಂದಾಗ ನಾವು ಗಟ್ಟಿ ನಾಯಕರಾಗುತ್ತೆವೆ. ಸ್ವಾರ್ಥಕ್ಕಾಗಿ ಬದುಕಬಾರದು.ಶಾಸಕರು ಅಡ್ಜಸ್ಟ್ಮೆಂಟ್ ರಾಜಕೀಯ ಬಿಟ್ಟು ಸಮಾಜದ ಪರವಾಗಿ ಚಿಂತನೆ ಮಾಡಬೇಕು. ನಮ್ಮ ಸಮಾಜ ಒಟ್ಟಾದರೆ ನಾವು ಜಿಲ್ಲೆಯನ್ನು ಆಳಬಹುದು ಎಂದರು.
ಸಮಾಜದ ಪ್ರಮುಖ ಕೆ. ಜಿ. ಪ್ರಶಾಂತ ಸಾಗರ ಮಾತನಾಡಿದರು. ಎಂ.ಕೆ. ನಾಯ್ಕ ಕಡಕೇರಿ ಸ್ವಾಗತಿಸಿದರು. ಜಿಲ್ಲಾ ಅಧ್ಯಕ್ಷ ದೇವರಾಜ ಮದರವಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ದಿವಾಕರ ನಾಯ್ಕ ಸಂಪಖಂಡ ನಿರೂಪಿಸಿ, ವಂದಿಸಿದರು.