ಕೆಲವು ದಿನಗಳ ಹಿಂದೆ ನ್ಯಾಯಾಧೀಶರು ಭೇಟಿ ನೀಡಿದ್ದಾಗ ಸ್ವಚ್ಛತೆ, ಸೌಲಭ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿ ನಿಲಯದ ಮೇಲ್ವಿಚಾರಕರಿಗೆ ನೋಟಿಸ್ ಜಾರಿ ಮಾಡಿದ್ದರು. ನಂತರ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳು ನಿಲಯಕ್ಕೆ ಭೇಟಿ ನೀಡಿ ಕುಂದು ಕೊರತೆಗಳನ್ನು ಪರಿಶೀಲಿಸಿ ಆಗತ್ಯ ಕ್ರಮ ಕೈಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಚನ್ನಪಿಳ್ಳೆಕೊಪ್ಪಲು ಮೊರಾರ್ಜಿ ವಸತಿ ಶಾಲೆಗೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಮಹೇಂದ್ರ ಅವರು ಎರಡನೇ ಬಾರಿಗೆ ಕಾನೂನು ಸೇವಾ ಸಮಿತಿ ತಂಡದೊಂದಿಗೆ ಭೇಟಿ ನೀಡಿ ವಸತಿ ನಿಲಯದಲ್ಲಿ ಆಗಿರುವ ಬದಲಾವಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಲವು ದಿನಗಳ ಹಿಂದೆ ನ್ಯಾಯಾಧೀಶರು ಭೇಟಿ ನೀಡಿದ್ದಾಗ ಸ್ವಚ್ಛತೆ, ಸೌಲಭ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿ ನಿಲಯದ ಮೇಲ್ವಿಚಾರಕರಿಗೆ ನೋಟಿಸ್ ಜಾರಿ ಮಾಡಿದ್ದರು. ನಂತರ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳು ನಿಲಯಕ್ಕೆ ಭೇಟಿ ನೀಡಿ ಕುಂದು ಕೊರತೆಗಳನ್ನು ಪರಿಶೀಲಿಸಿ ಆಗತ್ಯ ಕ್ರಮ ಕೈಗೊಂಡಿದ್ದರು.

ಅಡುಗೆಮನೆ ಹಾಗೂ ಶೌಚಾಲಯಗಳ ಶುಚಿತ್ವ, ವಸತಿ ಗೃಹ ಹಾಗೂ ಅಡುಗೆ ಮನೆ ಹಿಂಭಾಗ ಕೊಳಚೆ ನೀರು ನಿಂತಿರುವುದನ್ನು ತೆರವು, ಬಾಲಕಿಯರ ವಸತಿ ಗೃಹದ ಕಿಟಕಿಗಳಿಗೆ ಕರ್ಟನ್ ಅಳವಡಿಕೆ, ಕೆಟ್ಟುನಿಂತ ಫ್ಯಾನ್ ಹಾಗೂ ದೀಪಗಳನ್ನು ದುರಸ್ತಿಗೊಳಿಸಿ ಅಳವಡಿಸಿರುವುದು ಸೇರಿದಂತೆ ಪ್ರಾಂಶುಪಾಲರು ಹಾಗೂ ಶಿಕ್ಷಕರು ವಸತಿ ಶಾಲೆಯಲ್ಲಿಯೇ ಇದ್ದು ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷೆಯ ಅಂತಿಮ ಸಿದ್ಧತೆ ಪಾಠ ಪ್ರವಚನಗಳನ್ನು ಮಾಡುತ್ತಿರುವ ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿ ಇದೇ ರೀತಿ ಮುಂದೆ ನೋಡಿಕೊಳ್ಳುವಂತೆ ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಮಹೇಂದ್ರ ಮಾತನಾಡಿ, ಶಿಕ್ಷಣ ಪಡೆಯಲು ತಂದೆ ತಾಯಿಯಿಂದ ದೂರ ಬಂದು ವಸತಿ ನಿಲಯದಲ್ಲಿರುವ ಮಕ್ಕಳಿಗೆ ಶುಚಿತ್ವದ ಆಹಾರದ ಜೊತೆಗೆ ಪ್ರೀತಿಯಿಂದ ನೋಡಿಕೊಳ್ಳಬೇಕು. ಶಾಲೆಯ ಇಂದಿನ ಪರಿಸ್ಥಿತಿ ಸ್ವಲ್ಪ ಸಮಾಧಾನ ತಂದಿದೆ ಎಂದರು.

ಹೆಚ್ಚಿನ ಶುಚಿತ್ವ ಹಾಗೂ ಕಾರ್ಯ ವೈಖರಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸುಧಾರಿಸಬೇಕು. ತಾಲೂಕು ಕಾನೂನು ಸೇವಾ ಸಮಿತಿ ಯಾವಾಗ ಬೇಕಾದರೂ ಭೇಟಿ ನೀಡಿ ನಿಮ್ಮಗಳ ವಿರುದ್ಧ ಕ್ರಮ ಕೈಗೊಳ್ಳಬಹುದು. ಮುಂದಿನ ಕ್ರಮಕ್ಕೆ ಆಸ್ಪದ ನೀಡಬೇಡಿ ಎಂದು ಎಚ್ಚರಿಕೆ ನೀಡಿದರು.