ಕನ್ನಡಪ್ರಭ ವಾರ್ತೆ ಬೆಂಗಳೂರು
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರು ಗುರುವಾರ ಕಾರ್ಯಕ್ರಮವೊಂದರಲ್ಲಿ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಚೇತರಿಸಿಕೊಂಡಿದ್ದಾರೆ.ಬೆಂಗಳೂರಿನ ಕೊಂಡಜ್ಜಿ ಸಭಾಭವನದಲ್ಲಿ ನಡೆಯುತ್ತಿದ್ದ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆ ಅವರು ಎರಡು ಬಾರಿ ವಾಂತಿ ಮಾಡಿಕೊಂಡರು. ಬಳಿಕ ಹಠಾತ್ತನೆ ಕುಸಿದು ಬಿದ್ದಿದ್ದು, ತಕ್ಷಣ ಸ್ಥಳದಲ್ಲೇ ಇದ್ದ ಡಾ.ರಮೇಶ್ ಬಾಬು ಎಂಬ ವೈದ್ಯರು ಸಿಪಿಆರ್ ನಡೆಸಿದರು.
ಬಳಿಕ ತುರ್ತಾಗಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಕಾರಿನಲ್ಲೇ ಸಂತೋಷ್ ಹೆಗ್ಡೆ ಅವರನ್ನು ಮಿಲ್ಲರ್ಸ್ ರಸ್ತೆಯ ಮಣಿಪಾಲ್ (ವಿಕ್ರಂ) ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಯು.ಟಿ. ಖಾದರ್ ಅವರೂ ಸಂತೋಷ್ ಹೆಗ್ಡೆ ಅವರ ಜತೆಯಲ್ಲೇ ಆಸ್ಪತ್ರೆಗೆ ತೆರಳಿದ್ದರು.ಲಘು ಹೃದಯಾಘಾತ ಶಂಕೆ:
ಸಂತೋಷ್ ಹೆಗ್ಡೆ ಅವರು ಕುಸಿದುಬೀಳುವ ಮೊದಲು ವಾಂತಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಆತಂಕ ಉಂಟಾಗಿತ್ತು. ಸ್ಥಳದಲ್ಲಿ ಸಿಪಿಆರ್ ಮಾಡಿದ್ದ ಡಾ.ರಮೇಶ್ ಬಾಬು ಅವರು ಮಾತನಾಡಿ, ಲಘು ಹೃದಯಾಘಾತ ಆಗಿರುವ ಸಾಧ್ಯತೆಯಿದೆ. ಸಿಪಿಆರ್ ಮಾಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಂಡಿದ್ದಾರೆ ಎಂದರು.
ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ.ಖಾದರ್, ‘ಸಂತೋಷ್ ಹೆಗ್ಡೆ ಅವರು ಭಾಷಣ ಮಾಡಿ ಕುಳಿತುಕೊಂಡು ಎರಡು ಬಾರಿ ವಾಂತಿ ಮಾಡಿಕೊಂಡಿದ್ದರು. ಬಳಿಕ ವೇದಿಕೆ ಮೇಲೆಯೇ ಕುಸಿದು ಬಿದ್ದರು. ಆ್ಯಂಬುಲೆನ್ಸ್ ಇಲ್ಲದ ಕಾರಣ ನನ್ನ ವಾಹನದಲ್ಲೇ ಆಸ್ಪತ್ರೆಗೆ ಕರೆ ತಂದೆವು. ಏನಾಗಿತ್ತು ಎಂಬುದು ಗೊತ್ತಿಲ್ಲ. ಈಗ ಆರಾಮಾಗಿದ್ದಾರೆ ಮಾತನಾಡುತ್ತಿದ್ದಾರೆ ಎಂದರು.
ಆಸ್ಪತ್ರೆಯಿಂದ ಡಿಸ್ಚಾರ್ಜ್:ಆಸ್ಪತ್ರೆಗೆ ಹೆಗ್ಡೆ ಅವರ ಪತ್ನಿ ಹಾಗೂ ಪುತ್ರ ಬಂದು ಆರೋಗ್ಯ ವಿಚಾರಿಸಿದರು. ಹೆಗ್ಡೆ ಅವರು ಸಂಪೂರ್ಣ ಚೇತರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಸಂಜೆಯೇ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆ. ಆದರೆ, ಅವರಿಗೆ ಏನು ಸಮಸ್ಯೆಯಾಗಿತ್ತು? ಯಾವ ಚಿಕಿತ್ಸೆ ನೀಡಲಾಗಿದೆ ಎಂಬುದನ್ನು ಹೇಳಲು ಆಸ್ಪತ್ರೆಯವರು ನಿರಾಕರಿಸಿದರು.