ಇತ್ತೀಚೆಗೆ ಕೊಲೆಯಾದ ಸುದರ್ಶನ ಅವರ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗುವವರೆಗೆ ನಾವು ಸುಮ್ಮನೆ ಇರುವುದಿಲ್ಲ ಎಂದು ಮಾಜಿ ಸಂಸದ ಭಗವಂತ ಖೂಬಾ ನೊಂದ ಕುಟುಂಬಕ್ಕೆ ಭರವಸೆ ನೀಡಿದ್ದಾರೆ. ಅಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾಲ್ಕಿಗೆ ಭೇಟಿ ನೀಡಿ ಈ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಇತ್ತೀಚೆಗೆ ಕೊಲೆಯಾದ ಸುದರ್ಶನ ಅವರ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗುವವರೆಗೆ ನಾವು ಸುಮ್ಮನೆ ಇರುವುದಿಲ್ಲ ಎಂದು ಮಾಜಿ ಸಂಸದ ಭಗವಂತ ಖೂಬಾ ನೊಂದ ಕುಟುಂಬಕ್ಕೆ ಭರವಸೆ ನೀಡಿದ್ದಾರೆ. ಅಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾಲ್ಕಿಗೆ ಭೇಟಿ ನೀಡಿ ಈ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.

ಭಾಲ್ಕಿ ಪಟ್ಟಣದ ಕೊಲೆಯಾದ ಸುದರ್ಶನ ರಟ್ಕಲೆ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಅವರು, ಮೃತರ ಪೋಷಕರು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿ, ಸುದರ್ಶನ ಸಾವಿಗೆ ಖಂಡಿತ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕ ಈಶ್ವರ ಖಂಡ್ರೆ ಅವರು ಈ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಖೂಬಾ, ‘ಈಗಾಗಲೇ ಸಚಿವರು ಇದನ್ನೊಂದು ಆತ್ಮಹತ್ಯೆ ಎಂದು ಹೇಳಿಕೆ ನೀಡಿದ್ದರು. ಇತ್ತ ಅವರ ಪುತ್ರ (ಸಂಸದರು) ಇದೊಂದು ಅಕಾಲಿಕ ನಿಧನ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ತಂದೆ-ಮಗ ಸೇರಿ ಆರೋಪಿಗಳನ್ನು ರಕ್ಷಿಸಲು ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಆದರೆ ನಮ್ಮ ಪಕ್ಷ ಮತ್ತು ನಾನು ಈ ಅನ್ಯಾಯವನ್ನು ಸಹಿಸುವುದಿಲ್ಲ. ಸುದರ್ಶನ ಕುಟುಂಬಕ್ಕೆ ನ್ಯಾಯ ಕೊಡಿಸಿಯೇ ತೀರುತ್ತೇವೆ ಎಂದು ಕಾರ್ಯಕರ್ತರು ಹಾಗೂ ಮೃತರ ಸ್ನೇಹಿತರಿಗೆ ಅಭಯ ನೀಡಿದರು.

ಈಶ್ವರ ಖಂಡ್ರೆ ಅವರು ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರೂ, ಅವರ ಸ್ವಕ್ಷೇತ್ರದಲ್ಲೇ ಲಿಂಗಾಯತ ಯುವಕನ ಕೊಲೆಯಾಗಿದೆ. ಆದರೂ ಇದುವರೆಗೆ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿಲ್ಲ. ಇವರೆಂಥ ಲಿಂಗಾಯತ ನಾಯಕ? ಎಂದು ಪ್ರಶ್ನಿಸಿದರು. ಅಲ್ಲದೆ, ಪೊಲೀಸ್ ಇಲಾಖೆಯು ಸಚಿವರ ಒತ್ತಡಕ್ಕೆ ಮಣಿದು ತನಿಖೆಯಲ್ಲಿ ಲೋಪ ಎಸಗಿದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಳಿಕ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ನಗರದ ವೃತ್ತ ನಿರೀಕ್ಷಕರ (ಸಿಪಿಐ) ಕಚೇರಿಗೆ ತೆರಳಿ ಅಧಿಕಾರಿಗಳನ್ನು ಭೇಟಿಯಾದರು. ಪ್ರಕರಣದ ತನಿಖೆ ಯನ್ನು ಪ್ರಾಮಾಣಿಕವಾಗಿ ನಡೆಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ಸಾಕ್ಷಿದಾರರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಮುಖಂಡರಾದ ಗೋವಿಂದರಾವ್ ಬಿರಾದಾರ್, ಕೆ.ಡಿ. ಗಣೇಶ್, ಸೂರಜ್ ಮಜಗೆ, ಜೈರಾಜ್ ಕೊಳ್ಳಾ, ಪಾಂಡುರಂಗ ಕನ್ಸೆ, ಸಂಜೀವ್ ಶಿಂಧೆ, ದೀಪಕ್ ಶಿಂಧೆ, ಸಂತೋಷ್ ಹಲಸಿ, ಅಮರ್ ಜೋಳದಾಪಕ, ಸಂಗಮೇಶ ಭಾತಂಬ್ರಾ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.